ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 23 July 2010

ಗುರುವಂದನ

ಈಗ ಸುಮಾರು ಒಂದೂವರೆ ಗಂಟೆಯ ಹಿಂದಷ್ಟೇ ನಮ್ಮನ್ನಗಲಿದ ಹಿರಿಯ ಚೇತನ ಶ್ರೀ ಹರಿಹರೇಶ್ವರ ಅವರ ಕನ್ನಡಾತ್ಮಕ್ಕೆ ಶಾಂತಿ ಕೋರುತ್ತಾ... ಎಂಟು ವರ್ಷಗಳ ಹಿಂದೆ ಶ್ರೀ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿ ಅಮೆರಿಕೆಯನ್ನು ತೊರೆದು ಮೈಸೂರಿಗೆ ಹೊರಟು ನಿಂತಾಗ ಬರೆದಿದ್ದ ವಂದನಗೀತ...

ವಯೋವೃದ್ಧ ಜ್ಞಾನವೃದ್ಧ ಪ್ರೀತಿಬದ್ಧರು
ಕಣ್ಣ ಬೆಳಕ ಹೃದಯದೊಳಗೆ ಇಳಿಸಿಬಿಡುವರು

ಮಾತೆ-ಮಮತೆ, ಅನ್ನಪೂರ್ಣೆ, ಒಲವ ಕೊಡುವರು
ತಂದೆ-ಶಿಸ್ತು, ಮಾರ್ಗದರ್ಶಿ, ಬಲವ ಬೆಳೆವರು

ಕೈಯ ಹಿಡಿದು ಹೆಜ್ಜೆಯಿರಿಸಿ ಗುರಿಯ ತೋರ್ವರು
ಸಾಧನೆಯಲಿ ಸಂಗ ನೀಡಿ ಗರಿಯನೀವರು

ಅಂತರಂಗ ಸಖ್ಯಕೊಂದು ಅರ್ಥವಿತ್ತರು
ಆತ್ಮದೌನ್ನತ್ಯದಾ ದಾರಿ ತೆರೆದರು

ಕನ್ನಡತನ ಕನ್ನಡಮನ ಕನ್ನಡವುಸಿರು
ಕಂಡವರಿಗೆ ಸುಜ್ಞಾನವ ಉಣಿಸುವ ಬೇರು

ಬಿಟ್ಟರಿಲ್ಲ ಇವರಿಗೆ ಸಮ, ಯಾವ ದೇಶ ಊರು
ನಂದಿನಿ ಮಿಗೆ ಸುಮನೆಯರಿಗೆ ಹನಾಸುನಂ ತೌರು

ಹರಿಗೆ ಲಕ್ಷ್ಮಿ, ಹರಗೆ ನಾಗ, ಈಶ ಪಂಡಿತ
ನಮನಯೋಗ್ಯರಿವರು- ಜೋಡು ಶಾರದಾಂಕಿತ
(೧೦-೧೦-೨೦೦೨)

2 comments:

ಸೀತಾರಾಮ. ಕೆ. / SITARAM.K said...

ಗುರುವನ್ದನೆಯ ಗೀತೆ ಮಧುರವಾಗಿದೆ. ಅವರ ನಿಧನದಂದು ಅದನ್ನೇ ಇಲ್ಲಿ ನೀಡಿ ಆ ಚೇತನದ ಜೀವನ ದರ್ಶನ ಮಾಡಿಸಿದ್ದೀರಿ.

ಸುಪ್ತದೀಪ್ತಿ suptadeepti said...

ವಂದನೆಗಳು ಸೀತಾರಾಮ್ ಸರ್. ಆ ಗುರುಚೇತನದ ಜೀವನದರ್ಶನ ಮಾಡಿಸುವಷ್ಟು ಶಕ್ತಳಲ್ಲ ನಾನು. ನನ್ನರಿವಿಗೆ ಬಂದಷ್ಟನ್ನ ಬರಹಕ್ಕಿಳಿಸಿದ್ದೇ ನನ್ನ ಹೆಗ್ಗಳಿಕೆ.