ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 14 December, 2008

ತುಂಟ ಮರಿಯ ಪ್ರಶ್ನೆ

ಮೊನ್ನೆ ತಾನೇ ಊರಲ್ಲಿದ್ದಾಗ, ನಮ್ಮ ಸಂಬಂಧಿಯೊಬ್ಬರ ಮನೆಯಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ.
ಅಂಥ ಮಹತ್ತರ ಘಟನೆಯೇನಲ್ಲ, ಆದರೆ ನಮ್ಮೆಲ್ಲರ ಜೀವನದಲ್ಲಿ ಎಂದಾದರೊಮ್ಮೆ ಇಂಥದ್ದು ನಡೆದಿರಬಹುದು, ಅಥವಾ ನಡೆಯಬಹುದಾದ್ದು.

ನಮ್ಮ ಸಂಬಂಧಿಯ ಮನೆಗೆ ನಮ್ಮ ಭೇಟಿ. ಅವರಿಗೆ ನಾಲ್ಕು ವರ್ಷದ ಪೋರಿ. ತುಂಬಾ ತುಂಟಿ. ಬಾಯಿ ತುಂಬಾ ಮಾತು. ಎಲ್ಲರ ಪರವಾಗಿಯೂ ಒಬ್ಬಳೇ ಮಾತಾಡಿ ಮುಗಿಸುವಷ್ಟು ಬಾಯಿಬಡುಕಿ. ಹೊತ್ತು ಗೊತ್ತಿನ ಪರಿವೆಯಿಲ್ಲ. ಎಲ್ಲಿ ಕೂತಿದ್ದೇನೆ, ಎಲ್ಲಿ ನಿಂತಿದ್ದೇನೆ, ಸುತ್ತ ಯಾರಿದ್ದಾರೆ, ಯಾವುದರ ಗೊಡವೆಯೂ ಅವಳಿಗೆ ಇರುವ ಹಾಗಿಲ್ಲ. ಮಾತಿಗೆ ಒಂದು ವ್ಯಕ್ತಿ ಇದ್ದರೆ ಸರಿ.

ನಾವು ಅಲ್ಲಿಗೆ ಹೋದಾಗಿನಿಂದ ನಮ್ಮ ಬಗ್ಗೆ ಅವಳಿಗೆ ಬೇಕಾದಂತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಳು. ಕೆಲವು ಸಲ ತನ್ನ ಅಪ್ಪ-ಅಮ್ಮ, ಅಜ್ಜಿಯ ಒಳಗುಟ್ಟುಗಳನ್ನೂ ನಮ್ಮೊಡನೆ ಸಾರಿದ್ದಳು. ಅದೇ ಸಂಜೆ ನಾನು ಮನೆಯ ಹಿಂದೆ ಟಾಯ್ಲೆಟ್ ಬದಿಗೆ ಹೋಗುತ್ತಿದ್ದಾಗ, ಅಲ್ಲಿ ಪೋರಿಯ ಅಮ್ಮ ಗೋಡೆಗೊರಗಿ ನಗುತ್ತಿದ್ದಾಳೆ, ಪೋರಿ ಒಂದು ಟಾಯ್ಲೆಟ್ ಒಳಗಿಂದ "ಹೇಳು, ಸುಮ್ನೇ ನಗ್ಬೇಡ.... ಹೇಳು..." ಅಂತಿದ್ದಾಳೆ. ನಾನು ಹೋಗಿದ್ದು ಗೊತ್ತಾದ್ರೆ ಅವಳು ತನ್ನ ಅಮ್ಮನ ಮೇಲೇ ಕೋಪಿಸಿಕೊಳ್ಳುತ್ತಾಳೆ (ಬಾಯಿ ಬಡುಕಿಯಾದ್ರೂ ಮರ್ಯಾದೆ ಜೋರಾಗಿದೆ ಪುಟ್ಟಮ್ಮಂಗೆ...) ಅಂತ ಮೊದಲೇ ಗೊತ್ತಿದ್ದ ನಾನು ಮೆಲ್ಲಗೆ ಕಡೆ ಬಂದೆ. ಸ್ವಲ್ಪ ಹೊತ್ತಾದ ಮೇಲೆ ಹೋಗಿ ನನ್ನ ಕೆಲಸ ಮುಗಿಸಿ ಬಂದೆ.

ಮತ್ಯಾವಾಗಲೋ ಸಮಯ ಸಿಕ್ಕಾಗ ಅವಳ ಅಮ್ಮನೇ ನನ್ನ ಬಳಿ ಹೇಳಿಕೊಂಡು ಮತ್ತೊಂದಿಷ್ಟು ನಕ್ಕಳು. " ಥರ ಪ್ರಶ್ನೆ ಕೇಳಿದ್ರೆ ಏನು ಉತ್ತರ ಹೇಳೋದೋ ಗೊತ್ತಾಗುದಿಲ್ಲ. ಹೇಳದಿದ್ರೆ ರಂಪ ಮಾಡ್ತಾಳೆ. ಒಮ್ಮೊಮ್ಮೆ ಯಾರಾದ್ರೂ ಇದ್ದಾಗಲೂ ಇಂಥ ಪ್ರಶ್ನೆ ಕೇಳ್ತಾಳೆ, ತುಂಬಾ ಮುಜುಗರ ಆಗ್ತದೆ. ಹೇಳಿ ಅಕ್ಕ, ಇಂಥ ಪ್ರಶ್ನೆಗೆ ಹೇಗೆ ಉತ್ತರಿಸೋದು...?"

ಅದೇನಪ್ಪಾ ಅಂಥಾ ಮುಜುಗರದ ಪ್ರಶ್ನೆ ಅಂದ್ರಾ...

"ಟಾಯ್ಲೆಟ್ಟಲ್ಲಿ ಕೂತಾಗ, ಚಿಚ್ಚಿ (ಕಕ್ಕ) ಮಾಡಿ ಮುಗೀತು, ಇನ್ನು ಬರುದಿಲ್ಲ ಅಂತ ಹೇಗೆ ಗೊತ್ತಾಗ್ತದೆ? ಯಾವಾಗ ತೊಳೀಬಹುದು ಅಂತ ನಿಂಗೆ ಹೇಗೆ ಗೊತ್ತಾಗ್ತದೆ? ನಾ......ಳೆ ನಾನೇ ದೊಡ್ಡವಳಾಗಿ ನಾನೊಬ್ಳೇ ಇಲ್ಲಿ ಕೂತಾಗ ಚಿಚ್ಚಿ ಮುಗೀತು, ಇನ್ನು ತೊಳ್ಕೊಳ್ಬೇಕು ಅಂತ ನಂಗೆ ಹೇಗೆ ಗೊತ್ತಾಗ್ಬೇಕು...? ಆಗ ನೀನು ಹೊರಗೆ ನಿಂತು ಹೇಳುದಿಲ್ಲ ಅಲ್ವಾ, 'ಇನ್ನು ಸಾಕು... ಏಳು... ತೊಳೀತೇನೆ...' ಅಂತ; ... ನಂಗೇ ಗೊತ್ತಾಗುದು ಹೇಗೆ?"

ಪ್ರಶ್ನೆಗೆ ಉತ್ತರ ತಿಳಿದೂ ಹೇಳದೇ ಇದ್ರೆ.....

13 comments:

sunaath said...

ಅಹಾ, ಈ ಮುದ್ದು ಹುಡುಗಿಯ ಮುದ್ದು ಪ್ರಶ್ನೆಗಳಿಗೆ ಮನ ಸೋಲದವರಾರು?
ನಮಗೂ ಹೇಳಿದ್ದಕ್ಕಾಗಿ ಧನ್ಯವಾದಗಳು, ಜ್ಯೋತಿ.

Harish - ಹರೀಶ said...

ಹಹ್ಹಾಹ್ಹಾ!! ಉತ್ತರ ಹೇಳಿದ್ರೋ ಇಲ್ವೋ!!!!

ಸುಪ್ತದೀಪ್ತಿ suptadeepti said...

ಯಾವಾಗಲಾದರೊಮ್ಮೆ ಕೇಳುವ ನಮಗೆ ಮುದ್ದು ಉಕ್ಕಿ ಬರತ್ತೆ, ಕಾಕಾ. ಆದ್ರೆ ಅವಳ ಜೊತೆ ದಿನಾ ಇರೋ ಅವಳಮ್ಮ, ಅಪ್ಪ, ಅಜ್ಜಿಯರ ತಲೆ ಕೆಡುತ್ತಂತೆ. ಅವರಿಗೆಲ್ಲ ಅವಳ ದೂರು ಹೇಳಿ ಮುಗಿಯೋದಿಲ್ಲ.
ಅಂಥ ಪೋಕರಿಯ ಕುತೂಹಲವನ್ನು ಮೆಚ್ಚಿದ್ದಕ್ಕಾಗಿ ನಿಮಗೂ ಧನ್ಯವಾದಗಳು, ಕಾಕಾ.

ನಾನೇನು ಉತ್ರ ಹೇಳೋದು ಹರೀಶ್, ಇಲ್ಲಿ ನಿಮ್ಮೆಲ್ಲರ ಸಲಹೆಗಳಿಗಾಗಿ ಕಾಯುತ್ತಿದ್ದೇನೆ. ನಕ್ಕಿದ್ದಕ್ಕೆ ಧನ್ಯವಾದ.

Shiv said...

ಸುಪ್ತದೀಪ್ತಿ,

ಹೀಹೀ..
ಈ ತರ ಮಕ್ಕಳು ಕೇಳುವ FAQ ಗಳಿಗೆ ಉತ್ತರ ಇರೋವ ಜಾಗ ಯಾವುದಾದರೂ ಇದೆಯಾ :)

ಸುಪ್ತದೀಪ್ತಿ suptadeepti said...

ಇಂಥ ಪ್ರಶ್ನೆಗಳಿಗೆ ಸಂದರ್ಭಾನುಸಾರ, ವೈಯಕ್ತಿಕ ಅನುಭವಾನುಸಾರ ಆಯಾಯ ತಾಯ್ತಂದೆಯರ ಮನದೊಳಗೇ ಉತ್ತರಗಳು ಇರ್ತವೆ ಶಿವ್. ನಕ್ಕು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

Anonymous said...

ಜ್ಯೋತಿ ಅಕ್ಕ,
ಹಿ ಹಿ ಹಿ!!! ಒಳ್ಳೆ ಪ್ರಶ್ನೆ ಕೇಳಿದ್ದಾಳೆ ತುಂಟ ಪೋರಿ,ನಮ್ಮ ದೇವರುಗಳ ಬಗ್ಗೆ ಕಥೆಗಳನ್ನು ಹೇಳಲು ಶುರು ಮಾಡಿದ್ರೆ ಮುಗಿದೇ ಹೋಯ್ತು. ನನ್ನ ಮಗಳು ಪ್ರಶ್ನೆ ಮಳೆ ಸುರಿಸುತ್ತಿದ್ದರೆ ನಾನಂತೂ ಬರೀ ಪಿಳಿ ಪಿಳಿ:).
ಪಿ ಎಸ್ ಪಿ.

ಸುಪ್ತದೀಪ್ತಿ suptadeepti said...

ಪಿ.ಎಸ್.ಪಿ., ಪ್ರತಿಕ್ರಿಯೆಗೆ ನಿನಗೂ ಧನ್ಯವಾದ.
ನಿಜ, ಮಕ್ಕಳು ಕೇಳುವ ಪ್ರಶ್ನೆಗಳಿಗೆ ಹಲವಾರು ಸಲ ನಮ್ಮೊಳಗೆ ಉತ್ತರವೇ ಇರುವುದಿಲ್ಲ; ಅಥವಾ ಗೊತ್ತಿದ್ದರೂ ಹೇಳಲು ನಮಗೆ ತಿಳಿಯುವುದಿಲ್ಲ.

ಸಿಮೆಂಟು ಮರಳಿನ ಮಧ್ಯೆ said...

ಸುಪ್ತ ದೀಪ್ತಿಯವರೆ...

ಹೊಟ್ಟೆತುಂಬಾನಕ್ಕು ಬಿಟ್ಟೆ...
ನನ್ನ ಮನೆಯವರೂ ಕೂಡ...

ಇಂಥಹ ಪ್ರಶ್ನೆಗಳಿಗೆ ಕಾಲವೇ ಅ ಪುಟ್ಟ ಕಂದಮ್ಮಗಳಿಗೆ ಉತ್ತರ ತಿಳಿಸುತ್ತದೆ..!

ನಮ್ಮ ನಗುವೆ ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆ...

ಸುಪ್ತದೀಪ್ತಿ suptadeepti said...

"ಸಿಮೆಂಟು ಮರಳಿನ ಮಧ್ಯೆ" ಉಸಿರಾಡಿದ ನಗುವಿಗೆ ನನ್ನ ಅಕ್ಷರಲೋಕದೊಳಗೆ ಸ್ವಾಗತ, ಮತ್ತು ಅದನ್ನು ದಾಖಲಿಸಿದ್ದಕ್ಕೆ ಧನ್ಯವಾದಗಳು.

shivu K said...

ಮೇಡಮ್,
ಬಲು ಮಜ ಇದೆ. ಮಕ್ಕಳ ಪ್ರಶ್ನೆಗೆ ಉತ್ತರಿಸಲು ಸಾಧ್ಯವೇ ?ಅವರ ಮಾತಿಗೆ ಮನಸೋಲಬೇಕು.
ನಾನು ಶಿವು. ಹೀಗೆ ಅಲೆಯುತ್ತಾ ನಿಮ್ಮ ಬ್ಲಾಗಿನೊಳಗೆ ಬಿದ್ದೆ. ಚೆನ್ನಾಗಿದೆ ಅನ್ನಿಸಿತು.. ಹೀಗೆ ಬರುತ್ತಿರುತ್ತೇನೆ. ನನ್ನ ಬ್ಲಾಗಿಗೂ ಬಿಡುವು ಮಾಡಿಕೊಂಡು ಬನ್ನಿ...
ನನ್ನ ಬ್ಲಾಗ್ ವಿಳಾಸಗಳು :
http://camerahindhe.blogspot.com/
http://chaayakannadi.blogspot.com/

ಸುಪ್ತದೀಪ್ತಿ suptadeepti said...

ಸ್ವಾಗತ ಮತ್ತು ಧನ್ಯವಾದಗಳು ಶಿವು. ನಿಮ್ಮ ಬ್ಲಾಗ್ಸ್ ಕಡೆಗೆ ನಾನೂ ಹೀಗೇ ಅಡ್ಡಾಡುತ್ತಾ ಹೊಕ್ಕು ಬಂದಿದ್ದೇನೆ, ಹೆಜ್ಜೆ ಗುರುತು ಹಾಕಿಲ್ಲ, ಅಷ್ಟೇ. ಎರಡೂ ಚೆನ್ನಾಗಿವೆ. ಖುಷಿ ನೀಡಿವೆ.

ಶಾಂತಲಾ ಭಂಡಿ said...

ಸುಪ್ತದೀಪ್ತಿಯವರೆ...
ಮುದ್ದು ಹುಡುಗಿಯ ಬಗೆಗಿನ ಮುದ್ದಾದ ಲೇಖನ. ನಕ್ಕೂ ನಕ್ಕೂ ಸಾಕಾಯಿತು :-)

ನಾವೂ ಚಿಕ್ಕವರಿರುವಾಗ ಆಡಿದ ಮಾತುಗಳು/ಕೇಳಿದ ಪ್ರಶ್ನೆಗಳು, ಆಡಿದ ಆಟಗಳ ನೆನಪೆಲ್ಲ ಬಂದು
ಮುದನೀಡಿತು:-)

ನಗಿಸಿದ್ದಕ್ಕೆ ಧನ್ಯವಾದ.

ಸುಪ್ತದೀಪ್ತಿ suptadeepti said...

ನಾನೇನೂ ನಾಲ್ಕು ಸಾಲು ಬರೆದೆ, ನೀವೆಲ್ಲ ಬಂದು ಓದಿ ನಕ್ಕಿದ್ದೀರಿ. ಅದಕ್ಕೆ ಧನ್ಯವಾದ ನಾನೇ ಹೇಳಬೇಕು ಶಾಂತಲಾ.

ಮಕ್ಕಳ ಮನಸ್ಸು ಹೀಗೇ ಏನೋ... ಕುತೂಹಲದ ಗೂಡು. ಕೆಲವು ಮಕ್ಕಳು ಪ್ರಶ್ನೆ ಕೇಳುತ್ತಾರೆ, ಇನ್ನು ಕೆಲವು ಕೇಳಲ್ಲ, ಅಷ್ಟೇ.

ನಾವೆಲ್ಲ ಚಿಕ್ಕವರಿದ್ದಾಗ... ಹ್ಮ್!! ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸ... ಎಷ್ಟು? ಎಲ್ಲಿ? ಹೇಗೆ? ಇದೇ ಇನ್ನೊಂದು ದೊಡ್ಡ ಲೇಖನವಾದೀತು, ಅಲ್ವಾ?