ರಾಧೆ ರಾಧೇ ಎನದೆ ಅರೆಘಳಿಗೆಯೂ ಇರದೆ
ರಮಿಸಿ ಕಾಡಿದ ನನಗೆ ಏನಾಯಿತೋ
ರಾಧೆಯಾ ನೆರಳಿರದೆ ಗೆಜ್ಜೆಯಾ ದನಿಯಿರದೆ
ರಂಗಿನಾಟದ ಹುರುಪು ಹಾಳಾಯಿತೋ
ಕಿರಿಯನೆಂದೆಲ್ಲರೂ ಹಿರಿತನವನಾಡುತ್ತ
ಕೀಟಲೆಯನಾಡ್ಯಾಡಿ ಕೆಣಕುತಿರಲು
ಕಿನ್ನರಿಯ ಲೀಲೆಯಲಿ ಪ್ರೀತಿಯಲಿ ಕಾಯುತ್ತ
ಕಿಂಕಿಣಿಯನಾಡಿ ನೀ ಮನವ ಗೆಲಲು
ಹಾಲುಮೊಸರನು ಮೆಚ್ಚಿ ಬೆಣ್ಣೆಬೆಟ್ಟವನೆತ್ತಿ
ಹಸುಮಂದೆಯಲಿ ಕರುಗಳೊಡನಾಡುತ
ಹಾಲಾಹಲವ ಸುರಿವ ಹಾವ ಹೆಡೆಯನು ಮೆಟ್ಟಿ
ಹಾಡಿ ಆಡಿದ ನನ್ನ ಜೀವ ಗೆಣತಿ
ಮಾವ ಕರೆದನು ಎಂದು ಮನೆಯ ತೊರೆದೆನು ಅಂದು
ಮರೆಯುವೆನು ಹೇಗೆ ನಾ ಮನದಂಗಳ
ಮಾಳಿಗೆಯಲೇ ನಿಂದು ಪರದೆ ಹಿಂದೆಯೆ ನೊಂದು
ಮಾತು ಮರೆಸಿದೆ, ತುಳುಕಿಸದೆ ಕಂಗೊಳ
ಒಮ್ಮೆಯಾದರು ಬಂದು ನಿನ್ನ ಕಾಂಬೆನು ಎಂದು
ಒಂದಾಸೆ ಹೊತ್ತಿದ್ದೆ ಅರಮನೆಯಲಿ
ಒರಗುದಿಂಬಿನ ಪೀಠ ನನಗೆ ಅಂಟಿದೆಯೆಂದು
ಒಣನೆಪವು ಎಳೆಯಿತದು ಬಿಡು ಭರದಲಿ
ಪಂಚಬಾಣನ ಮಿತ್ರ ಯುದ್ಧಸಾರುವ ಹೊತ್ತು
ಪೂರ್ಣ ಚಂದಿರನೊಳಗೆ ಕೋಲಾಹಲ
ಪಚ್ಚೆಪಸರಿದ ಬಯಲು ಎದೆಗೆ ಬಾಣವನಿತ್ತು
ಪ್ರಾಣ ಬೇಡಲು ನೆನಪು ದಾವಾನಲ
ರಾಜಕಾರಣ ಬೇಡ ರಾಜ್ಯಭಾರವು ಬೇಡ
ರಾಧೆ, ನಿನ್ನಯ ಪ್ರೇಮವೊಂದು ಸಿಗಲಿ
ರಾಶಿ ಹೊನ್ನೂ ಬೇಡ ರಾಯತನವೂ ಬೇಡ
ರಾಧೆ, ಯಮುನೆಯ ತಟವು ನಮಗೆ ಇರಲಿ
(೧೬-ಎಪ್ರಿಲ್-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Saturday, 12 September 2009
Subscribe to:
Post Comments (Atom)
8 comments:
ಜ್ಯೋತಿ,
ರಾಧೆ ಹಾಗು ಗೋಪಿಯರು ಕೃಷ್ಣನ ವಿರಹದಿಂದ ಬಳಲುವ ಕವನಗಳೇ ನಮ್ಮ ಸಾಹಿತ್ಯದಲ್ಲಿ ಹೇರಳವಾಗಿ ತುಂಬಿವೆ. ಕೃಷ್ಣನು ರಾಧೆಯ ವಿರಹದಿಂದ ಬಳಲುವ ಗೀತೆಯನ್ನು ನಾನು ಓದುತ್ತಿರುವದು ಪ್ರಥಮ ಸಲ.
ಎರಡನೆಯದಾಗಿ ಕೃಷ್ಣ ಹಾಗು ರಾಧೆಯರ ಪ್ರೇಮದ ಮಾಧುರ್ಯ ಮತ್ತು ಭಾವನೆಗಳ ಸುಕೋಮಲತೆ ಈ ಗೀತೆಯಲ್ಲಿ ಸಿದ್ಧಿ ಪಡೆದಿವೆ. ಪದಗಳ ಬಳಕೆ most appropriate ಇರುವದು ಇದರ ಒಂದು ಕಾರಣ ಎನ್ನಬಹುದು.
ಧನ್ಯವಾದ ಕಾಕಾ.
ರಾಧಾ ಕೃಷ್ಣರದು ಅಮರ ಪ್ರೀತಿ, ಅಖಂಡ ಪ್ರೀತಿ. ಅದರ ಒಂದು ಮುಖವನ್ನಷ್ಟೇ ನಮ್ಮ ಸಾಹಿತ್ಯಗಳಲ್ಲಿ ಕಾಣುತ್ತೇವೆ, ನಿಜ. ಅದೇ ಯೋಚನೆಯಲ್ಲಿ ನಾನು, "ಕೃಷ್ಣನಿಗೆ ಏನನಿಸಿರಬಹುದು?" ಅಂದುಕೊಂಡು ಬರೆಯುವ ಪ್ರಯತ್ನ ಮಾಡಿದೆ, ಅಷ್ಟೇ. ನಿಮಗೆ ಮೆಚ್ಚುಗೆಯಾಗಿದ್ದು ನನಗೊಂದು ಗರಿ.
ಪಂಚಬಾಣನ ಮಿತ್ರ ಯಾರು ಎಂದು ಗೊತ್ತಾಗಲಿಲ್ಲ!, ಕಾರಣ ಪಂಚಬಾಣನ ಶತ್ರು ಬಹಳ ಪ್ರಸಿದ್ಧ ವ್ಯಕ್ತಿ/ಶಕ್ತಿ (ಈಶ್ವರ ), ಆದರೆ ಪಂಚಬಾಣನಿಗೆ ಮಿತ್ರರು ಅಸಂಖ್ಯ! (ನನ್ನನ್ನು ಒಳಗೊಂಡು!).
"ರಾಜಕಾರಣ ಬೇಡ ರಾಜ್ಯಭಾರವು ಬೇಡ
ರಾಧೆ, ನಿನ್ನಯ ಪ್ರೇಮವೊಂದು ಸಿಗಲಿ
ರಾಶಿ ಹೊನ್ನೂ ಬೇಡ ರಾಯತನವೂ ಬೇಡ" - ಈ ಶಬ್ಧಗಳು ಎಷ್ಟು ಸಾರ್ವತ್ರಿಕವಾಗಿದೆ ಎಂದರೆ, (H.D.)ಕುಮಾರಸ್ವಾಮಿಗೆ ಕೂಡ ಹೊಂದುವಂತಿದೆ.
ಲೇಸರ್ ಮಾರಾಯ, ಏನು ಇಷ್ಟು ಸಮಯ ಬೇಸರಾಗಿತ್ತೆ? ಎಲ್ಲೋಗಿದ್ದೆ?
ಈ ಕವನದಲ್ಲಿ ನಾನು ಹೆಸರಿಸಿದ "ಪಂಚಬಾಣನ ಮಿತ್ರ" ನೀನಂತೂ ಅಲ್ಲ. ಯಾಕಂದ್ರೆ ನೀನು ಯುದ್ಧ ಮಾಡುವ ಮೂಡ್ ಹೊಂದದವನು. ಇಲ್ಲಿರುವವ, ನಮ್ಮಂಥ ನರಮಾನವರ ಮೇಲೆ ಯುದ್ಧಕ್ಕೆ ಸನ್ನದ್ಧನಾಗಿ ಪ್ರತೀವರ್ಷವೂ ಟೀಂ ಪಟಾಲಾಂ ಕಟ್ಟಿಕೊಂಡು ಬರುವವ, ವಸಂತ.
ಕವನ ಸಾರ್ವಕಾಲಿಕವಾಗಬೇಕಾದರೆ ಸಾರ್ವತ್ರಿಕ ಸತ್ಯವನ್ನು ತೋರಿಸಬೇಕಲ್ಲ. ಯಾವುದೇ ರಾಜಕಾರಣ, ರಾಜ್ಯಭಾರ, ರಾಯತನ ಒಲ್ಲೆನಾದರೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳೆನಾದರೂ "ಅಂದಿನ" ವಿಷಯ "ಇಂದಿನ ಸತ್ಯ"ವಾಗಿರುವುದು ಕಾಲಮಹಿಮೆ, ಅಷ್ಟೇ.
Nice one. Keep writing.
ಧನ್ಯವಾದಗಳು ಪ್ರಶಾಂತ್. ಹೀಗೇ ಬರುತ್ತಿರಿ, ನಿಮ್ಮ ಅಭಿಪ್ರಾಯ ಬರೆಯುತ್ತಿರಿ.
ಸು೦ದರ ಕಲ್ಪನೆ. ಕೃಷ್ಣನ ವಿಲಾಪ ವಿನೂತನ.
ಪ್ರತಿಕ್ರಿಯೆಗೆ ಧನ್ಯವಾದಗಳು, ಸೀತಾರಾಮ್.
ನಮ್ಮಂತೆಯೇ ಮಾನವನಾಗಿ ಹುಟ್ಟಿ, ಮೊಂಡಾಟ ತುಂಟಾಟ ಆಡಿ ಬೆಳೆಯುವ ಕೃಷ್ಣನಿಗೆ ವಿರಹದ ತಾಪವಿಲ್ಲವೆ? ಆತ ಹೇಗೆ ತೊಳಲಾಡಬಹುದು? ಈಯೆಲ್ಲ ಯೋಚನೆಗಳೊಳಗೆ ಬರೆದ ಕವನವಿದು. ಸಹೃದಯರಿಗೆ ಮೆಚ್ಚುಗೆಯಾಗುತ್ತಿರುವುದು ಖುಷಿ.
Post a Comment