ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 9 May, 2011

ಸಂಜ್ಞಾ - ೦೧

"ಮೇಡಮ್, ನಿಮ್ಮತ್ರ ಅರ್ಜೆಂಟ್ ಮಾತಾಡ್ಬೇಕು. ಪುರುಸೊತ್ತು ಉಂಟಾ? ಕಾಲ್ ಮಾಡ್ಲಾ?"
ಅವನ ಮೆಸೇಜ್ ಬಂದಾಗ ಮಧ್ಯಾಹ್ನದ ಊಟ, ನಂತರದ ಕೆಲಸಗಳನ್ನು ಮುಗಿಸಿ ಮಲಗಲೋ ಓದಲೋ ಅನ್ನುವ ಗೊಂದಲದಲ್ಲಿದ್ದೆ. ಎರಡನ್ನೂ ಬದಿಗಿಟ್ಟು "ಕಾಲ್ ಮಾಡು" ಉತ್ತರ ಕಳಿಸಿದೆ.

ಅವನು ನನ್ನ ಕ್ಲಯಂಟ್. ಇದಕ್ಕೆ ಮೊದಲು ಎರಡು ಬಾರಿ ಸಮ್ಮೋಹನ ಚಿಕಿತ್ಸೆಗಾಗಿ ಬಂದಿದ್ದ. ಎರಡೂ ಸಲವೂ ಹದವಾದ ಟ್ರಾನ್ಸ್ ಸ್ಟೇಜ್ ತಲುಪಿದ್ದ. ರಿಲ್ಯಾಕ್ಸ್ ಆಗುವುದಕ್ಕೇ ಹಿಂಜರಿಕೆ ಆತನಿಗೆ. ಏನೋ ಬಿಗು, ಎಂಥದೋ ಆತಂಕ. ಮೂರನೇ ವಾರಕ್ಕೆ ಭೇಟಿ ನಿಗದಿಪಡಿಸಿಯೇ ಹೋಗಿದ್ದ. ಇನ್ನೆರಡು ದಿನಕ್ಕೆ ನಮ್ಮ ನಿಗದಿತ ಭೇಟಿ. ಇಂದೇನು ಅರ್ಜೆಂಟ್? ನನ್ನ ಯೋಚನಾ ಸರಣಿ ಅವನ ಕರೆಯಿಂದ ಕತ್ತರಿಸಲ್ಪಟ್ಟಿತು.

"ಹಲೋ, ನಮಸ್ತೆ ಸುಂದರ್. ಹೇಳಿ. ಹೇಗಿದ್ದೀರಿ?"
"ನಾನು... ನಾನು... ತುಂಬಾ ಟೆನ್ಶನ್ ಆಗ್ತದೆ ಮೇಡಮ್. ನಿದ್ದೆಯೇ ಬರುದಿಲ್ಲ. ರಾತ್ರೆ ಎರಡು ಮೂರು ಗಂಟೆಗೆಲ್ಲ ಕಾರ್ ತಗೊಂಡು ಡ್ರೈವ್ ಹೋಗ್ತೇನೆ, ಟೆನ್ಶನ್ ತಡಿಲಿಕ್ಕೆ. ಆದ್ರೂ ಸರಿಯಾಗುದಿಲ್ಲ. ನಿದ್ದೆಯೇ ಬರುದಿಲ್ಲ. ಟೆನ್ಶನ್... ನಾನು ಸರಿಯಾಗ್ತೆನಾ ಮೇಡಮ್?"
"ಸುಂದರ್, ನೀವು ಖಂಡಿತಾ ಸರಿಯಾಗ್ತೀರಿ. ನಾನು ಹೇಳಿದ ಹಾಗೆ ಕೇಳ್ಬೇಕು, ಅಷ್ಟೇ. ಕೇಳ್ತೀರಾ?"
"ಹ್ಮ್..."
"ನಾನು ಹೇಳಿದ ಹಾಗೆ ಪ್ರತಿದಿನ ರಿಲ್ಯಾಕ್ಸೇಷನ್ ಅಭ್ಯಾಸ ಮಾಡ್ತಿದ್ದೀರಾ? ಬೆಳಗ್ಗೆ ಮೆಡಿಟೇಶನ್ ಮಾಡ್ತಿದ್ದೀರ? ಯೋಗಾಬ್ಯಾಸ ಪುನಃ ಶುರು ಮಾಡಿದ್ದೀರಾ?"
"ಇಲ್ಲ ಮೇಡಮ್, ಯಾವುದೂ ಆಗುದಿಲ್ಲ. ಸುಮ್ಮನೇ ಕೂತ್ಕೊಳ್ಳಿಕ್ಕೇ ಆಗುದಿಲ್ಲ. ಟೆನ್ಶನ್..."
"ನಿಮ್ಮ ಇಷ್ಟದ ಮ್ಯೂಸಿಕ್... ಅದನ್ನು ಕೇಳ್ತಿದ್ದೀರ?"
"ಹೌದು, ಅದು ಯಾವಾಗ್ಲೂ ಕೇಳ್ತೇನೆ."
"ಗುಡ್. ಅದನ್ನೇ ಕೇಳಿಕೊಂಡು ಹಾಗೇ ಕಣ್ಣುಮುಚ್ಚಿ ರಿಲ್ಯಾಕ್ಸ್ ಆಗಿ. ಇನ್ನೆರಡು ದಿನ ಅದನ್ನು ಮಾಡ್ತೀರಾ?"
"ಹ್ಮ್, ಮಾಡ್ತೇನೆ ಮೇಡಮ್..."
"ಸರಿ ಹಾಗಾದ್ರೆ. ಎರಡು ದಿನದ ಮೇಲೆ ನೋಡುವಾ. ನಿಮ್ಮ ಸಮಯಕ್ಕೆ ಸರಿಯಾಗಿ ಬನ್ನಿ, ಆಯ್ತಾ?"
"ಬರ್ತೇನೆ ಮೇಡಮ್. ನಾನು ಸರಿಯಾಗ್ತೇನಾ?"
"ಹೌದು, ಸುಂದರ್. ಖಂಡಿತಾ ಸರಿಯಾಗ್ತೀರಿ. ಗುರುವಾರ ನೋಡುವಾ. ಬೈ ಬೈ. ಟೇಕ್ ಕೇರ್."
"ಹ್ಮ್..."
***

ಸುಂದರ್ ಹೆಸರು ಅನ್ವರ್ಥ. ಸ್ಫುರದ್ರೂಪಿ ತರುಣ. ಇಪ್ಪತ್ತಾರರ ಹರೆಯ. ಎತ್ತರದ ದೃಢಕಾಯ. ಗುಂಗುರುಂಗುರು ತಲೆಗೂದಲು. ಅಗಲ ಮುಖದಲ್ಲಿ ಕಳೆಗುಂದಿದ ಕಂಗಾಲಾದ ಅಗಲಗಲ ಕಣ್ಣುಗಳು. ಬೇಕಾದಷ್ಟು ಆಸ್ತಿ ಮಾಡಿಟ್ಟಿರುವ ಸಿವಿಲ್ ಕಾಂಟ್ರ್ಯಾಕ್ಟರ್ ಅಪ್ಪನ ಏಕಮಾತ್ರಪುತ್ರ. ಬಿ.ಕಾಂ. ಪದವೀಧರ. ಸಿ.ಎ. ಮಾಡುವ ಕನಸು ಹೊತ್ತಾಗಲೇ ಕಣ್ಣಿಗೆ ಬಿದ್ದವಳು ದೊಡ್ಡಪ್ಪನ ಮಗನ ಹೆಂಡತಿ- ಸುಜೇತಾ. ಚಿಕ್ಕಪ್ಪನ ಜೊತೆಗೇ ಕಟ್ಟಡ ಕಾಮಗಾರಿ ಕೆಲಸಗಳ ಉಸ್ತುವಾರಿ ನೋಡಿಕೊಂಡು ತನ್ನ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಭಾಸ್ಕರ್ ಇವರ ಮನೆಗೇ ಬಂದು ನೆಲೆಸಿದ ಪತ್ನೀಸಹಿತ.

ಸುಂದರನ ಅಪ್ಪ ಶಂಕರ್ ನಗರದಲ್ಲೆಲ್ಲ ಸುಪ್ರಸಿದ್ಧರು. ಕೈತುಂಬಾ ಕೆಲಸವಿದ್ದು ಎಲ್ಲವನ್ನೂ ಸರಿದೂಗಿಸಿಕೊಳ್ಳಲು ಹೆಣಗುತ್ತಿದ್ದ ಹೊತ್ತಿನಲ್ಲೇ ಭಾಸ್ಕರ್ ಜೊತೆಗೂಡಿದಾಗ ರೆಕ್ಕೆ ಬಂದಂತಾಗಿತ್ತು. ಅಣ್ಣನ ಮಗನನ್ನೂ ಮನೆಯಲ್ಲೇ ಇರಿಸಿಕೊಂಡು ಕೆಲಸ ಕಾರ್ಯಗಳ ರಾಜ್ಯಭಾರವನ್ನು ಅವನಿಗೂ ಕಲಿಸುತ್ತಾ ತಾವು ಬೆಳೆಯುವ ಲೆಕ್ಕ ಹಾಕಿದರು. ಮನೆಯಾಕೆಗೂ ಮಗಳಂತಹ ಸೊಸೆ ಸುಜೇತಾಳಲ್ಲಿ ಮಮತೆಯೇ. ಎಲ್ಲವೂ ಚಂದವಾಗಿಯೇ ಇತ್ತು- ಅದೊಂದು ದಿನ ರಾತ್ರೆ ಆ ಕೋಣೆಯ ಬಾಗಿಲು ಟಕಟಕಿಸುವ ತನಕ.

4 comments:

sunaath said...

ಜ್ಯೋತಿ,
ಇದು ವಾಸ್ತವ ಘಟನೆಯನ್ನು ಆಧರಿಸಿದ ಕಥೆಯೆ? ಅಥವಾ ಕಲ್ಪನೆಯ ಆಧಾರದ ಕಥೆಯೆ?

ಸುಪ್ತದೀಪ್ತಿ suptadeepti said...

ಕಾಕಾ, ಇದಕ್ಕೆ ಈಗಲೇ ಉತ್ತರಿಸಲಾರೆ. ಇನ್ನು ಎರಡು ಮೂರು ಕಂತುಗಳಲ್ಲಿ ಇದನ್ನು ಮುಗಿಸುವೆ, ಆಗ ನಿಮಗೇ ತಿಳಿಯಬಹುದು. ಕ್ಷಮಿಸುವಿರಾ?

ಸಾಗರದಾಚೆಯ ಇಂಚರ said...

kathe kutoohalakaravaagide, bega munduvaresi,
naija ghataneyante ide

ಸುಪ್ತದೀಪ್ತಿ suptadeepti said...

ಗುರುಮೂರ್ತಿ, ನಿಜವೋ ಕಲ್ಪನೆಯೋ ಅನ್ನುವುದು ಇದೀಗ ಅಪ್ರಸ್ತುತ. ಕಥೆ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತಾ ಆವರಿಸಿಕೊಂಡರೆ ಅದರ ಸಾರ್ಥಕತೆ, ಅಲ್ಲವಾ? ಖಂಡಿತಾ ಮುಂದುವರಿಯುತ್ತದೆ, ತಡವಿಲ್ಲ.