ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 11 September 2008

ಆಧಾರ ಸೂತ್ರ

ನಿನ್ನ ನೆನಪು ಮೂಡಿ ಬರಲು ಹಗುರವಾಯ್ತು ಜೀವ
ಕಣ್ಣು ತುಂಬಿ ಕಲಕಿದಾಗ ಕರಗಿತೆಲ್ಲ ಭಾವ

ಅಲ್ಲಿ ಇಲ್ಲಿ ದಿಕ್ಕು ಹುಡುಕಿ ಬಿಕ್ಕುತಿರಲು ತಾನು
ಬಲ್ಲರಾರು ಏನು, ಎತ್ತ; ಮಂಜೊಳು ಬುವಿ-ಬಾನು
ಎಲ್ಲಿ ಇದ್ದೆ, ಎಲ್ಲಿ ಎದ್ದೆ, ಅರಿಯದಿರುವ ಚಿಣ್ಣ
ಸಲ್ಲಲಹುದು ಕೆಸರಿನಲ್ಲಿ ಹೊಂದಾವರೆ ಬಣ್ಣ

ಜೀವಕೋಟಿ ಚರಾಚರದೊಳಗೆ ಮನುಜ ಭ್ರಷ್ಟ
ಭಾವಲೋಕ ಭುವನದಲ್ಲಿ ನಿತ್ಯ ಕಷ್ಟ-ನಷ್ಟ
ಕಾವ ಸತ್ಯವೊಂದೆ ಅರಿಯೊ, ಇರಲು ಸತ್ವದರಿವು
ಆವ ಬಲವು ಬೇಕಿದೆಯೊ, ಬೆಳೆಯಲಾತ್ಮ ಛಲವು!

ಪಾಂಚಜನ್ಯ ಮೊಳಗಲೀಗ- ನಡುಗಲಳ್ಳೆದೆಯು
ಸುಪ್ರಬೋಧ ಬೆಳಗಲೀಗ- ಅಡಗಲಜ್ಞತೆಯು
ತೇಜಃಪುಂಜ ಹೊಳೆಯಲೀಗ- ಉಡುಗಲೆಲ್ಲ ಕ್ರೌರ್ಯ
ಮೌಢ್ಯತೆಯನು ಕಳೆಯಲೀಗ- ಪೊಡವಿಗಾಚಾರ್ಯ

(೧೦-ಸೆಪ್ಟೆಂಬರ್-೨೦೦೧; ರಾತ್ರೆ ೧:೪೮)

(ಮಲಗಿದ್ದವಳನ್ನು ನಿದ್ರಿಸಗೊಡದೆ, ಎಬ್ಬಿಸಿ, ಈ ಕವನ "ತನ್ನನ್ನು ತಾನು ಬರೆಸಿಕೊಂಡ" ಮರುಬೆಳಗ್ಗೆಯೇ ಜಗತ್ತನ್ನು ನಡುಗಿಸಿದ ಘಟನೆ ನಡೆದದ್ದು ನನಗಿನ್ನೂ ಅರಗಿಸಿಕೊಳ್ಳಲಾಗದ ವಿಸ್ಮಯ)

4 comments:

Anonymous said...

ಸುಪ್ತದೀಪ್ತಿಯವರೇ
ಏನಾದರು ಆಗುವ ಮುನ್ನ ಮನಸು ಹೇಗೇಗೋ ಆಡ್ತಾ ಇರುತ್ತೆ. ಅಷ್ಟು ಹೊತ್ತಲ್ಲಿ ತನಗೆ ತಾನೆ ಬರೆಸಿಕೊಂಡ ಕವನ ಚೆನ್ನಾಗಿದೆ, ಆ ದಿನ ನೆನಪಿಸಿಕೊಂಡರೆ ಬೇಜಾರಾಗುತ್ತೆ ಆಲ್ವಾ.ವರ್ಷಗಳೇ ಕಳೆದುಹೋಗಿದ್ದರು ಇನ್ನು ನಿನ್ನೆ ಮೊನ್ನೆ ಆದ ಹಾಗಿದೆ.ಛೆ.
ಪಿ ಎಸ್ ಪಿ.

ಸುಪ್ತದೀಪ್ತಿ suptadeepti said...

ಹೌದು, ಮನಸ್ಸಿನ ವ್ಯಾಪಾರ ನಿಗೂಢ.

ಬೇಸರ ಮಾತ್ರವಲ್ಲ, ಕ್ರೌರ್ಯದ ರೂಪ ನೆನೆಸಿಕೊಂಡು ಮೈ ನಡುಗುತ್ತದೆ! ಅದರ ಮುಂದುವರಿದ ಭಾಗವೂ ಏನೂ ಕಡಿಮೆಯಿಲ್ಲದಂತೆ ನಡೆಯುತ್ತಿದೆಯಲ್ಲ!! ಯಾರಿಗೆ ಯಾರು ಎಣೆ?

ಪ್ರತಿಕ್ರಿಯೆಗೆ ಧನ್ಯವಾದಗಳು.

MD said...

Congratulations on getting selected your article for AKKA Soveinir.

ಸುಪ್ತದೀಪ್ತಿ suptadeepti said...

ಧನ್ಯವಾದಗಳು MD.
ನಿಮ್ಮ ಬರಹವೂ ಅಕ್ಕ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದೆಯಲ್ಲ, ಅದಕ್ಕಾಗಿ ನಿಮಗೂ ಅಭಿನಂದನೆಗಳು.