ನನ್ನೊಲವ ಸಾಕಾರ, ನಿನಗೇಕೆ ಅಲಂಕಾರ,
ಬಂಡುಂಬ ಬಯಕೆಯಲಿ ಕಂಪಿಸಿದೆ ಅಧರ;
ರಾಗದಾಲಾಪಕ್ಕೆ ಮುಂಗುರುಳ ವೈಯಾರ,
ಕಾತರದ ಎದೆಯೊಳಗೆ ಗುಂಯ್ಗುಡುವ ಭ್ರಮರ.
ನನ್ನ ಕೈಯೊಳು ನಿನ್ನ ಕೈಯಿರಿಸಿ ಕರೆತಂದೆ,
ಈ ಮನೆಯ ಹೊಸಿಲಲ್ಲಿ ನಿಲ್ಲಿಸಿದೆ ಅಂದು;
ಅಕ್ಕಿ-ಬೆಲ್ಲವ ಚೆಲ್ಲಿ ಅಳುಕುತ್ತ ಒಳಬಂದೆ,
ಮಂಗಳದ ಸರಮಾಲೆ ನಿನ್ನೊಡನೆ ತಂದು.
ನನ್ನಮ್ಮ-ಅಪ್ಪನಿಗೆ ಪ್ರೀತಿ ತೋರಿದೆ ನೀನು,
ತಮ್ಮ-ತಂಗಿಯ ಜೊತೆಗೆ ನಿಜ ಮಮತೆಯನ್ನು;
ಬಣ್ಣಗೆಡದಿರುವಂತೆ ಬೆರೆಸಿರುವೆ ಹಾಲ್ಜೇನು,
ಮನದಂಗಳದ ತುಂಬ ಬೆಳ್ನೊರೆಯ ಜೊನ್ನು.
ನನ್ನವರು ಎಂದವಳೆ, ನೀನೆಂದು ನನ್ನವಳು,
ಪ್ರೇಮದೀವಿಗೆ ಹೊತ್ತು ಮುನ್ನಡೆಯುವವಳು;
ಕಾರ್ಗಾಲ ಮಿಂಚಲ್ಲಿ ಕಂದನನು ಕಂಡವಳು,
ಕಣ್ರೆಪ್ಪೆಯೊಳು ಬೆಳಕ ಕಾಯುತಿರುವವಳು.
ನನ್ನೊಲವೆ, ಪ್ರಿಯವಧುವೆ, ದೀಪದೊಲು ನೀ ಬೆಳಗು,
ತೈಲವಾಗುವೆ ನಾನು ಆಂತರ್ಯದೊಳಗೆ;
ಸಂದಕಾಲದ ಬಲವು ಹರಡಿರಲಿ ಕುಸುಮ ನಗು,
ನಿನ್ನ ಜೊತೆಯಿರಲೆಂದು ಮಧುಚಂದ್ರವೆಮಗೆ.
(೦೬-೦೮-೨೦೦೩)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 9 April 2009
Subscribe to:
Post Comments (Atom)
2 comments:
ಕವನ ಸೊಗಸಾಗಿದೆ. ಆದರೆ, ಪತಿಯು ಪತ್ನಿಗೆ ಹೇಳುವ ಈ ಮಾತುಗಳು ಸಾಂಪ್ರದಾಯಕವಾಗಿದ್ದು, ಇವನ್ನು ನೀನು ’ಸರಿ’ ಎಂದು ಒಪ್ಪುವಿಯಾ?
ಕಾಕಾ,
ಸಾಂಪ್ರದಾಯಿಕವಾಗಿದ್ದರೂ ಇಂಥ ಮಾತುಗಳು ಪತಿಯ ಬಾಯಿಂದ ಪ್ರತ್ಯಕ್ಷವಾಗಿ ಬಂದದ್ದೇ ಆದಲ್ಲಿ ಯಾವ ಪತ್ನಿಯೂ ಕರಗಿಹೋದಾಳು ಅಂತ ನನ್ನ ಭಾವನೆ. ಕಷ್ಟ ಅಂದ್ರೆ, ಇವೆಲ್ಲ ಮಾತುಗಳಾಗಿ ಬರೋಲ್ವೆ?
ಸರಿ-ತಪ್ಪಿಗಿಂತಲೂ ಒಪ್ಪಿಕೊಂಡು ಹೊಂದಿಕೊಂಡು ನಡೆಯುವ ಮನಸ್ಸು ಮುಖ್ಯ; ಅಲ್ಲವೆ, ಕಾಕಾ?
Post a Comment