ಗೆಳತಿಯರೊಡನೆ ಹರಟೆಯ ಹೊಡೆದು ಹಾಡಿ ಕುಣಿಯಲು ಅವಳಿಲ್ಲ
ಬಣ್ಣದ ಚಿಟ್ಟೆಯ ಬೆನ್ನಟ್ಟಿ ಹೋಗಿ ಬೆರಗನು ಬೀರಲು ಅವಳಿಲ್ಲ
ಅಪ್ಪನ ಲುಂಗಿಯು ಅಡಿಮೇಲೆಂದು ಕಿಲಕಿಲ ನಗಲು ಅವಳಿಲ್ಲ
ಅಮ್ಮನ ಸೀರೆಯ ಬಣ್ಣದ ಬಗ್ಗೆ ಪಿಸಿಪಿಸಿ ಕಿಸಿಯಲು ಅವಳಿಲ್ಲ
ಆಟಕೆ ಬರಲು ಅಮ್ಮನ ಮಣಿಸೆ ಮಜ್ಜಿಗೆ ಕಡೆಯಲು ಅವಳಿಲ್ಲ
`ಜೊತೆಗಿರಿ' ಎಂದು ಅಪ್ಪನ ಕತ್ತಿಗೆ ಜೋತು ಬೀಳಲು ಅವಳಿಲ್ಲ
ಅಣ್ಣನ ಜೊತೆಗೆ ಕೀಟಲೆಯಾಡಿ ದೂರನು ಕೊಡಲು ಅವಳಿಲ್ಲ
ಕ್ರಿಕೆಟ್ ನೋಡುತ ಅಣ್ಣನ ವಿವರಣೆ ಕೇಳಿ ಟೀಕಿಸಲು ಅವಳಿಲ್ಲ
ಅಜ್ಜನ ಬೇಡಿ ದ್ರಾಕ್ಷಿಯ ಪಡೆದು ಅಡಗಿಸಿ ತಿನ್ನಲು ಅವಳಿಲ್ಲ
ಅಜ್ಜಿಯ ಕಾಡಿ ಬೆಲ್ಲವ ಕೇಳಿ ಮೆಲ್ಲುತ ಬರಲು ಅವಳಿಲ್ಲ
ಛೇಡಿಸಿ ಪೀಡಿಸಿ ಚಿಕ್ಕನ ಹೆಗಲಲಿ ಸವಾರಿ ಹೊರಡಲು ಅವಳಿಲ್ಲ
ಅತ್ತೆಯ ಮಕ್ಕಳ ಜೊತೆಯಲಿ ನಲಿದು ಕುಲುಕುಲು ನಗಿಸಲು ಅವಳಿಲ್ಲ
ಅಜ್ಜಿಯ ತೋಟದ ಹೂಗಳನಾರಿಸಿ ಜಗಲಿಯಲಿರಿಸಲು ಅವಳಿಲ್ಲ
ಅಜ್ಜನ ಹೊಟ್ಟೆಯು `ಚಪಾತಿ ಹಿಟ್ಟೆಂದು' ಮರ್ದನ ಮಾಡಲು ಅವಳಿಲ್ಲ
ಮಾಮನ ಕತೆಗಳ ಕೇಳುತ ನಕ್ಕು ಬೆನ್ನಿಗೆ ಗುದ್ದಲು ಅವಳಿಲ್ಲ
ಅತ್ತೆಯು ಮಾಡುವ ಒತ್ತು ಶ್ಯಾವಿಗೆಯ ಎಳೆ ಎಳೆ ಬಿಡಿಸಲು ಅವಳಿಲ್ಲ
`ತಂಗಿ' `ತಮ್ಮ' ಎಂದು ಒಲಿಸಿ ಕಿರಿಯರ ರಮಿಸಲು ಅವಳಿಲ್ಲ
ಅಕ್ಕನ ಸ್ಥಾನದಿ ಹೆಮ್ಮೆಯ ಬೀರುತ ಮುಂದಾಳಾಗಲು ಅವಳಿಲ್ಲ
ನಾಟ್ಯವನಾಡುವ ಕನಸನು ಹೊತ್ತ ಸೂಜಿಗಣ್ಣಿನ ಅವಳಿಲ್ಲ
ಪ್ರಾಣಿಗಳನ್ನು ರಕ್ಷಿಸ ಹೊರಟ ಚಿಗರೆ ನಡಿಗೆಯ ಅವಳಿಲ್ಲ
ಹೋದಲ್ಲೆಲ್ಲೆಡೆ ನಗೆಯನು ಬೀರುವ ಜೀವದ ಚಿಲುಮೆ ಅವಳಿಲ್ಲ
ಮುದ್ದು ಮಾಡುತ ಮುತ್ತಿಗೆ ಕಾಡುತ ಗಮನವ ಸೆಳೆಯುವ ಅವಳಿಲ್ಲ
ವೇದಿಕೆಯಿಂದ ಭಿತ್ತಿಗೆ ಏರಿದ ಮಂಜಿನ ಮಣಿಸರ ಅವಳಿಲ್ಲ
`ಬಂಗಾರ' ಬದುಕನು ಬಾಳಲು ಬಂದ `ಸುಂದರಿ' `ಚೆಲುವೆ' ಇನ್ನಿಲ್ಲ
(೧೦-ಮಾರ್ಚ್-೨೦೦೬)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Wednesday, 28 January 2009
Subscribe to:
Post Comments (Atom)
4 comments:
ಓದಲೇನೊ ಸರಳವಾದ ಬಾಲಶೈಲಿಯ ಕವನ. ಆದರೆ ಕವನದ ಒಡಲಲ್ಲಿ ನಿಹಿತವಾದ ಭಾವನೆಯು ಮನಸ್ಸನ್ನು ಜುಮ್ಗುಟ್ಟಿಸುತ್ತದೆ.
ಕಾಕಾ, ಒಡಲಲ್ಲಿ ಕಟ್ಟಿಕೊಂಡ `ಮಂಜಿನ' ಗಟ್ಟಿಗಳನ್ನು ಕೆತ್ತಿ ಕೊರೆದು ಅಗೆದು ಹೊರಹಾಕುವಾಗ ಪುಟ್ಟ ಪುಟ್ಟ ತುಣುಕುಗಳೇ ಎದ್ದು ಬಂದವು; ಹಾಗೇ ಪೋಣಿಸಿಟ್ಟೆ. ಬಂಡೆ ಪೂರ್ತಿ ಕರಗಿಲ್ಲ.
ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಒಡಲಿನಲ್ಲಿ ಮಂಜಿನ ಗಟ್ಟಿಗಳನ್ನು ಮೂಡಿಸಿದ ಅವಳು ಯಾರು?
ಹರೀಶ್, 'ಅವಳು' ಈಗ ಒಂದು ಅಪ್ಸರೆ, ಬೇರೆ ಯಾವುದೇ ಹೆಸರಿಲ್ಲದವಳು ಆಗಿ ಹೋಗಿದ್ದಾಳೆ. ಪ್ರತಿಕ್ರಿಯೆಗೆ ಧನ್ಯವಾದಗಳು. ಸರಿಯಾದ ಉತ್ತರ ಕೊಡದಿದ್ದಲ್ಲಿ ಕ್ಷಮೆಯಿರಲಿ.
Post a Comment