ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 8 November, 2010

ಸುಮ್ಮನೆ ನೋಡಿದಾಗ...೦೨

ಕಾಲೇಜಿಗೆ ಸಾಗಿದ್ದೇನೋ ಸರಿ, ನಡೆದ ಹಾದಿಯ ನೆನಪೇ ಇಲ್ಲ. ಕಾಲೇಜಲ್ಲೂ ಪಾಠಗಳತ್ತ ಗಮನವಿಲ್ಲ. ಗೆಳತಿ ನೇಹಾ ಏನೇನೆಲ್ಲ ಕಸರತ್ತು ಹೂಡಿದರೂ ನನ್ನ ಅನ್ಯಮನಸ್ಕತೆ ದೂರಾಗಲಿಲ್ಲ. ಸಂಜೆಯ ಹೊತ್ತಿಗೆ ಮನೆಗೆ ಹೋಗುವ ಮೂಡ್ ಇರಲೇ ಇಲ್ಲದ ನನ್ನನ್ನು ತನ್ನ ಮನೆಗೆ ಆಹ್ವಾನಿಸಿದಳು ನೇಹಾ. ನಮ್ಮಮ್ಮ ಅವಳಮ್ಮನ ಗೆಳತಿಯಾದ್ದರಿಂದ ಅದೊಂದು ಮನೆಗೆ ಹೋಗಲು ನನಗೆ ಅಮ್ಮನ ಅನುಮತಿಯಿತ್ತಷ್ಟೇ. ಹೋದೆ. ನಳಿನಿ ಆಂಟಿ ಪ್ರೀತಿಯಿಂದ ಬರಮಾಡಿಕೊಂಡರು. ಅವರು ಕೊಟ್ಟ ಟೀ ಹೀರಿ ಬಿಸ್ಕೆಟ್ ತಿಂದು ನಾವಿಬ್ಬರೂ ಅಂಗಳದ ಮೂಲೆಯ ಜಾಜಿಯ ಚಪ್ಪರದಡಿಗೆ ತಲುಪಿದ್ದಷ್ಟೇ ನೆಪವಾಗಿ ಜಾಜಿಬಳ್ಳಿಯ ಎಲೆಗಳೆಲ್ಲ ನನ್ನ ಬೆರಳುಗಳಲ್ಲಿ ಸೇರಿಕೊಳ್ಳತೊಡಗಿದವು. ಒಂದೊಂದಾಗಿ ಬಿದ್ದ ಸಣ್ಣೆಲೆಗಳನ್ನು ಅಲ್ಲೇ ಅಂಟಿಸಿಡಲು ಮಳೆಯಿಲ್ಲದೆ ಹನಿಗಳು ಇಳಿದು ಬಂದವು. ನೇಹಾ ಜಾಜಿ ಮೊಗ್ಗು ಕೊಯ್ಯುವ ನೆಪದಲ್ಲಿ ಯಾರಾದರೂ ಕಂಡಾರೆನ್ನುವ ಅವಲೋಕನ ಮುಗಿಸಿ ಚಪ್ಪರದ ಇನ್ನೊಂದು ಬದಿಗಿದ್ದ ಬೆಂಚಿನಲ್ಲಿ ನನ್ನನ್ನು ಕುಳ್ಳಿರಿಸಿ ತಾನೂ ಕೂತಳು. ಕರ್ಚೀಫಿಗೇಕೆ ಒದ್ದೆಯಾಗುವ ಶಿಕ್ಷೆಯೆಂದು ಹನಿಗಳು ನೆಲಸೇರುತ್ತಿದ್ದವು. ಸಣ್ಣೆಲೆಗಳು ಅವನ್ನೆಲ್ಲ ಮುತ್ತಿಡುತ್ತಿದ್ದವು.

ನಮ್ಮನೆಯ ಕಥೆ ನೇಹಾಳಿಗೆ ಹೊಸದಲ್ಲ. ನೆಲಕ್ಕೆ ನನ್ನ ಕಣ್ಣೀರೂ ಹೊಸದಲ್ಲ. ಅಮ್ಮನ ಹಾರಾಟ, ರೇಗಾಟ ಕಂಡು ಕೇಳಿದವಳು ನನ್ನ ಒಳಗಿನ ತುಮುಲ ಒಮ್ಮೆ ಹೊರಬಿದ್ದರೆ ಸರಿಯಾಗುತ್ತೇನೆಂದು ಅರಿತವಳು ಸುಮ್ಮನಿದ್ದಳು, ನನ್ನ ಕೈಯನ್ನು ತನ್ನ ಕೈಯಲ್ಲಿ ಬೆಸೆದುಕೊಂಡು. ಅವಳೊಳಗಿನ ಬೆಚ್ಚನೆಯ ಸಾಂತ್ವನ ನನ್ನೊಳಗೆ ಹರಿದು ಬಂದದ್ದನ್ನು ಕಂಡ ಹನಿಗಳು ಹಿಂಜರಿದವು. ಸಣ್ಣೆಲೆಗಳು ಗಾಳಿಯಲ್ಲಿ ಆಡ್ಡಾಡಲು ಜಾರಿಕೊಂಡವು.

ನಿನ್ನೆ ರಾತ್ರೆ ಎಲ್ಲದರಂತಿರಲಿಲ್ಲ ಎನ್ನುವುದನ್ನು ನೇಹಾಳಿಗೆ ಹೇಳಲೇಬೇಕಿತ್ತು. ಪದಗಳಿಗಾಗಿ ಹುಡುಕುತ್ತಿದ್ದೆ. ಸಣ್ಣೆಲೆಯೊಂದು ಹಾರಿ ಬಂದು ಮಡಿಲಲ್ಲಿ ಇಳಿಯಿತು. ಒಂದು ತೊಟ್ಟಿನಲ್ಲಿ ಮೂಡಿದ ಪುಟ್ಟಪುಟ್ಟ ಏಳು ಬಿಲ್ಲೆಗಳಲ್ಲಿ ಒಂದಾಗಿದ್ದಿರಬಹುದಾದ ಪುಟಾಣಿ ಹಸಿರು. ನೇವರಿಸಿದೆ. ನಿನ್ನೆಯ ನೆನಪು ನಿಚ್ಚಳವಾಯ್ತು. ಇದೇ ರೀತಿಯ ಸಣ್ಣೆಲೆಗಳ ಗಿಡವೊಂದನ್ನು ಹರ್ಬೇರಿಯಂಗಾಗಿ ದಿನಪತ್ರಿಕೆಯೊಳಗೆ ಬಿಡಿಸಿಟ್ಟದ್ದನ್ನು ತೆರೆದು ನೋಡಿ ಪತ್ರಿಕೆ ಬದಲಿಸುತ್ತಿದ್ದೆ. ಇದೇ ವರ್ಷದ ಕೊನೆಗೆ ಇಪ್ಪತ್ತಾದರೂ ಹರ್ಬೇರಿಯಂ ತಯಾರಾಗಬೇಕಿತ್ತು. ಒಮ್ಮೆ ಇಡುವಾಗ ಒಂದೇ ಜಾತಿಯ ಗಿಡದ ಐದಾರು ಗೆಲ್ಲುಗಳನ್ನು ಹರ್ಬೇರಿಯಂ ಮಾಡುವುದು ನನ್ನ ಕ್ರಮ. ಇದೂ ಹಾಗೇ. ತನ್ನ ಹಚ್ಚನೆಯನ್ನು ಹದವಾಗಿ ಬಾಡಿಸಿಕೊಂಡು ಮಸುಕು ಹಸಿರಾಗುತ್ತಿದ್ದ ಎಲೆಗಳನ್ನು ನೇವರಿಸಿ ಮಡಿಕೆಗಳನ್ನು ಬಿಡಿಸಿ ಹೂವಿನ ಎಸಳುಗಳ ಮುದುರನ್ನು ಅರಳಿಸಿ ನೇವರಿಸಿ ಅವುಗಳನ್ನು ನನ್ನೊಳಗೆ ಆವಿರ್ಭವಿಸುತ್ತಿದ್ದೆ.

"ಇಷ್ಟೆಲ್ಲ ಒಣಪುರಲು ಯಾರಿಗೆ?" ಅಮ್ಮನ ಪ್ರಶ್ನೆ, ಎಂದಿನಂತೆ. ಗಂಟೆ ಹನ್ನೆರಡೂವರೆ. ಮಾಮೂಲು ಬಾಣಗಳು ಬರುತ್ತವೆಂದು ಮನದ ಸುತ್ತ ಗುರಾಣಿ ಕಟ್ಟಿಕೊಳ್ಳುತ್ತಿದ್ದೆ. ಉತ್ತರಿಸದೇ ಇರಲಾಗದಲ್ಲ.
"ನೇಹಾ, ಅಖೀ, ಸುಜಾ, ರಾಜೀವ್, ಶೇಖರ್, ಇವ್ರೆಲ್ಲ ಬೇಕೂಂತ ಹೇಳಿದ್ದಾರೆ. ಇದು ನಂಗೆ ಮಾತ್ರ ಸಿಕ್ಕಿದ್ದು. ಪೇಟೆಯ ಅವ್ರಿಗೆಲ್ಲ ಗುಡ್ಡೆಯ ಗಿಡ ಸಿಗುದಿಲ್ಲ. ಅದ್ಕೇ..."
"ಅವ್ರಿಗೆಲ್ಲ ನೀನ್ಯಾಕೆ ಮಾಡ್ಕೊಡ್ಬೇಕು? ನಿಂಗೇನು ಸಂಬಂಧ ಅವ್ರ ಹತ್ರ? ನೇಹಾಗೇನಂತೆ ಧಾಡಿ ಮಾಡ್ಕೊಳ್ಳಿಕ್ಕೆ?"
"ಅವ್ಳು ಬೇರೆ ಗಿಡದ ಹರ್ಬೇರಿಯಂ ಮಾಡ್ತಿದ್ದಾಳೆ, ನಮ್ಗೆಲ್ರಿಗೂ..."
"ನಿಮ್ಮಿಬ್ರಿಗೂ ಬೇರೆ ಕೆಲ್ಸ ಇಲ್ವಾ? ಹೇಳಿದ್ದು ಅರ್ಥ ಆಗದ ಕತ್ತೆಗಳು ನೀವು. ಬೀದಿ ನಾಯಿಗಳ ಹಾಗೆ ಹುಡುಗರ ಒಟ್ಟಿಗೆ ಸೇರಿ ಅವ್ರಿಗೆ ಬೇಕಾದ್ದನ್ನು ಮಾಡಿ ಕೊಡ್ತೀರಲ್ಲ. ಅವ್ರೇನು ಆಗ್ಬೇಕು ನಿಮಗೆ?"
"ಅಮ್ಮ...!" ಮುಂದೆ ಮಾತು ಹೊರಟಿರಲಿಲ್ಲ. ಇವಳಿಗೇ ನನ್ನ ಮೇಲೆ ನಂಬಿಕೆಯಿಲ್ಲದಿದ್ದ ಮೇಲೆ ಯಾವ ರೀತಿಯ ಉತ್ತರವೂ ಉಪಯೋಗವಿಲ್ಲ ಎನ್ನುವುದು ನನಗೀಗಾಲೇ ಅರಿವಾಗಿತ್ತು. ಸುಮ್ಮನಿದ್ದೆ.
"ಹೌದು ನಿನ್ನಮ್ಮನೇ ಹೇಳುದು. ಹುಡುಗಿ ಅಂತ ಮುದ್ದು ಮಾಡಿದೆ ನೋಡು, ಅದ್ಕೇ ಈಗ ಬೇಕಾಬಿಟ್ಟಿ ಬೆಳ್ದಿದ್ದೀ. ಯಾರ ಜೊತೆ ಹೇಗಿರ್ಬೇಕು ಅಂತ ಗೊತ್ತಿಲ್ಲ. ಹೇಳಿದ್ರೆ ಕೇಳುದಿಲ್ಲ. ಮಾನ ಮರ್ಯಾದೆ ಇಲ್ಲದ ನಿನಗೆ ಹೇಗೆ ಮದುವೆ ಮಾಡುದೋ ಗೊತ್ತಿಲ್ಲ. ಭಗವಂತಾ, ಇದನ್ನು ನೋಡ್ಲಿಕ್ಕೆ ನನ್ನನ್ನಿನ್ನೂ ಇಟ್ಟಿದ್ದೀಯಲ್ಲಪ್ಪ..." ಕಾಣದ ದೇವರಿಗೆ ಬಯ್ಯುತ್ತಾ ಬಾತ್ರೂಮಿಗೆ ನಡೆದಳು.
ಅವಳು ಹಿಂದೆ ಬರುವಾಗಲೂ ಲೈಟ್ ಇದ್ರೆ ಮತ್ತೆ ಪುರಾಣ ಸುರುವಾಗುವ ಸಂಶಯ ಇದ್ದದ್ದರಿಂದ ದೀಪ ಆರಿಸಿ ತೆಪ್ಪಗೆ ಕೂತೆ. ಅವಳು ರೂಮಿಗೆ ಹೋಗಿ ಮಲಗಿದ ನಂತ್ರ ದೀಪ ಹಾಕಿ ನನ್ನ ಕೆಲಸ ಮುಗಿಸಿ ಒಂದೂವರೆಯ ಸುಮಾರಿಗೆ ಮಲಗಿದ್ದೆ.

ಇದನ್ನೆಲ್ಲ ಕೇಳಿಸಿಕೊಂಡ ನೇಹಾ ನಿಟ್ಟುಸಿರಿಟ್ಟಳು. "ಇನ್ನೊಂದು ಆರು ತಿಂಗಳು. ಫೈನಲ್ ಬಿ.ಎಸ್ಸಿ. ಮುಗಿದ್ರೆ ಮತ್ತೆ ಮನೆಯಲ್ಲಿ ಇರುದಿಲ್ಲ ನೇಹಾ. ನನ್ನ ಕಾಲ ಮೇಲೆ ನಿಂತು ಕೆಲ್ಸ ಸೇರಿ ಒಬ್ಳೇ ಆರಾಮಾಗಿರ್ತೇನೆ ಹೊರ್ತು ಅಮ್ಮನ ಜೊತೆ ಮಾತ್ರ ಇರುದಿಲ್ಲ ಮಾರಾಯ್ತಿ. ಸಾಧ್ಯವೇ ಇಲ್ಲ."
"ಈಗಲಾದ್ರೂ ಯಾಕಲ್ಲಿರ್ತೀ? ನಮ್ಮನೆಗೆ ಬಾ. ನಮ್ಮಮ್ಮ, ಪಪ್ಪ ಎಷ್ಟು ಖುಷಿ ಪಡ್ತಾರೆ ಗೊತ್ತುಂಟಾ? ನಂಗಂತೂ ಸ್ವರ್ಗವೇ ಬಿಡು. ಬಂದ್ಬಿಡು, ಪ್ಲೀಸ್..."
"ಇಲ್ಲಮ್ಮ. ಬರುದಿಲ್ಲ. ಇಪ್ಪತ್ತು ವರ್ಷಗಳೇ ಮುಗಿದಾಯ್ತು. ಇನ್ನಾರು ತಿಂಗಳೇನು ಮಹಾ? ಅಷ್ಟು "ಬೌಗುಳ" ಸಾಲ ತೀರಿಸಿಯೇ ಹೊರಗೆ ಬರ್ತೇನೆ. ಕೆಲ್ಸ ಸಿಕ್ಕಿದ ಮೇಲೆ ನಾವಿಬ್ರೂ ಎಲ್ಲಾದ್ರೂ ಟೂರ್ ಹೋಗಿ ಬರುವಾ, ಆಯ್ತಾ? ಈಗ ಹೊರಡ್ತೇನೆ. ಇಲ್ಲದಿದ್ರೆ ಮನೆಯಲ್ಲಿ ಮಹಾಕಾಳಿ ಅವತಾರ ಆಗಿರ್ತದೆ, ಗೊತ್ತುಂಟಲ್ಲ."

ನಳಿನಿ ಆಂಟಿಗೆ ಹೇಳಿ ಅಲ್ಲಿಂದ ಹೊರಟಾಗ ಮನಸ್ಸು ಒಂದಿಷ್ಟು ಹಗುರಾಗಿದ್ದು ಹೌದು. ಜೊತೆಗೇ ಯೋಚನೆಗಳು... ‘ಅಮ್ಮ ಹೇಳಿದ ಹಾಗೆ ನನ್ನ ಕ್ಲಾಸ್ಮೇಟ್ಸ್ ಪೈಕಿ ಯಾರನ್ನಾದ್ರೂ ಲವ್ ಮಾಡ್ಬಾರ್ದು ಯಾಕೆ? ನಂಗೀವರೆಗೂ ಯೋಚನೆಯೇ ಬಂದಿರ್ಲಿಲ್ಲ. ಅಮ್ಮನೇ ಐಡಿಯಾ ಕೊಟ್ಟಿದ್ದಾಳಲ್ಲ. ಯಾರಾದೀತು? ಅವ್ನು ಬೇಡ. ಇವ್ನು ಆಗುದಿಲ್ಲ. ಅವ ಮೊಂಡ. ಇವ ಒರಟ. ಅವನಿಗೆ ತಲೆಯೇ ಇಲ್ಲ. ಇವನಿಗೆ ತಲೆ ನಿಲ್ಲುದೇ ಇಲ್ಲ. ಇಲ್ಲಪ್ಪ, ನನ್ನ ಪರಿಚಯದಲ್ಲಿ ನನ್ನ ಮೆಚ್ಚುಗೆ ಪಡೆದವ ಯಾರೂ ಇಲ್ಲ. ಹಾಗಾದ್ರೆ? ಸದ್ಯಕ್ಕಂತೂ ಬೇಡ ಯೋಚನೆ...’ ಮನೆಯ ಗೇಟಿನಲ್ಲೇ ನಿಂತಿದ್ದ ಅಮ್ಮ ಮಹಾಕಾಳಿಯಾಗಿರಲಿಲ್ಲ ಅನ್ನುವ ಸಮಾಧಾನದಲ್ಲೇ ಒಳಹೊಕ್ಕಿದವಳಿಗೆ ಅಲ್ಲೇ ಆಶ್ಚರ್ಯ ಕಾದಿತ್ತು.

6 comments:

ಮಹೇಶ said...

ಇವು ನಿಮ್ಮ ಸ್ವಂತ ಅನುಭವಗಳೇ.. ಅಥವಾ ನಿಮ್ಮ ಕಲ್ಪನೆಯೇ.. ಇವೆಲ್ಲವೂ ನಿಜವಾಗಿ ನಿಮ್ಮ ಜೀವನದಲ್ಲಿ ನಡೆಯುತ್ತಿವೆಯೇ.

sunaath said...

ಜ್ಯೋತಿ,
ಕತೆ ತುಂಬ ಸ್ವಾರಸ್ಯಕರವಾಗಿದೆ. ಮುಂದುವರೆಯಲಿ.

ಸುಪ್ತದೀಪ್ತಿ suptadeepti said...

ಮಹೇಶ್, ಕಾಕಾ,
ವಂದನೆಗಳು ಮತ್ತು ಧನ್ಯವಾದಗಳು.

ಮಹೇಶ್, ನನ್ನ ಜೀವನದಲ್ಲಿ ಇಂಥವು ನಡೆದಿವೆ ಎಂದಾಗಲೀ ಘಟಿಸಿಲ್ಲವೆಂದಾಗಲೀ ಹೇಳಿದ ಮಾತ್ರಕ್ಕೆ ಈ ನಿರೂಪಣೆಗೆ ವಿಶೇಷ ಅರ್ಥ ಲಭಿಸುತ್ತದೇನು? ನಿಮ್ಮ ಕಾಳಜಿಗೆ ಪ್ರತಿವಂದನೆಗಳು.

ಕಾಕಾ, ಕಥಾನಕ ಸ್ವಾರಸ್ಯಕರವೆನ್ನುವ ನಿಮ್ಮ ಉತ್ತೇಜಕ ಮಾತುಗಳೇ ಇದನ್ನು ಮುಂದುವರೆಸಲು ಉದ್ದೀಪಕವೂ. ಅಭಿವಾದನಗಳು ಕಾಕಾ.

sritri said...

ಜ್ಯೋತಿ, ‘ಸುಮ್ಮನೆ ನೋಡಿದಾಗ’ - ಓದಲು ಶುರು ಮಾಡಿದ್ದೇನೆ. ಕಥೆ ಯಾವ ಜಾಡಿನಲ್ಲಿ ಸಾಗುವುದೋ ಎಂಬ ಕುತೂಹಲ ಶುರುವಾಗಿದೆ. ಮುಂದಿನ ಭಾಗಗಳು ಬೇಗ ಬರಲಿ.

ಸುಪ್ತದೀಪ್ತಿ suptadeepti said...

ವೇಣಿ, ಕಥೆ ಹೇಗೆ ಸಾಗುತ್ತೆನ್ನುವ ಜಾಡಿನ ಸುಳಿವು ನನಗೂ ಇಲ್ಲ ಕಣೇ. ಅದು ತಂತಾನೇ ಬರೆಸಿಕೊಳ್ಳುತ್ತಿದೆ ಅನ್ನಬಹುದು. ಕುತೂಹಲ ನನಗೂ ಇದೆ. ಕಂತಿನಲ್ಲಿ ಬರೆಯುತ್ತಿರವುದರಿಂದ ಅಷ್ಟಾದರೂ ಬರವಣಿಗೆ ಆಗುತ್ತಿದೆಯೆನ್ನುವ ಸಮಾಧಾನ ಮಾತ್ರ ತತ್ಕಾಲಕ್ಕೆ ನನ್ನದು. ಮುಂದರಿಕೆಗೆ ಅಷ್ಟು ಸಾಕಲ್ಲ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕಣೇ.

ಸೀತಾರಾಮ. ಕೆ. / SITARAM.K said...

adbhuta kathaanaka shaili tammadu