ಬಣ್ಣ ಬಣ್ಣದ ಲೋಕ, ರಂಗು ದೀಪದ ನಾಕ-
ಅದರಾಚೆ ಜೀವನದಿ ಲಾಸ್ಯವಿಲ್ಲ
ಪಾತ್ರದೊಳಗಿನ ಪಾಕ, ಅಭಿನಯದ ರಸತೂಕ-
ಅವಗಣನೆಗೆದುರಾಗಿ ಮೋದವಿಲ್ಲ
ಅಜ್ಜ-ಅಪ್ಪನ ವೃತ್ತಿ, ಉಸಿರೆಳೆವ ಉತ್ಪತ್ತಿ-
ಅಲೆಮಾರಿ ಬದುಕಿನಲಿ ಬೇರು ಇಲ್ಲ
ಸಂಸ್ಕೃತಿಯ ಮುಖವೆತ್ತಿ, ಜೀವ ಭಾವವ ಬಿತ್ತಿ-
ಅವತಾರ ಮುಗಿದೊಡನೆ ಹೆಸರು ಇಲ್ಲ
ಕಿರುಗೆಜ್ಜೆ ಝೇಂಕಾರ, ಚಕ್ರತಾಳದ ಭಾರ-
ಭಾಗವತಿಕೆಯ ಮೋಡಿ, ರಾಗ ಕೋಡಿ
ದೇವಳದ ಅಂಗಳದಿ, ಬಯಲಿನಲಿ ಮಂಟಪದಿ-
ಭಾಷೆ ಮೀರಿದ ಭಾವ, ಅನುಭಾವ ನಾಡಿ
ಹುಬ್ಬು-ಕಣ್ಣಿನ ಕುಣಿತ ಮೋಜಿನುಡುಗೆಯ ಸೆಳೆತ-
ತಾಳ-ಲಯ-ಗತಿಯಲ್ಲಿ ವಾಲಿ ಕುಂತಿ
ಚೆಂಡೆಯೇಟಿಗೆ ಭರತ, ಸೂರ್ಯನುದಯಕೆ ಇಳಿತ-
ಬಣ್ಣ-ಬೆಳಕಿನ ಆಟ, ಹರಿಸಿ ಭ್ರಾಂತಿ
(೦೧-ಜುಲೈ-೨೦೦೩)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Tuesday, 21 April 2009
Subscribe to:
Post Comments (Atom)
5 comments:
ಜ್ಯೋತಿ ಅಕ್ಕಾ...
ತುಂಬ ಇಷ್ಟವಾಯಿತು.
"ಸಂಸ್ಕೃತಿಯ ಮುಖವೆತ್ತಿ, ಜೀವ ಭಾವವ ಬಿತ್ತಿ-
ಅವತಾರ ಮುಗಿದೊಡನೆ ಹೆಸರು ಇಲ್ಲ" ಈ ಸಾಲುಗಳು ಇನ್ನಷ್ಟು ಇಷ್ಟವಾದವು.
ಬದುಕೆಂಬ ರಂಗಸ್ಥಳಕ್ಕೂ ಹೊಂದಿಕೆಯಾಗುವಂತಿದೆ.
ಜ್ಯೋತಿ ಅಕ್ಕ.
ರಂಗಸ್ಥಳ ಇಷ್ಟವಾಯ್ತು.ಯಾಕೋ ಕೊನೆಯ ಪ್ಯಾರಾ ಸ್ವಲ್ಪ ಕಷ್ಟವಾಯ್ತು ನನಗೆ.
ಚಿಕ್ಕ ಕವನದ ಮೊದಲಲ್ಲೇ ಇದು ಯಕ್ಷಗಾನ ದ ಕುರಿತು ಬರೆದದ್ದು ಎಂದು ವೇದ್ಯವಾಗುತ್ತದೆ. ಒಂದು ಆಕ್ಷೇಪ ನನ್ನ ಕಡೆಯಿಂದ. "ಅವತಾರ ಮುಗಿದೊಡನೆ ಹೆಸರು ಇಲ್ಲ" - ಅವತಾರ ಮುಗಿದೊಡನೆ ಹೆಸರೇ ಎಲ್ಲಾ - ಎನ್ನುವುದು ಈ ರಂಗದಲ್ಲಿ ಹೆಚ್ಚು ಸೂಕ್ತ ಎಂದು ನನ್ನ ಅನ್ನಿಸಿಕೆ. ಸಮಂಜಸವಾದ ಉದಾಹರಣೆ ಎಂದರೆ ಇತ್ತೀಚಿಗೆ ರಂಗದಲ್ಲೇ ಬದುಕಿನ ಆಟ ಮುಗಿಸಿದ ಶಂಭು ಹೆಗಡೆ. ವಾಣಿಜ್ಯಿಕ ಲಾಭಗಲಿಲ್ಲದ ಈ ರಂಗದಲ್ಲಿ ಹೆಸರೇ ಎಲ್ಲಾ ಎನ್ನುವುದೇ ಹೆಚ್ಚು ಸೂಕ್ತ. ಮಾತ್ರವಲ್ಲ, ನಿಜ ಬದುಕಿನಲ್ಲೂ ಹಾಗೆ ಅಲ್ಲವೇ, ಅವತಾರ ಮುಗಿಸಿದ ಮೇಲೆ ಕೇವಲ ಕೀರ್ತಿ-ಶೇಷ ರಾಗಿ ಹೋಗುವುದೇ ಅಲ್ಲವೇ!.
"ಭಾಷೆ ಮೀರಿದ ಭಾವ, ಅನುಭಾವ ನಾಡಿ" - ಇದು ಕಾರಂತರ ಪ್ರಾಯೋಗಿಕ ಯಕ್ಷಗಾನ ಬ್ಯಾಲೆಯ ಕುರಿತಾದದ್ದು ಎಂದು ತೋರುತ್ತದೆ. ಯಕ್ಷಗಾನದಲ್ಲಿ ಭಾಷೆ/ಮಾತು ಅಗತ್ಯವೇ ಇಲ್ಲ ಎಂದು ಭಾವಿಸಿದ್ದ ಶಿವರಾಮ ಕಾರಂತರು ಬ್ಯಾಲೆಯನ್ನು ಸೃಷ್ಟಿಸಿದರು. ಅದರ ಛಾಅಯೆ ನಿಮ್ಮ ಕವನದಲ್ಲಿ ಬಹುಷಃ ಅಪ್ರಯತ್ನಕ ಪೂರ್ವಕವಗೆ ಬಂದಿದೆ ಎಂದು ನನ್ನ ಭಾವನೆ. ಒಟ್ಟಿನಲ್ಲಿ ಒಳ್ಳೆಯ ಕವನ ಎಂದು ನನ್ನ ಅನಿಸಿಕೆ. -D.M.Sagar
`ತೋಡಿ’ ರಾಗ ಕೇಳಿದ್ದೇನೆ, ಇದ್ಯಾವುದಪ್ಪಾ ’ಕೋಡಿ’ ರಾಗ ಎಂದು ಒಮ್ಮೆ ಗಲಿಬಿಲಿಗೊಂಡೆ. ಆಮೇಲೆ ಅರ್ಥವಾಯಿತು,ಕೋಡಿ ಎಂದರೆ ಪ್ರವಾಹ ಎಂಬ ಅರ್ಥ. ಆದ್ದರಿಂದ ರಾಗಪ್ರವಾಹ. ಅದೇ ಸರಾಗ!
ಆದರೆ ಒಂದು ಮಾತು. ನೀವು ’ತೋಡಿ’ ಎಂದು ಬರೆಯುತ್ತಿದ್ದರೂ ಕವನ ಅರ್ಥ ಕಳಕೊಳ್ಳುತ್ತಿರಲಿಲ್ಲ. ರಾಗದ ಹೆಸರೂ ಆಯ್ತು; ತೋಡುವುದು ಎಂಬ ಕ್ರಿಯಾಧಾತುವಿನ ಲ್ಯಬಂತರೂಪವಾದ ತೋಡಿ ಎಂಬ ಪದ (ಮೊಗೆದು ಎನ್ನುವ ಅರ್ಥದಲ್ಲಿ) ಸಮಂಜಸವೂ ಆಯ್ತು!
ಕವನ beautiful! ಯಕ್ಷರಂಗಸ್ಥಳದ ಚಿತ್ರಣ ಮೈಮನಗಳಲ್ಲಿ ಸ್ಫುರಿಸುವುದಕ್ಕೆ, ಚಂಡೆಮದ್ದಳೆಗಳ ದನಿ ಅನುರಣಿಸುವುದಕ್ಕೆ ಸಶಕ್ತ ಸಾಮರ್ಥ್ಯ ಹೊಂದಿದೆ. ನನಗೆ ಇಷ್ಟವಾಯಿತು.
ಶಾಂತಲಾ, ಭಾರ್ಗವಿ, ಸಾಗರ್, ವತ್ಸ,
ಧನ್ಯವಾದಗಳು.
ಶಾಂತಲಾ,
ಬಯಲಾಟದ ರಂಗಸ್ಥಳವನ್ನು ರೂಪಕವಾಗಿರಿಸಿಕೊಂಡು ಜೀವನ ರಂಗಸ್ಥಳದ ಕುರಿತಾಗಿಯೇ ಬರೆದದ್ದು ಇದು. ಅದನ್ನು ಗುರುತಿಸಿದ್ದಕ್ಕೆ ವಂದನೆಗಳು.
ಭಾರ್ಗವಿ,
ಕೊನೆಯ ಪ್ಯಾರಾ ಸ್ವಲ್ಪ ಒಗಟು- ಬಯಲಾಟಕ್ಕಿಂತಲೂ ಬದುಕಿನ ಆಟಕ್ಕೆ ಹತ್ತಿರವಾಗಿದೆ, ಅಷ್ಟೇ. ಈಗ ಅರ್ಥವಾಗಬಹುದು, ನೋಡು.
ಸಾಗರ್,
ಶಂಭು ಹೆಗಡೆಯವರದು ಅಸಾಮಾನ್ಯ ಬದುಕು. ಅವರೊಬ್ಬರಿಗೇ ಸಮೀಕರಿಸದೆ, ಅಸಂಖ್ಯಾತ ಯಕ್ಷ-ಕಲಾವಿದರ ಜೀವನಕ್ಕೆ, ಹಾಗೂ ಲಕ್ಷಾಂತರ ಸಾಮಾನ್ಯ ಜನರ ಜೀವನಕ್ಕೆ ಇದನ್ನು ಸಮೀಕರಿಸಿದರೆ ಕವನ ಇನ್ನಷ್ಟು ತೆರೆದುಕೊಳ್ಳುತ್ತದೆ. ಯಕ್ಷಗಾನದ ರಂಗಸ್ಥಳ ಇಲ್ಲಿ ರೂಪಕ ಮಾತ್ರ. "ಭಾಷೆ ಮೀರಿದ ಭಾವ, ಅನುಭಾವ"- ಎಲ್ಲರದ್ದೂ ಅಲ್ಲವೆ? ಎಷ್ಟೋ ವಿಷಯಗಳನ್ನು ಆಂತರಿಕವಾಗಿ ಅನುಭವಿಸುತ್ತೇವೆ, ಆದರೆ ಪದಗಳಲ್ಲಿ ಹಿಡಿದಿಡಲಾರೆವು. ಯಕ್ಷ-ಬ್ಯಾಲೆಯೇ ಈ ಸಾಲಿನ ಮಿತಿಯಲ್ಲ, ಬಾಳ-ಬ್ಯಾಲೆಯ ಗತಿ.
ವತ್ಸ,
ಸಂಗೀತದಲ್ಲಿ ನನಗೆ ಅಲ್ಪಜ್ಞಾನ. ಆದರೆ ಇಲ್ಲಿ ಉದ್ದೇಶ ಪೂರ್ವಕವಾಗಿ "ಕೋಡಿ" ಹರಿಸಿದ್ದು. ಕಾರಣ- ಯಕ್ಷಗಾನದಲ್ಲಿ "ತೋಡಿ" ರಾಗ ಬಳಸುತ್ತಾರೋ ಇಲ್ಲವೋ ತಿಳಿಯೆ. ಆದ್ದರಿಂದ ದ್ವಂದ್ವಾರ್ಥ ಕೊಡಹೋಗಿ ಅಧ್ವಾನವಾಗುವುದು ಬೇಡವೆಂದು ಯೋಚನೆ.
Post a Comment