ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Friday, 13 February 2009
ಜೋಡಿ ಗೀತೆಗಳಲ್ಲೊಂದು- ಅಕ್ಕರೆ ಹರಿದಾಗ...
ಸಂಜೀಗಿ ಮಲ್ಲೀಗಿ ಅರಳ್ಯಾವ ಬೆಳ್ಳಾಗೆ
ಈಗೆಲ್ಲಿಗ್ಹೊಂಟ್ಯೋ ನನರಾಯ- ನೋಡಲ್ಲಿ-
ಮಿಣುಕಾಡೊ ಕಣ್ಣು ನಗತಾವ
ಹೀಂಗ್ಹೀಂಗೆ ಬಂದಿದ್ದೆ, ಹಾಂಗ್ಹಾಂಗೇ ಹೊಂಟೆದ್ದೆ
ಬ್ಯಾಸರಿಕೆ ಯಾಕೋ ನನರಾಯ- ಒಂದಾರೆ-
ತೋಳ್ದಿಂಬಿಗೊರಗಿ ನೋಡೆಂದೆ
ದಿನವೆಲ್ಲ ಓಡ್ಯಾಡಿ ದಣಿವಾಗಿ ಬಂದೀಯೆ
ಒಂದೀಟು ಅಡ್ಡಾಗು ನನರಾಯ- ನಿಂಗಿಂಥ-
ಆತುರದ ಕಾರ್ಯ ಬ್ಯಾಡೇಳು
ಕಾಲಿಗೆ ನೀರ್ಕೊಡುವೆ, ಕೈಯೊಳಗೆ ಕೈಯಿಡುವೆ
ಅಕ್ಕರೆ ಮಳೆಗರೆವೆ ನನರಾಯ- ಕಣ್ಣಲ್ಲಿ-
ಕಣ್ಣಿರಿಸಿ ನಗಬಾರೊ ಪ್ರೀತೀಲೆ
ಆಸರಿಗೆ ಎಳನೀರ ಆರಿಸಿ ಅತ್ತಿಡುವೆ
ಇನಿಮಾವು ಉಣಲಿಡುವೆ ನನರಾಯ- ನೀನಿಂದು-
ತಾಂಬೂಲ ರಾಗದ ಸವಿನೋಡೊ
ಗೋಧೂಳಿ ಕೆಂಬಣ್ಣ ಕೆನ್ನೀರ ಮಾಡಿಟ್ಟು
ದಿಟ್ಟಿಯ ತೆಗೆಯುವೆ ನನರಾಯ- ಬಾ ಇಲ್ಲಿ-
ಅತ್ತಿತ್ತ ನೋಡೋ ಹಂಗ್ಯಾಕೋ
ಹಚ್ಚಾನೆ ಹಾಸಿರುವೆ ಹಚ್ಚಾಡ ನಿಂಗಾಗಿ
ಅಚ್ಚು-ಮೆಚ್ಚಿನಲೇ ನನರಾಯ- ನೀನೀಗ-
ಮೆಚ್ಚುಗೆ ಬೀರಿ ಒರಗೊಮ್ಮೆ
ಅರುಣನ ಹೊಂಬಣ್ಣ ರಂಗನ್ನೆ ಹೊದೆಸುವೆ
ತಂಗಾಳಿ ತೊಟ್ಟಿಲಲಿ ನನರಾಯ- ನಿನ್ನನ್ನು-
ಜೋಗುಳ ಹಾಡಿ ಮಲಗಿಸುವೆ
ಮೊಗ್ಗೀಗೆ ಜೀವಾದೆ ಕಣ್ಣೀನ ಹೂವಾದೆ
ಹಸಿರಿಗೆ ನೀ ಉಸಿರು ನನರಾಯ- ಬೆಳಕಾಗಿ-
ಬೇಕಾದೆ ನೀನು ಜಗಕೆಲ್ಲ
ಆ ಶಿವನ ಹಣೆಗಣ್ಣು, ಆ ಹರಿಯ ತಿರುಚಕ್ರ
ನೀನಲ್ಲವೇನೋ ನನರಾಯ- 'ದಿನಪತಿ'ಯೆ
'ಭೂಸತಿ'ಯ ಪ್ರೀತಿ ಒಪ್ಪಿಸಿಕೋ
(೦೬-ಸೆಪ್ಟೆಂಬರ್-೨೦೦೧)
Subscribe to:
Post Comments (Atom)
4 comments:
ಜನಪದದ ತಾಯಿಯಾದ ಧರಣಿ, ಜಾನಪದ ಶೈಲಿಯಲ್ಲಿ ಒಲವನ್ನು ತೋಡಿಕೊಳ್ಳುವದು ಅತ್ಯಂತ ಸಹಜ.ದಿನಪತಿ ಈ ಒಲವನ್ನು ಒಪ್ಪದೆ ಇದ್ದಾನೆ?
ಕಾಕಾ, ದಿನಪತಿ ಒಪ್ಪಿದ ಪ್ರೀತಿಯಿಂದಲೇ ಧರಣಿಯನ್ನು ನಾವೆಲ್ಲ ಅಮ್ಮಾ ಅನ್ನಬಹುದಾಗಿದೆ, ಅಲ್ಲವೆ?
ಮಗಳಾಗಿ ಅಮ್ಮ-ಅಪ್ಪನನ್ನು ಕಾಡಿಸುವ ಪರಿ ಇದು; ಚೇಷ್ಟೆ ಬುದ್ಧಿ. ಕ್ಷಮೆಗೇ ಹೆಸರಾದ ಧಾರಿಣಿ ನನ್ನನ್ನು ಕ್ಷಮಿಸಿ ಹರಸುತ್ತಾಳೆ ತಾನೆ!
ಜನಪದ ಗೀತೆಗಳು ಅಂತ್ಯ ಕಾಣುತ್ತಿರುವ ಈ ಸಮಯದಲ್ಲಿ ಈ ಪದ್ಯ ಅತ್ಯಂತ ಖುಷಿ ಕೊಟ್ಟಿತು... ಎಂತೆಂಥ ಅದ್ಭುತ ಗೀತೆಗಳನ್ನು ಬರೀತೀರಿ ನೀವು! :-)
ಇದನ್ನು ಅದ್ಭುತ ಅಂದಿದ್ದು ನಿಮಗೆ ಜನಪದ ಗೀತೆಗಳ ಬಗೆಗಿನ ಪ್ರೀತಿ, ಹರೀಶ್. ಇದೇನಂಥ ದೊಡ್ಡ ಗೀತೆಯೇನಲ್ಲ, ಸಾಮಾನ್ಯವಾದ್ದು.
ನಿಮ್ಮ ಖುಷಿಯೇ ನನಗೆ ಖುಷಿ.
Post a Comment