ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 2 August 2009

ಶಿವೋಹಂ

ಜ್ಞಾನ ಮುದ್ರಾಂಕಿತ ಧ್ಯಾನಯೋಗಿಯ
ಅರ್ಧನಿಮೀಲಿತ ರೆಪ್ಪೆಗಳ ಕೆಳಗೆ
ಸಿಡುಕು ಮೂಗಿನ ನೇರದೊಳಗೆ
ಅರೆ-ಬರೆಯಾಗಿ ಕಂಡದ್ದು-
ಅಂತಃಪುರದ ಹಂಸತಲ್ಪದಡಿಯಲ್ಲಿ
ಕುರುಡುಗತ್ತಲ ಮೂಲೆಯಲ್ಲಿ
ಮೂಷಿಕ ಸವಾರಿ ಹೊರಟ
ಮುದ್ದಿನ ಕುವರ.

ಲೋಕ ಸುಟ್ಟರೂ ತೊಂದರೆಯಿಲ್ಲ
ಕೆಂಡಗಣ್ಣನ ಕೋಪ
ಆರದೆ ವಿಧಿಯಿಲ್ಲ
ಬಲಿಯಾಗಲೇಬೇಕು;
ತಲೆಕೊಡಲು ಯಾರಿದ್ದೀರಿ
ಕಂದನ ಮುಂಡಕ್ಕೆ?
(೦೮-ಸೆಪ್ಟೆಂಬರ್-೨೦೦೬)

7 comments:

sunaath said...

ಪುರಾಣಪ್ರಸಂಗಕ್ಕೆ ನೀಡಿದ ಹೊಸ ಒಳನೋಟ ರೋಮಾಂಚಕವಾಗಿದೆ.

ಸುಪ್ತದೀಪ್ತಿ suptadeepti said...

ಧನ್ಯವಾದ ಕಾಕಾ.
ಕೋಪದಿಂದ ಅನಾಹುತ ಕಟ್ಟಿಟ್ಟದ್ದು ಅಂತ ಅದೆಷ್ಟು ಸಲ, ಯಾವ್ಯಾವ ರೀತಿಯಲ್ಲಿ ಏನೇನೆಲ್ಲ ರೂಪದಲ್ಲಿ ನೆನಪಿಸಿಕೊಂಡರೂ ಹಾನಿಯಿಲ್ಲವಲ್ಲ! ಹಾಗೆ ಈ ಹೊಸ ನೋಟ.

ಶ್ರೀವತ್ಸ ಜೋಶಿ said...

>>>"ತಲೆಕೊಡಲು ಯಾರಿದ್ದೀರಿ
ಕಂದನ ಮುಂಡಕ್ಕೆ?"

ಈ ಸಾಲು ಯಾಕೋ ಗೊಂದಲದಿಂದ ಕೂಡಿದೆಯಲ್ಲ? ನೀವು ’ಮುಂಡ’ ಎನ್ನುವುದಕ್ಕೆ ಇಲ್ಲಿ ಏನರ್ಥ ಇಟ್ಟುಕೊಂಡಿದ್ದೀರಿ?

ಸಂಸ್ಕೃತದಲ್ಲಿ (ಮತ್ತು ಕನ್ನಡದಲ್ಲೂ)
ಮುಂಡ = ಶಿರಸ್ಸು
ರುಂಡ = ತಲೆಯಿಲ್ಲದ ದೇಹ, ಕತ್ತಿನ ಕೆಳಗಿನ ಶರೀರ.

ಆದರೆ ಕನ್ನಡದಲ್ಲಿ ಬಹುತೇಕವಾಗಿ ಇದು ಉಲ್ಟಾ ಆಗಿ ಉಪಯೋಗವಾಗುವುದು ಹೆಚ್ಚು. ವೈರಿ-ರುಂಡ-ಚೆಂಡಾಡಿದಳು (ಒನಕೆ ಓಬವ್ವ) ಹಾಡಿನಲ್ಲೂ ರುಂಡವೆಂದರೆ ತಲೆಯೋ ಎಂಬ ಭಾವನೆ ಬರುತ್ತದೆ. ಆದರೆ, ಮುಂಡ = ತಲೆ. ರುಂಡ = ತಲೆಯನ್ನು ಹೊರತುಪಡಿಸಿದ ಶರೀರ.

ಇನ್ನು, ನಿಮ್ಮ ಕವನದ ಸಾಲಿನಲ್ಲಿ "ತಲೆ ಕೊಡಲು ಯಾರಿದ್ದೀರಿ ಕಂದನ ಮುಂಡಕ್ಕೆ?" ಎನ್ನುವುದನ್ನು ಹೀಗೂ ಅರ್ಥೈಸಬಹುದು. ಕಂದನ ಮುಂಡ ಕತ್ತರಿಸಿದ್ದೇನೆ, ಅದಕ್ಕೆ ಒಂದು ರಿಪ್ಲೇಸ್‌ಮೆಂಟ್ ತಲೆ ಬೇಕು, ಕೊಡಲಿಕ್ಕೆ ಯಾರು ಸಿದ್ಧರಿದ್ದೀರಿ?" ಎಂದು. ನೀವು ಈ ಅರ್ಥದಲ್ಲಿ ಬರೆದಿರೋ ಇಲ್ಲವೋ ನನಗೆ ಗೊತ್ತಿಲ್ಲ.

sritri said...

"ವೈರಿ-ರುಂಡ-ಚೆಂಡಾಡಿದಳು (ಒನಕೆ ಓಬವ್ವ) ಹಾಡಿನಲ್ಲೂ ರುಂಡವೆಂದರೆ ತಲೆಯೋ ಎಂಬ ಭಾವನೆ ಬರುತ್ತದೆ."


ರುಂಡಮಾಲಿನಿ" ಎಂದರೂ, ಇದೇ ಅರ್ಥವೇ ಬರುತ್ತದೆ ಅಲ್ಲವೇ? ಬರಹ ನಿಘಂಟಿನಲ್ಲಿ ರುಂಡ,ಮುಂಡ ಎರಡಕ್ಕೂ ’೧ ತಲೆಯಿಲ್ಲದ ದೇಹ’ ಎಂಬ ಅರ್ಥವೇ ಇದೆ.

ಸುಪ್ತದೀಪ್ತಿ suptadeepti said...

ವತ್ಸ, ವೇಣಿ,
ಧನ್ಯವಾದಗಳು.

ನನಗೆ ತಿಳಿದಂತೆ ಕನ್ನಡದಲ್ಲಿ ರುಂಡ ಮುಂಡ ಎರಡೂ ತಲೆ ಮತ್ತು ತಲೆಯಿಲ್ಲದ ದೇಹ- ಎರಡೂ ಆಗಿ ಉಪಯೋಗದಲ್ಲಿವೆ. ಮುಂಡನ ಅನ್ನುವಾಗ ತಲೆ ಎನ್ನುವ ಅರ್ಥ ಕಾಣುತ್ತದೆ; ಅದರಿಂದಲೇ "ಮುಂಡೆ" (ಮುಂಡನ ಮಾಡಿಸಿಕೊಂಡವಳು) ಅನ್ನುವುದು ವಿಧವೆಗೆ ಕೆಟ್ಟ ಹೆಸರಾಗಿ ರೂಢಿಯಲ್ಲಿ ಬಂದಿದೆ. ಅದೇ ಮೂಲವಾಗಿ "ಮಂಡೆ" ಎನ್ನುವ ಪದವೂ ಬಂದಿದೆ. ಹಾಗೇನೇ, "ರಂಡೆ" ಅನ್ನುವ ತುಳುನಾಡಿನ ಪದವೂ ವಿಧವೆಯ ಪರ್ಯಾಯವಾಗಿ, ರುಂಡದಿಂದ ಮಾರ್ಪಾಡು ಹೊಂದಿದೆ.

ಸಂಸ್ಕೃತದಲ್ಲಿ, ರುಂಡಮಾಲಿನಿ ಕಾಳಿಕಾದೇವಿ ಮಾತ್ರ ಶಿರಸ್ಸುಗಳ ಮಾಲೆಯನ್ನೇ ಧರಿಸಿರುತ್ತಾಳೆ (ಅವಳನ್ನು ಎಲ್ಲೂ ಯಾರೂ ಮುಂಡಮಾಲಿನಿ ಅಂದದ್ದು ನನಗಂತೂ ಗೊತ್ತಿಲ್ಲ). ಹಾಗೇನೇ, ಚಂಡ-ಮುಂಡರನು ಚೆಂಡಾಡಿದವಳು ಚಾಮುಂಡಿ. ಅವಳು ಅವರಿಬ್ಬರ ಶಿರಸ್ಸನ್ನು ಕತ್ತರಿಸಿ ಚೆಂಡಿನಂತೆಯೇ "ಒದ್ದಾಡು"ವುದನ್ನು ಯಕ್ಷಗಾನಗಳಲ್ಲಿ ನೋಡಿದ ನೆನಪು. ಹಾಗೆಂದೇ ಅವಳನ್ನು ಚಂಡ ಮುಂಡರ ರುಂಡಗಳ ಚೆಂಡಾಡಿದವಳೆಂದು ವಂದಿಸುತ್ತಾರೆ. ಈ ತರ್ಕದಲ್ಲಿ, ರುಂಡ=ತಲೆ; ಮುಂಡ= ತಲೆಯನ್ನು ಹೊರತಾದ ದೇಹ.

"ಮುಂಡನ" ಪದದ ಅರ್ಥ ಬೋಳಿಸಿಕೊಂಡದ್ದು, ಬೋಳಾದದ್ದು, ದೀಕ್ಷೆ ಪಡೆದದ್ದು, ಕ್ಷೌರವಾದ ತಲೆ- ಹೀಗೆಲ್ಲ. ಈ ನೆಲೆಯಲ್ಲೂ ಮುಂಡ=ತಲೆಯಿಲ್ಲದ ದೇಹ (ಮೊಂಡಾದ ದೇಹ!).

ಸಾಮಾನ್ಯವಾಗಿ, ಇವೆರಡೂ ಸಾಂದರ್ಭಿಕವಾಗಿ ಎರಡೂ ಅರ್ಥಗಳನ್ನು ಹೊಮ್ಮಿಸುತ್ತವೆ, ಪಡೆಯುತ್ತವೆ. ಇವೆರಡೂ Interchangeable ಪದಗಳಾಗಿ ಬಳಕೆಯಲ್ಲಿವೆ.

ವತ್ಸ, ಈಗ ನಿಮ್ಮ ಪದಚಾಣಾಕ್ಷತನಕ್ಕೆ ಇದೊಂದು ಸಾಮಗ್ರಿ ಒದಗಿಸಿದೆ ಅಂದುಕೊಂಡಿದ್ದೇನೆ. ರುಂಡ-ಮುಂಡ ಇವೆರಡನ್ನೂ ಪರಸ್ಪರ ಪೂರಕವಾಗಿ, ವಿರೋಧವಾಗಿ, ಪದಬದಲಾಗಿ.... ಆಟವಾಡಿಸಿ ತೋರಿಸ್ತೀರ?

ಇಷ್ಟೆಲ್ಲ ವಿಶ್ಲೇಷಣೆ ನಡೆಸಿದ ಮೇಲೆ ನನ್ನ ವೈಯಕ್ತಿಕ ನಿರ್ಧಾರ- ರುಂಡ=ತಲೆ. ಮುಂಡ=ದೇಹ.

ಸುನಾಥ ಕಾಕಾ, ಈ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುತ್ತೀರ?

ಶ್ರೀವತ್ಸ ಜೋಶಿ said...

೧) "ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆ...." ಪದ್ಯದಲ್ಲಿ ಪುರಂದರದಾಸರೆನ್ನುತ್ತಾರೆ-

ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ
ಹಿಂಡು ಮಕ್ಕಳು ಎನ್ನ ಕಾಡುತಿಹರು
ಮುಂಡ ಮೋಚಿದೆ ನಾನು ಇನ್ನಾರು ಗತಿಯೆನಗೆ
ಪುಂಡರೀಕಾಕ್ಷ ನೀ ಪಾಲಿಸೈ ತಂದೆ

ಇಲ್ಲಿ ಮೋಚು = ಬೋಳಿಸು. ಕ್ಷೌರಮಾಡು ಎಂದು ಅರ್ಥ. ಮೋಚಿ ಪದಕ್ಕೆ ಚಮ್ಮಾರ‍ ಇದ್ದಂತೆ ಹಜಾಮ ಎಂಬ ಅರ್ಥವೂ ಇದೆ.
===============

೨) ಶಂಕರಾಚಾರ್ಯ ವಿರಚಿತ ಮಹಿಷಾಸುರ ಮರ್ದಿನೀ ಸ್ತೋತ್ರದಲ್ಲಿ
"ಅಯಿ ಶತಖಂಡ ವಿಖಂಡಿತ ರುಂಡ ವಿತುಂಡಿತ...." ಎಂದು ಬರುತ್ತದೆ. ನೂರು ಭಾಗಗಳಾಗಿ ಮಾಡಲ್ಪಟ್ಟ ದೇಹ ಎಂಬರ್ಥದಲ್ಲಿ.

==========

೩) ಕೊನೆಯದಾಗಿ

ಮುಂಡಕ್ಕೆ ಕಟ್ಟಿದ್ದರಿಂದ ಮುಂಡಾಸು; ರುಂಡಕ್ಕೆ ಕಟ್ಟಿದರೆ ರುಂಡಾಸು ಆಗಬೇಕಿತ್ತಲ್ಲ? (ಸಂಡಾಸು ಅಲ್ಲವಷ್ಟೆ?) :-)

ಸುಪ್ತದೀಪ್ತಿ suptadeepti said...

ವತ್ಸ, ಧನ್ಯವಾದ.

೧) ಕನ್ನಡದ ಬಳಕೆಯಲ್ಲಿ ಬಹಳಷ್ಟು ಕಡೆ ಮುಂಡ=ತಲೆ ಎಂದೇ ಚಾಲ್ತಿಯಲ್ಲಿದೆ. ದಾಸರೂ ಅದನ್ನೇ ಪ್ರಯೋಗಿಸಿದ್ದಾರೆ. ಮಂಡೆ, ಮುಂಡಾಸು ಮುಂತಾದವು ಅಲ್ಲಿಂದಲೇ ಬಂದಿವೆ.

೨) ಸಂಸ್ಕೃತದ ಸಂದರ್ಭದಲ್ಲಿ: <<"ಅಯಿ ಶತಖಂಡ ವಿಖಂಡಿತ ರುಂಡ ವಿತುಂಡಿತ....">>
ಇಲ್ಲಿ ರುಂಡ=ದೇಹ ಎಂದೇ ಆಗಬೇಕಾಗಿಲ್ಲ. ನೂರು ಚೂರುಗಳಾಗಿ ತುಂಡರಿಸಲ್ಪಟ್ಟ ಶಿರಸ್ಸು ಆಗಬಹುದಲ್ಲ (ಬೇತಾಳ ಕತೆಗಳಲ್ಲಿ ಸಾವಿರ ಹೋಳುಗಳಾಗಬಹುದಾದ ತಲೆ, ರಣಚಂಡಿಯ ಕೈಯಲ್ಲಿ ನೂರು ತುಂಡುಗಳಾಗಲಾರದೇಕೆ!).

ಕಳೆದ ಸೆಪ್ಟೆಂಬರ್-ಅಕ್ಟೋಬರಿನಲ್ಲಿ ಊರಿನಲ್ಲಿದ್ದಾಗ ನನ್ನ ತಮ್ಮ ಇದೇ ವಿಷಯ ಚರ್ಚೆಗೆ ಎತ್ತಿಕೊಂಡು ರುಂಡ=ತಲೆ, ಮುಂಡ=ದೇಹ ಅನ್ನುವುದನ್ನು ಆರು ಸಂಪುಟಗಳುಳ್ಳ ಸಂಸ್ಕೃತ ನಿಘಂಟೊಂದರಿಂದ ನಿರೂಪಿಸಿ ತೋರಿಸಿ ನನ್ನ ಸಂಶಯ ನಿವಾರಿಸಿದ. ({ಅಷ್ಟೂ ಗ್ರಂಥಗಳನ್ನು ನಮ್ಮ ಮಣಿಪಾಲದ ಮನೆಯಲ್ಲಿ ತಂದಿಟ್ಟ. ನಾವು ಬೀಗ ಹಾಕಿ ಇಲ್ಲಿ ಬಂದೆವಾದ್ದರಿಂದ ಅವೀಗ ಬೀಗದೊಳಗಿವೆ. ಆ ಸಂಪುಟಗಳ ಸಂಪಾದಕರು-ಪ್ರಕಾಶಕರು ಯಾರ್ಯಾರೆಂದು ಮರೆತಿದ್ದೇನೆ. ಮತ್ತೆ ಊರಿಗೆ ಹೋದಾಗ ನೋಡಿ ನಿಮಗೂ ತಿಳಿಸುತ್ತೇನೆ. ಅಲ್ಲೀತನ್ಕ....})