ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 7 November, 2014

ಗುರುತು (ಮಿನಿ ಕಥೆ)


          ಎಷ್ಟೋ ದಿನಗಳಿಂದ- ದಿನವೇನು, ವಾರಗಳೇ ಆದವು- ಇದ್ದೊಬ್ಬ ಮಗನೂ ಎಲ್ಲೋ ಕಳೆದುಹೋಗಿದ್ದಾನೆ. ಫೋನಾಗಲಿ, ಪತ್ರವಾಗಲಿ ಇಲ್ಲ.  ಬೇರಾವುದೇ ಸಂವಹನ ಇಲ್ಲದ ಹಳ್ಳಿ ನಮ್ಮದು. ಎಲ್ಲ ಬಗೆಯ ಜನರೂ ಬದುಕಿ ಬಾಳುತ್ತಿರುವ ಹಳ್ಳಿ. ಮಗ ಯಾಕೆ ಎತ್ತ ಹೇಗೆ ಹೊರಟುಹೋದನೆಂದು ಅರಿಯದ ನಾವಿಬ್ಬರು ಬರಿಯ ಗೊಂದಲದ ಕಾಡೊಳಗೆ ಮೋಡವಾಗಿದ್ದೇವೆ. ಇವಳಿಗೂ ಕಣ್ಣೀರು ಬತ್ತಿ ಹೋಗಿದೆ. ಮುಂದಿನ ದಾರಿಯೆಲ್ಲ ಮಬ್ಬುಮಬ್ಬು. ಹೊಟ್ಟೆ-ಬಟ್ಟೆಗಳ ಪರಿವೆಯಿಲ್ಲದ ಪರಿಸ್ಥಿತಿ ಬರದಿರಲಿ ಎಂಬುದೊಂದೇ ದಿನನಿತ್ಯದ ಪ್ರಾರ್ಥನೆಯಾಗುಳಿದಿದೆ. ಕಾಲಕ್ಕೆ ಕರುಣೆಯಿಲ್ಲ, ಸಾಗುತ್ತಲೇ ಇದೆ; ನಾವು ಜೊತೆಯಲ್ಲಿ ಕುಂಟುತ್ತಿದ್ದೇವೆ. 
          ಹದಿನಾರು ಕಿ.ಮೀ. ದೂರದ ಪೇಟೆಯಿಂದ ಪೊಲೀಸ್ ಪೇದೆಯೊಬ್ಬ ಸೈಕಲ್ ಮೆಟ್ಟಿಕೊಂಡು ನಮ್ಮ ಅಂಗಳದಲ್ಲಿ ಇಳಿದಾಗ ಎದೆ ಯಾಕೆ ಒಡೆಯಲಿಲ್ಲವೊ? ಮಾನವೀಯವಾಗಿ ಆತನಿಗೆ ಬೆಲ್ಲ-ನೀರು ಒದಗಿಸಿ, ಉಪ್ಪು-ಮೆಣಸು-ಇಂಗು ಬೆರೆಸಿದ ಮಜ್ಜಿಗೆ ಕುಡಿಸಿದೆವು. ಕೆಲಕ್ಷಣ ತಣ್ಣಗೆ ಕುಳಿತವನು ಸೈಕಲ್ಲೇರಿ ಬರುವಾಗ ಎಲ್ಲಿಯೋ ಕಳೆದುಕೊಂಡಿದ್ದ ಉಸಿರನ್ನು ಮತ್ತೆ ಹಳ್ಳಿಗಾಳಿಯಲ್ಲಿ ಕಂಡುಕೊಂಡ. ಮೆಲ್ಲನೆ ಸ್ವರವೆತ್ತಿದ.
          "ಪೇಟೆಯ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಒಂದು ಅನಾಮಿಕ ಹೆಣ ಸಿಕ್ಕಿದೆ. ನಿಮ್ಮ ಮಗ ಕಳೆದುಹೋಗಿರುವ ಬಗ್ಗೆ ದೂರು ದಾಖಲಾಗಿದೆಯಲ್ಲ. ಅದಕ್ಕೆ ಇದನ್ನು ತಿಳಿಸಿ ಹೋಗೋಣಂತ ಬಂದೆ. ಇಂದು ನನಗೆ ರಜೆ. ಸಾಹೇಬರು ತಿಳಿಸೋದಕ್ಕೆ ಹೇಳಿದಾಗ ಬೇರೆ ಯಾರೂ ಇಷ್ಟು ದೂರ ಬರೋದಿಕ್ಕೆ ಒಪ್ಪಿಕೊಳ್ಳಲಿಲ್ಲ. ನೀವು ಈಗಲೇ ಹೊರಡೋದಾದರೆ ನನ್ನ ಸೈಕಲ್ಲಲ್ಲೇ ಕರೆದುಕೊಂಡು ಹೋಗುತ್ತೇನೆ..." ಬರುತ್ತೀರಾ ಎನ್ನುವಂತೆ ನನ್ನ ಮುಖ ನೋಡಿದ; ನಾನು ಇವಳ ಮುಖ... ಕ್ಷಣಗಳು ಸಾಯುತ್ತಿದ್ದವು. ಅಂಗಳದ ತೆಂಗಿನ ತುದಿಯಲ್ಲಿ ಕಾಗೆಯೊಂದು ಚೀರಿತು. ಬರುತ್ತೇನೆಂದೆ, ಬಟ್ಟೆ ಬದಲಿಸಲು ಒಳಗೆ ನಡೆದೆ.
          ಇವಳು ಬಿಕ್ಕುಗಳ ನಡುವೆಯೇ ತೊದಲುತ್ತಿದ್ದಳು: "ಎಷ್ಟು ದಿನ ಆಯ್ತು... ...ಸಿಕ್ಕಿ?"
          "ನಿನ್ನೆಯಷ್ಟೇ ಸಿಕ್ಕಿದ್ದಮ್ಮ. ಸಂಜೆ ನಾಲ್ಕರ ಹೊತ್ತಿಗೆ ಕೋಟೆಕಣಿಯಲ್ಲಿ ಪೊದರಿನೊಳಗಿತ್ತು. ಮೊನ್ನೆ ನಮ್ಮಲ್ಲಿ ಕೋಮು ಗಲಭೆ ಆಗಿತ್ತು. ಅಲ್ಲಿ ಕೆಲವರನ್ನು ಅರೆಸ್ಟ್ ಮಾಡಿದ್ದೇವೆ. ಇವ ನಮ್ಮೂರಿನ ಹುಡುಗನಲ್ಲ ಅಂತ ಕಂಡಿತು. ಕೋಮು ಗಲಭೆಯಲ್ಲಿ ಶಾಮೀಲಾದ ಯಾರಿಗೂ ಪರಿಚಯ ಇಲ್ಲದ ಹುಡುಗ. ಹಾಗಾಗಿ... ಇಲ್ಲಿ ಬಂದೆ..."
          "ಎಷ್ಟು ವಯಸ್ಸಿದ್ದೀತು ಅವನದು?" ನಮ್ಮವನಲ್ಲವೆಂದು ಸುಳಿವು ಹುಡುಕಲು ಹೊರಟಂತಿತ್ತು ಅವಳ ಪ್ರಶ್ನೆ.
          "ಸುಮಾರು ಇಪ್ಪತ್ತೈದು ಇಪ್ಪತ್ತೆಂಟು ಇರಬಹುದಮ್ಮ..."

          ಅವನೇ ಏನು? ಎದೆ ನಿಲ್ಲದು. ಮೌನ ಮಾತ್ರ ಸ್ಥಾಯಿ.

          ಸೈಕಲ್ಲೇರಿ ಹೊರಟೆವು. ಸ್ವಲ್ಪ ದೂರ ನಾನು ಹಿಂದೆ, ಮತ್ತೆ ಸ್ವಲ್ಪ ದೂರ ಅವನು. ಹದಿನಾರು ಕಿ.ಮೀ. ಸೈಕಲ್ ಸವಾರಿ, ಅದೂ ಡಬಲ್ ರೈಡ್, ಜೊತೆಗೆ ಕುಸಿಯುವ ಹೃದಯ... ಬಹುತೇಕ ದಾರಿ ಸ್ಮಶಾನ ಮೌನ. ಇಬ್ಬರಲ್ಲೂ ಮಾತು ಕಡಿತಗೊಳಿಸುವ ಉದ್ವೇಗ. ಪೇಟೆಯ ಸಾರ್ವಜನಿಕ ಆಸ್ಪತ್ರೆಯ ಶೈತ್ಯಾಗಾರದ ಬಾಗಿಲೆದುರು ಬಂದಾಗ ಆತ ಮಾತೆತ್ತಿದ: "ಸ್ವಾಮಿ, ಕೊಂಚ ದೃಢವಾಗಿರಿ, ನಿಗಾ ಇಟ್ಟು ನೋಡಿ. ಗುರುತು ಸಿಕ್ಕೋದು ಸ್ವಲ್ಪ ಕಷ್ಟ. ಕಾಗೆ-ನಾಯಿಗಳು ಬಾಯಿ ಹಾಕಿವೆ..." ಕಾಲುಗಳು ನನ್ನನ್ನು ಎತ್ತಿ ಹಿಡಿಯುತ್ತಿಲ್ಲ. ಕೈಗೆ ಗೋಡೆ ಸಿಕ್ಕಿತು.
          "ಇವ್ರೇಯಾ?" ಗಡಸು ಸ್ವರಕ್ಕೆ ಕಣ್ಣು ತೆರೆಯಲೇಬೇಕಾಯ್ತು. ವೈದ್ಯರ ಜೊತೆಗೆ ಪೊಲೀಸ್ ಇನ್ಸ್ಪೆಕ್ಟರ್. ಪೇದೆ ಹೌದೆಂದಿರಬೇಕು. ಬಾಗಿಲು ತೆರೆಯಿತು. ಒಳಗೆ ಒಂದೇ ಒಂದು ಟೇಬಲ್. ಅದರ ಮೇಲೆ ಬಿಳಿ ಹೊದಿಕೆ ಹೊದ್ದ ಮುದ್ದೆ. ಇನ್ಸ್ಪೆಕ್ಟರ್ ಮುಂದೆ ಹೋಗಿ ಮುಖದ ಬಟ್ಟೆ ಸರಿಸಿದರು. ಮತ್ತೆ ನನ್ನ ಕಾಲುಗಳ ಮುಷ್ಕರ, ಕಣ್ಣುಗಳ ಕಾತರ ಅವಕ್ಕೇನು ಗೊತ್ತು! ಪಾದಗಳು ನೆಲಬಿಡಲಾರವು. ಅವುಗಳನ್ನು ಎಳೆಯುತ್ತಾ ಟೇಬಲ್ ಬಳಿಗೆ ಸಾಗಿದೆ. ಕುಂಟು ನಾಯಿ ಜೀವದಾಸೆಯಿಂದ ಮಾಂಸ ತುಂಡಿನ ಕಡೆ ಎಳೆದಾಡುವಂತೆ ಅನಿಸಿತ್ತು ಆ ಕ್ಷಣ. ಜೀವದಾಸೆಯೇ. ಇವನು ನನ್ನ ಕುಡಿಯಾಗಿಲ್ಲದಿರಲಿ. ಜೊತೆಗೇ ಇನ್ನೊಂದು ಯೋಚನೆ, ನನ್ನದಲ್ಲದಿದ್ದರೂ ಯಾರೋ ಒಬ್ಬ ತಂದೆಯ ಮಗ. ಅಮ್ಮನ ಜೀವ. ಅಯ್ಯೋ! ದೇವರೇ!  
          ತೆರೆದು ಬಿದ್ದ ಮುಖದಲ್ಲಿ ಗುರುತು ಹಿಡಿಯುವ ಯಾವುದೇ ಅಂಶಗಳು ಸ್ವಸ್ಥಾನದಲ್ಲಿರಲಿಲ್ಲ. ಕಣ್ಣು, ಮೂಗು, ಬಾಯಿ, ಕೆನ್ನೆ... ಪ್ರಜ್ಞಾಪೂರ್ವಕ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲೇಬೇಕಾಗಿತ್ತು. ಮತ್ತೆ ಊರಿಗೆ ಹಿಂದಿರುಗಿ ಅವಳಿಗೆ ಉತ್ತರಿಸಬೇಕಾಗಿತ್ತು. ಕುತ್ತಿಗೆ, ಹಣೆ... ಎಲ್ಲೆಲ್ಲೂ ಅವನ ಸುಳಿವಿಲ್ಲ. ಗುಂಗುರು ಕೂದಲು ಒದ್ದೆಯಾಗಿ ನೇರವಾಗಿಯೇ ಕಂಡವು. ಮತ್ತೆ ಗಮನಿಸಿದಾಗ ಸುರುಳಿಸುರುಳಿಗಳ ಅರಿವಾಯ್ತು. ಜೀವ ಝಲ್ಲೆಂದಿತು. ಅಲ್ಲೇ ಬದಿಯಲ್ಲಿದ್ದ ಒಂದು ಕಿವಿಯೂ ಯಾವುದರದೋ ನಾಲಿಗೆ ರುಚಿ ತಣಿಸಿರಬೇಕು. ಏನೋ ಆಸೆಯ ಝಲಕು ಇನ್ನೊಂದು ಕಿವಿಯನ್ನೂ ಗಮನಿಸಲು ಸೂಚಿಸಿತು. ಮತ್ತೆ ಮತ್ತೆ ದಿಟ್ಟಿಸಿದೆ. ನೋಡೇ ನೋಡಿದೆ. ಅಷ್ಟೂ ಹೊತ್ತು ನನ್ನೊಳಗೆ ಅಡಗಿ ಹುದುಗಿ ಮುದುಡಿ ಕೂತಿದ್ದ ಉಸಿರು ಬುಸ್ಸಂತ ಹೊರಬಂತು. ಕೋಣೆಯಿಂದ ಹೊರಗೆ, ಊರಿನವರೆಗೂ ಓಡುವ ದೈತ್ಯಶಕ್ತಿ ನನ್ನೊಳಗೆ ಉದ್ಭವಿಸಿತು.
          "ಇದು ನನ್ನ ಮಗನಲ್ಲ..." ಯಾರದೇ ಮುಖ ನೋಡದೆ ಊರ ದಿಕ್ಕಿಗೆ ಓಡತೊಡಗಿದೆ. ಆಸೆಯ ಪುಟ್ಟ ಕಿರಣ ಮೋಡಗಳ ನಡುವಿಂದ ಇಣುಕತೊಡಗಿತ್ತು. ಆದರೆ, ಎಷ್ಟು ದಿನ ಆ ಕಿರಣ ದಾರಿ ತೋರೀತು ಅನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ.   
(೧೪-ಜೂನ್-೨೦೧೪)

No comments: