ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 30 March 2009

ಆ-ಕೃತಿ

ನಿನ್ನೆಯ ನಿನ್ನ ಬೆವರು
ಇಂದು ಹಸಿರಾದದ್ದು
ಒಬ್ಬರಿಗೇ ಗೊತ್ತು
ಹಸಿರು ಮತ್ತೆರಡು ಚಿಗುರಿ
ಮೊಗ್ಗು ಹೂವಾಗಿ ಕಾಯಾಗಿ
ಫಲಮಾಗಿ ಹಣ್ಣಾಗಿ
ಉಂಡವರ ಉಸಿರು ಹರಸಿದ್ದು
ನಿನ್ನನ್ನೇ, ನನ್ನನ್ನೇ, ಹಣ್ಣನ್ನೇ?

(೧೮-ಮಾರ್ಚ್-೨೦೦೯)

8 comments:

sunaath said...

ಆಹಾ, beautiful!

ಸುಪ್ತದೀಪ್ತಿ suptadeepti said...

Thanks ಕಾಕಾ.

Ittigecement said...

ಜ್ಯೋತಿಯವರೆ...

ಬಹಳ ಸುಂದರವಾಗಿ ಬರೆದಿದ್ದೀರಿ...

ಹೊಟ್ಟೆಕಿಚ್ಚಾಗುತ್ತಿದೆ..
ನನಗೆ ಹೀಗೆ ಬರೆಯಲು ಆಗುವದಿಲ್ಲವಲ್ಲವೆಂದು...

ಇನ್ನಷ್ಟು ಬರೆಯಿರಿ...

ಅಭಿನಂದನೆಗಳು

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಪ್ರಕಾಶ್.
ನಿಮ್ಮ ಹೊಟ್ಟೆಕಿಚ್ಚು ನನಗೊಂದು ಗರಿ ಎನ್ನಲೆ?
ಅಥವಾ, "ಹೊಟ್ಟೆಯ ಕಿಚ್ಚಿಗೆ ತಣ್ಣೀರ್ ಸುರಿಸು... ...ಓ ಕರ್ನಾಟಕ ಹೃದಯ ಶಿವ" ಅನ್ನಲೆ?

ಜಲನಯನ said...

ಉಂಡವರ ಉಸಿರು ಹರಸಿದ್ದು
ನಿನ್ನನ್ನೋ, ನನ್ನನ್ನೋ, ಹಣ್ಣನ್ನೋ??
ಮನದ ಊಹಾ ಲಹರಿಗೆ dimension ಕೊಟ್ಟ ಕಡೆಯ ಎರಡುಸಾಲುಗಳಿಗೆ...ಬಹುಪರಾಕ್...
ಚನ್ನಾಗಿದೆ...ನಮಗೂ ಒಂದ್ಸೊಲ್ಪ ಮಾರ್ಗದರ್ಶನ ಮಾಡಿ ಮೇಡಂ ...

ಸುಪ್ತದೀಪ್ತಿ suptadeepti said...

ಜಲನಯನ,
ಸ್ವಾಗತ, ಧನ್ಯವಾದ ಜೊತೆಜೊತೆಗೇ.
ನಮ್ಮ ಬಹುಪರಾಕಿಗೆ ತಲೆಬಾಗಿ ಸಲಾಮ್.
ಮಾರ್ಗದರ್ಶನ ಅನ್ನೋ ದೊಡ್ಡ ಜವಾಬ್ದಾರಿ ಕೊಟ್ರೆ ಹೇಗೆ? ಹೊರುವ ಶಕ್ತಿ ಬೇಕಲ್ಲ!

Ultrafast laser said...

ಒಳ್ಳೆಯ ಬಹಳ ಅರ್ಥ ಗರ್ಭಿತವಾದ ಬಹು ಅರ್ಥಗಳನ್ನು ಹೊಮ್ಮಿಸುವ ಚುಟುಕು-ಕವನ ಇಷ್ಟವಾಯಿತು. ಆ ಕೃತಿ ಎನ್ನುವುದು ಗುಣವಾಚಕವಾಗಿಯೂ ಯೋಗ್ಯ ಪ್ರಯೋಗ ಎಂದು ನನ್ನ ಭಾವನೆ. ಆ ಕೃತಿ ಇಂದ ಉದ್ಭವವಾಗುವ "ಆಕೃತಿ" ಯ ಬಗ್ಗೆ ಬರೆಯುವುದು ಓದುವುದು ಒಂದು ವಿಶಿಷ್ಟ ಅನುಭವ ಹಾಗು ಅದನ್ನು ಕೃತಿಗಿಳಿಸುವುದು ಹಾಗು ತದ್ವಾರ ಒದಗುವ ಪಡೆದ-ಕೊಟ್ಟ ಮೈ - ಮನಗಳ ಧನ್ಯತೆ ಯ ತೀವ್ರತೆ ಶಿಷ್ಟತೆಯನ್ನು ಮೀರಿದಾಗ ಮಾತ್ರ ಸಾದ್ಯ.
ಇಲ್ಲಿ ಮೇಲ್ನೋಟಕ್ಕೆ ಪ್ರಕೃತಿ-ಪುರುಷ ರ ಸಮಾಗಮದ ಪರಿಣಾಮದಿಂದ ಉದ್ಭವಿಸುವ ಹಸಿರು, ಕಾಯಿ, ಮಾಗುವುದು, ಹಾಗು ಅದನ್ನು ಭುಜಿಸಿದ ದನ್ಯತೆ ಯ ಅರ್ಥ ಕೊಟ್ಟರು ಆಳದಲ್ಲಿ ಅಥವಾ ಲಕ್ಷ್ಯಾರ್ಥದಲ್ಲಿ ಶುಕ್ಲ-ಶೋಣಿತ ಸಂಗಮ, ಹಾಗು ಅದರಿಂದ ಉದ್ಭವಿಸುವ ಜೀವ-ಸೃಷ್ಟಿ ಇದೆ ಎಂದು ನನ್ನ ಭಾವನೆ.
"ಹಣ್ಣಾಗಿ ಉಂಡವರ ಉಸಿರು ಹರಸಿದ್ದು" ಎನ್ನುವ ಪದ-ಪುಂಜಗಳಲ್ಲಿ ವ್ಯಕ್ತಿಯೋರ್ವನ ಸಮಾಜ-ಮುಖಿಯಾದ ಕೊಡುಗೆ ಅಥವಾ ಮನುಕುಲಕ್ಕೆ ಉಪಯುಕ್ತವಾದ ಸಾಧನೆ , ಹಾಗು ಅದನ್ನ ಪಡೆದ ಸಮಾಜದ ಕೃತಜ್ಞತಾ ಪೂರ್ವಕ ಧನ್ಯತೆ ಅಡಗಿದೆ ಎಂದು ನನ್ನ ಭಾವನೆ.
"ನಿನ್ನನ್ನೇ, ನನ್ನನ್ನೇ, ಹಣ್ಣನ್ನೇ" - ಇಲ್ಲಿ ಹರಸಿದ್ದು ಯಾರನ್ನು?. ಆತ್ಮಾ ವೈ ಪುತ್ರನಾಮಾಸಿ [ತನ್ನನ್ನೇ ತನ್ನ ಮಗನಲ್ಲಿ/ಮಗಳಲ್ಲಿ ಹಾಗು ಅವರ ಅಭ್ಯುದಯದಲ್ಲಿ ಕಂಡುಕೊಳ್ಳುವುದು] ಎನ್ನುವುದನ್ನು ಒಪ್ಪಿಕೊಂಡರೆ ಕೀರ್ತಿ ಪೂರ್ವಜರಿಗೆ, ಬದಲಿಗೆ, ಕೇವಲ ಪ್ರಸ್ತುತ ಪ್ರಚಲಿತದಲ್ಲಿರುವ ಅಸ್ತಿತ್ವ ವಾದವನ್ನು ಬಳಸಿಕೊಂಡರೆ ಕಾರ್ಯ-ಕಾರಣ ದ ಚೌಕಟ್ಟಿನ ಹೊರಗೆ ಪ್ರಶ್ನೆ ಬಂದು ನಿಲ್ಲುತ್ತದೆ.
ಒಟ್ಟಿನಲ್ಲಿ, ಇಷ್ಟವಾಯಿತು. -D.M.Sagar

ಸುಪ್ತದೀಪ್ತಿ suptadeepti said...

ಸಾಗರ್,
ನಾನು ಹಿಂದೊಮ್ಮೆ ನಿನಗೆ ಹೇಳಿದ್ದೆ, ನೀನು ಒಳ್ಳೆಯ ವಿಮರ್ಶಕ, ಕವನದ, ಲೇಖನದ ಒಳನಾಡಿಯನ್ನು ಸಹಜವಾಗಿ, ಸುಲಲಿತವಾಗಿ ಹಿಡಿಯಬಲ್ಲೆ ಎಂದು. ಇಲ್ಲಿ ಮತ್ತೆ ಅದನ್ನೇ ಸಾಬೀತುಗೊಳಿಸಿದ್ದೀ. ಇಪ್ಪತ್ತೊಂದೇ ಪದಗಳ ಪುಟ್ಟ ಕವನಕ್ಕೆ ದೀರ್ಘ ಆದರೆ ತಕ್ಕಂಥ ವಿವರಣೆಯಿತ್ತಿದ್ದಕ್ಕೆ ಧನ್ಯವಾದಗಳು ಕಣೋ.