ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 16 February, 2010

ಪಯಣ

ನೆತ್ತಿಗೆ ಮುತ್ತಿತ್ತವರ ಅತ್ತ ಕಳಿಸಿ ಬಂದಾಗ
ಮನೆಯೆಲ್ಲ ಭಣಭಣ ಮನವೆಲ್ಲ ಒಣಒಣ
ಭಾವಗಳ ಒಸರು ಮತ್ತೆ ಪಸೆಯಾಗಿ ಹನಿದು
ಧಾರೆಯಾಗಲು ಬೇಕು ಕ್ಷಣ-ಕ್ಷಣ ದಿನ-ದಿನ

ಕಾಲವೇನು ಸಾಗುತ್ತದೆ ಯಾರ ಹಂಗಿಲ್ಲದೆ
ಮುಳ್ಳುಗಳ ಗುಂಗಿಲ್ಲದೆ ನಲಿವುಗಳ ರಂಗಿಲ್ಲದೆ
ನಮ್ಮ ಬಾಳು ನಮ್ಮದು ಒಲವ ಪಥದೊಳಗೆ
ನಗುನಗುತ ಕೈಹಿಡಿದು ಸಾರಥ್ಯ ಮಾಡುವಾಗ

ಜೊತೆಯೆಂದ ಮಾತ್ರಕ್ಕೆ ಭಿನ್ನವಿಲ್ಲದೆಯಿಲ್ಲ
ಬಣ್ಣಗಳ ಸಮರಸವೇ ಒಂದು ಸುಂದರ ಚಿತ್ರ
ಬದುಕು ಹೀಗೇ ಎಂದು ಯಾರು ಕಂಡವರಿಲ್ಲ
ನಮ್ಮ ಬಟ್ಟೆಯ ನಾವೆ ಕಂಡು ಕಟ್ಟಿಕೊಳಬೇಕು

ಹಿಂಚೆ-ಮುಂಚೆಗಳ ಸುಳಿ ಧೂಳಗೋಪುರವೆತ್ತಲು
ಧೃತಿಗೆಡದೆ ಸಾಗುವುದು ಛಲಬಲ್ಲವರ ಬಂಡಿ
ಸಾಕು-ಬೇಕುಗಳೊಳಗೆ ಸರಿಯುತಿರೆ ಕನಸುಗಳು
ನೆಮ್ಮದಿಯ ಸೆಲೆ ನಿಲುಕಿ ನಮ್ಮದೇ ಒಂದು ಬಿಂದು

ತೂಗುಲೋಲಾಕಿನ ಲಾಸ್ಯ ನಡೆಯಂತೆ ಜಗ
ಎದ್ದ ಅಲೆ ಇಳಿದೆದ್ದು ಸೂರ್ಯ ತಾರಗೆ ಚಂದ್ರ
ಅರಿಯದುದ ಅರಿತಂದು ನಮ್ಮ ಗುರಿ ನಿಚ್ಚಳವು
ಅರಿವಿನತ್ತಲೆ ಗಮನ ಇಡಲು ಸುಗಮವು ಪಯಣ
(೧೦-ಸೆಪ್ಟೆಂಬರ್-೨೦೦೯)

3 comments:

ಸೀತಾರಾಮ. ಕೆ. / SITARAM.K said...

ಚೆ೦ದದ ಕವನ. ಒಳ್ಳೆಯ ಪದ ಜೋಡಣೆ. ಈ ಸಾಲು ತು೦ಬಾ ಇಷ್ಟವಾಯಿತು-"ಜೊತೆಯೆಂದ ಮಾತ್ರಕ್ಕೆ ಭಿನ್ನವಿಲ್ಲದೆಯಿಲ್ಲ ಬಣ್ಣಗಳ ಸಮರಸವೇ ಒಂದು ಸುಂದರ ಚಿತ್ರ"

sunaath said...

Beautiful!

ಸುಪ್ತದೀಪ್ತಿ suptadeepti said...

ಸೀತಾರಾಮ್ ಸರ್, ಸುನಾಥ್ ಕಾಕಾ, ಇಬ್ಬರಿಗೂ ವಂದನೆಗಳು.