ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday 28 August, 2013

ಬೆಣ್ಣೆ ಕಳ್ಳ


ನೆಲುವಿನಲ್ಲಿ ಹಾಲು ಮೊಸರು
ನೆಲದ ಮೇಲೆ ಗೊಲ್ಲ
ಮೆಲ್ಲಬೇಕು ಅಚ್ಚ ಬೆಣ್ಣೆ
ಕೈಗೆ ನಿಲುಕದಲ್ಲ

ಹಾರಿ ಕುಣಿದು ಕಪ್ಪೆ ಜಿಗಿದು
ತೂರಿ ನೋಟದೇಣಿ
ಭಾರಿ ಕಷ್ಟ ಪಟ್ಟರೇನು
ಕೈಗೆ ಸಿಗದು ಭರಣಿ

ಸುತ್ತ ಮುತ್ತ ಕಳ್ಳ ಚಿತ್ತ
ಇತ್ತ ಬಂದರಾರು?
ಮೆತ್ತಗೊಮ್ಮೆ ಇಣುಕಿ ನೋಡೆ
ಕೈಗೆ ಹೆಗಲ ಊರು

ಅಣ್ಣ ಬಂದ ಜೊತೆಗೆ ತಂದ
ತನ್ನ ಭಂಡ ಜೋಡಿ
ಬಣ್ಣವೇರಿ ಬಾನಿನತ್ತ
ಕೈಗೆ ಬಂತು ಜಾಡಿ

ಕಿಲಕಿಲಕಿಲ ಬಳೆಯ ಸದ್ದು
ಚಲನೆ ಪಡೆದ ಕೂಟ
ನೆಲದ ಮೇಲೆ ಹಾಲು ಮೊಸರು
ಕೈಗೆ ಬೆಣ್ಣೆಯೂಟ

(೦೨-ಆಗಸ್ಟ್-೨೦೧೩)

2 comments:

ಈಶ್ವರ said...

ಆಹಾ.. ಚೆಂದದ ಹಾಡು. ಮಕ್ಕಳಿಗೆ ಹಾಡಲು ಕೊಡಬಹುದು..
~
ಅತ್ತಿಮರದಿಣುಕಿನಲಿ ಕಾಣುವನು ಶ್ರೀಕೃಷ್ಣ
ಅವನ ಶಲ್ಯದ ಜೊತೆಗೆ ಅವಳ ಗೆಜ್ಜೆ!
ಹಿಡಿಯಹೋದೆಯ ಸಖಿಯೆ ಅವನಂತ ನಲ್ಲನ
ಹುಡುಕಲಾರಿರಿ ನೀವು ಮೀನ ಹೆಜ್ಜೆ.

ಶುಭಾಶಯಗಳು ಅಕ್ಕಾ

ಸುಪ್ತದೀಪ್ತಿ suptadeepti said...

ಮಕ್ಕಳಿಗೆ ಇಷ್ಟವಾಗಿದ್ದು ಖುಷಿ. ಹಾಡಿದರೆ ಖುಷ್ ಖುಷಿ.