ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 14 April, 2009

ಆಶಯ




ಪುಟ್ಟ ಹಣತೆ ಹೊಸಿಲಿನಲ್ಲಿ ಜಗಲಿಗಿಷ್ಟು ಬೆಳಕು,

ನಡುಮನೆಯಲಿ ಅಂಗಳದಲಿ ಮಸುಕು ಮಸುಕು ಮುಸುಕು.


ಗಾಳಿಯೆರಗಿ, ಸಿಡಿಲು ಗುಡುಗಿ, ಗಗನ ಗಮನ ನಯನ,

ಸೋನೆಯೊಳಗೆ ಮಂಜು ಇಂಗಿ ಸಾಧಿಸಿ ನವ ಅಯನ.

ಕರಗಲಿಲ್ಲ ಕೊರಗಲಿಲ್ಲ ಇಳೆಯು ಮಳೆಯ ಕೊಳೆಗೆ,

ತೂರಲಿಲ್ಲ ಹೊರಗ ಕೆಸರು ಮನದಂಗಳದೊಳಗೆ.


ಸಾರಲಿಹುದು, ಬೀರಲಹುದು, ತೋರಬಹುದು ಕಿರಣ,

ತೆರೆಯ ಸರಿಸಿ, ಹೊರೆಯ ಇಳಿಸಿ, ಮರೆಗೆ ಸರಿಯೆ ವರುಣ.

ಅರ್ಚನೆಯಲಿ ಆರತಿಯಲಿ ನೀಡಿ-ಪಡೆದು ತಿಲಕ,

ಹಣತೆಗಿಷ್ಟು ತೈಲವಿತ್ತು ಮಣಿದ ಎದೆಗೆ ಪುಳಕ.

(೨೦-ಸೆಪ್ಟೆಂಬರ್-; ೧೫-ಅಕ್ಟೋಬರ್-೨೦೦೫)

7 comments:

ಸುಪ್ತದೀಪ್ತಿ suptadeepti said...

"ನಾನು ಇದು ಬರಿ ತಮಿಳರ ನ್ಯೂ ಇಯರ್ ಅಂತ ಅಂದು ಕೊಂಡಿದ್ದೆ. ನಮ್ಮ ಕರ್ನಾಟಕದ ಮಂಗಳೂರು ಮತ್ತೆ ಕೆಲವು ಕಡೆ ಆಚರಿಸುತ್ತರೆಂದು ಗೊತ್ತಿರಲಿಲ್ಲ... ತುಂಬ ಧನ್ಯವಾದಗಳು ವಿಷು ಹಬ್ಬವನ್ನು ತುಂಬ ಚೆನ್ನಾಗಿ ವಿವರಿಸಿದ್ದಿರ...
ಒಳ್ಳೆಯ ಲೇಖನ.....
ಹಾಂ ನಿಮಗೂ ವಿಷು ಹಬ್ಬದ ಶುಭಾಶಯಗಳು
ಗುರು"

ಗುರು,
ಧನ್ಯವಾದಗಳು.
ವಿಷುವಿನ ಬಗೆಗಿದ್ದ ಹಳೆಯ ಲೇಖನದಲ್ಲಿ ನೀವು ಹಾಕಿದ ಪ್ರತಿಕ್ರಿಯೆಯನ್ನು ಇಲ್ಲಿ ಅಂಟಿಸಿ ಅದಕ್ಕೆ ಉತ್ತರಿಸುತ್ತಿದ್ದೇನೆ.
ನಮ್ಮ ಸಂಸ್ಕೃತಿಯಲ್ಲಿ ಎಷ್ಟೊಂದು ವೈವಿಧ್ಯಗಳು, ಬಿನ್ನತೆಗಳು. ಆದರೂ ನಾವೆಲ್ಲ ಒಂದೇ ನಾಡಿನವರು. ಇದೇ ನಮ್ಮತನ. ಬ್ಲಾಗ್ ಮೂಲಕ ಅಂಥ ಮಾಹಿತಿ ಸಂವಹನ. ಬರುತ್ತಿರಿ, ಬರೆಯಿತ್ತಿರಿ.

PARAANJAPE K.N. said...

ಸೌರಮಾನ ಯುಗಾದಿ ಹಬ್ಬದ ಶುಭಾಶಯಗಳು ನಿಮಗೂ

ಸುಪ್ತದೀಪ್ತಿ suptadeepti said...

ಹಾರೈಕೆಗಳಿಗೆ ಧನ್ಯವಾದಗಳು ಪರಾಂಜಪೆಯವರೆ.

Anonymous said...

ಜ್ಯೋತಿ ಅಕ್ಕ,
ನಿಮಗೂ ನಿಮ್ಮ ಮನೆಯವರಿಗೂ ವಿಷು ಹಬ್ಬದ ಶುಭಾಶಯಗಳು.
ಸೌರ ಯುಗಾದಿ ಅಂತ ಹೆಸರು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಲೇಖನ ತುಂಬಾ ಚೆನ್ನಾಗಿದೆ ೨ ಚಂದದ ನಗುವಿನೆಳೆಗಳಿಂದ.ಬೆಳಿಗ್ಗೆನೆ ನನಗೆ ಕಣಿ ತೋರಿಸಿದ ಪ್ರೀತಿಯ ಅಕ್ಕನಿಗೊಂದು ನಮನ.
ಪಿ ಎಸ್ ಪಿ

ಸುಪ್ತದೀಪ್ತಿ suptadeepti said...

ಪಿ.ಎಸ್.ಪಿ.,
ನಿನ್ನ ಪ್ರೀತಿಯ ಹಾರೈಕೆಗಳಿಗೆ ಧನ್ಯವಾದಗಳು, ವಂದನೆಗಳು.
ಬ್ಲಾಗ್ ಲೋಕದ ಅನುಕೂಲ ಅದುವೇ ತಾನೆ? ಎರಡು ವರ್ಷ ಹಳೆಯದಾದರೂ ಅಂದಿನ ಬರಹಕ್ಕೆ ಇಂದು ಒಂದು ಕೊಂಡಿ ಕೂಡಿಸಿದರೆ ಅದು ಮತ್ತೊಮ್ಮೆ ಹೊಸದೆನಿಸುತ್ತದೆ, ಓದದವರಿಗೂ, ಹಿಂದೆ ಓದಿದವರಿಗೂ! ಆನಂದ ಮಾತ್ರ ನಿತ್ಯ ನಿರಂತರವಾಗಿರಲಿ, ಎಲ್ಲರಿಗೂ.

ಶಾಂತಲಾ ಭಂಡಿ (ಸನ್ನಿಧಿ) said...

ಜ್ಯೋತಿ ಅಕ್ಕಾ...
ನಿಮಗೂ ಸಹ ವಿಷು ಯುಗಾದಿಯ ಹಾರ್ದಿಕ ಶುಭಾಶಯಗಳು.

ಸುಪ್ತದೀಪ್ತಿ suptadeepti said...

ಶಾಂತಲಾ,
ಹೊಸ ವರುಷದ ಶುಭಾಶಯಗಳು ವಸಂತದ ಹೊಸಿಲಲ್ಲಿರುವ ಪೋರ್ಟ್ ಲ್ಯಾಂಡ್ ಊರಿನಿಂದ, ನಿಮಗೆಲ್ಲರಿಗೂ.