ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 11 May, 2014

ಅಮ್ಮ ಸಂಕಟ

ಯಾರು ಮಂತ್ರ ಮಾಡಿದರೋ ರಂಗ ಅಳುತಿರುವ
ಯಾರ ಕಣ್ಣು ನಾಟಿದೆಯೋ ಕೃಷ್ಣ ಕನಲಿರುವ
ಯಾವ ಗಾಳಿ ಸೋಕಿತೇನೊ ಚೆನ್ನ ಬೆಂದಿರುವ
ಯಾಕೆ ಹೀಗೆ ಮನವ ಹಿಂಡಿ ಚೆಲುವ ನೊಂದಿರುವ

ಏನ ತಿನ್ನಲಿಕ್ಕಿದರೋ ಗೋಪಕನ್ನೆಯರು
ಎಲ್ಲಿ ಆಟಕೆಳೆದಿಹರೋ ಗೊಲ್ಲಬಾಲರು
ಎಂಥ ಮರದ ಕೆಳಗೆ ಓಡಿಯೋಡಿಬಂದನೋ
ಏಳಲೊಲ್ಲ ಮುದ್ದುಮಲ್ಲ, ನಲುಗಿ ಕೊರಗುವ

ಏನ ಕಂಡು ಬೆದರಿ ಬಂದು ನಡುಗುತಿರುವನೋ
ಎಲ್ಲಿ ನಗುವ ಕಳೆದುಕೊಂಡು ಮುದುರುತಿರುವನೋ
ಎಂಥ ಹೊಳೆಯ ಸುಳಿಯ ಒಳಗೆ ಸೆಳೆಗೆ ಸಿಲುಕಿದ
ಏರುತಿಹುದು ತಾಪ, ರವಿಯೆ ಹಣೆಯಲಿಳಿದನೋ

ಕಾಡಿಬೇಡಿ ಬೆಣ್ಣೆ ಮೊಸರು ಕೇಳುತಿದ್ದವ
ಕಾಣದಂತೆ ಕಣ್ಣ ಹಿಂದೆ ಕದ್ದು ಮೆದ್ದವ
ನೋಡು ಈಗ, ಬೇಡವೆಂದು ಮೊಗವ ತಿರುವಿದ
ನೋಟವೆಲ್ಲೊ, ಮುರಳಿಯೆಲ್ಲೊ, ಮನವ ಕಳೆದವ

ಅಣ್ಣರಾಮ ಹೇಳಿದಂಥ ಮಾತು ಸತ್ಯವೆ?
ಬಣ್ಣ ಎರಚಿ ಮಾಯಗಾತಿ ಮರುಳು ಗೈದಳೆ?
ಮೋಹನಾಂಗ ನನ್ನ ಕುವರ ಅವಳ ಒಲಿದನೆ?
ಮೋಹದಲ್ಲಿ ಮುಳುಗಿ ಮರೆತು ಮೋದ ತೊರೆದನೆ?
(೨೪-ಎಪ್ರಿಲ್-೨೦೧೪)

2 comments:

ISHWARA BHAT said...

ಅಮ್ಮನ ಸಂಕಟ ಸ್ವಲ್ಪ ತಡವಾಗಿ ಓದಿದ್ದು.. ಚೆನ್ನಾಗಿದೆ ಅಕ್ಕ.. ಒಳ್ಳೇ ದೃಶ್ಯಗಳನ್ನು ಕಂಡಂತಾಯ್ತು.

ಸುಪ್ತದೀಪ್ತಿ suptadeepti said...

ಓದಿ, ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಕಿರಣ್.