ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 29 November, 2010

ಸುಮ್ಮನೆ ನೋಡಿದಾಗ...೦೫

ಮರುದಿನ ಹೊಸ ಕಥೆಯನ್ನು ನೇಹಾಳ ಕೈಗೆ ರವಾನಿಸಿದೆ. ಮಧ್ಯಾಹ್ನದ ಊಟ ಮುಗಿಸಿ ಮೈದಾನದ ಮರದಡಿಗೆ ಸಾಗಿದೆವು. ಹೊಸ ಕಥೆಯ ಓದುವಿಕೆಯಲ್ಲಿ ಅಲ್ಲಿನ ಅಳಿಲು ಮತ್ತು ಗುಬ್ಬಚ್ಚಿಗಳೂ ಭಾಗಿಯಾದವು. ಎಲ್ಲೋ ಕಳೆದುಹೋಗಿದ್ದ ಎರಡು ಮನಸ್ಸುಗಳನ್ನು ಅಳಿಲು ಕಿಚಕಿಚ ಕಿರುಚಾಡಿ ಎಚ್ಚರಿಸಿತು. ಮೈದಾನದಲ್ಲಿ ಕ್ರಿಕೆಟ್ ಆಡಲು ಹುಡುಗರ ಗುಂಪು ಬರುತ್ತಿತ್ತು. ಕ್ಲಾಸುಗಳೆಲ್ಲ ಮುಗಿದೇಹೋಗಿದ್ದವು. ಸಂಜೆ ಐದಾಗಿತ್ತು. ಮೊತ್ತ ಮೊದಲ ಬಾರಿಗೆ ನಾವಿಬ್ಬರೂ ತರಗತಿಗಳಿಗೆ ಚಕ್ಕರ್ ಹಾಕಿದ್ದೆವು.

ನೇಹಾ ಕಿಚಾಯಿಸಿದಳು: ‘ನೋಡಿದ್ಯಾ ರೊಮ್ಯಾಂಟಿಕ್ ಲಹರಿ ಹೇಗಿರ್ತದೇಂತ? ಈವರೆಗೂ ಕ್ಲಾಸ್ ತಪ್ಪಿಸದ ನಾವಿಬ್ರೂ ಅದ್ರ ಹೊನಲಲ್ಲಿ ಮುಳುಗಿಹೋಗಿದ್ದೆವು ಅಂದ್ರೆ ಇನ್ನು ಅದೇ ಗುಂಗಿನಲ್ಲಿ ಹಾರಾಡುವವರ ಗತಿಯೇನು? ಗೊತ್ತಾಯ್ತಾ? ಅದ್ಕೇ ಹೇಳಿದ್ದು ರೊಮ್ಯಾಂಟಿಕ್ ಬರೀ ಅಂತ...’ ಸುಮ್ಮನೇ ಕೋಲೇಬಸವನ ಹಾಗೆ ತಲೆಹಾಕಿ ಹೆಜ್ಜೆ ಹಾಕಿದೆ. ನಿಜವಾಗಿಯೂ ನನ್ನ ಒಂದು ಭಾಗವನ್ನು ನಾನು ಕಥೆಯೊಳಗೆ ಕಳೆದುಕೊಂಡಿದ್ದೆ. ಇದನ್ನು ಬರೆದವಳು ನಾನೇನಾ? ನಂಬಿಕೆಯಿರಲೇ ಇಲ್ಲ.

ಯಾವುದೋ ಭ್ರಮಾಲೋಕದಲ್ಲಿ ತೇಲುತ್ತಾ ಮನೆಹೊಕ್ಕಿದವಳಿಗೆ ಮಾಮೂಲು ಸ್ವಾಗತ ಕಾದಿತ್ತು.
‘ಯಾಕಿಷ್ಟು ತಡ? ಎಲ್ಲಿ ಅಲೆದಾಡ್ತಿದ್ದಿ ಇಷ್ಟೊತ್ತು ಬೀದಿ ಬಸವಿ ಥರಾ? ನಿಂಗೇನು ಹೇಳುವವ್ರು ಕೇಳುವವ್ರು ಯಾರೂ ಇಲ್ವಾ? ಮರ್ಯಾದೆಯಿಂದ ಕಾಲೇಜ್ ಬಿಟ್ಟ ಕೂಡ್ಲೇ ಮನೆಗೆ ಬರಬಾರ್ದಾ? ರಸ್ತೆ ಗಸ್ತು ಹೊಡೀಲಿಕ್ಕೆ ಯಾರ್ ಹೇಳಿದ್ರು?...’
ಮುಂದುವರೀತಾ ಇತ್ತು ನಿರರ್ಗಳ ‘ಬೌಗುಳ’. ಅಮ್ಮನಿಗೆ ಹೀಗೆಲ್ಲ ಹೇಳಬಾರದು ಅನ್ನುವ ವಿವೇಚನೆ ಇದ್ದರೂ ಕೆಲವಾರು ವರ್ಷಗಳಿಂದ ಅವರ ಅವ್ಯಾಹತ ಬೌಬೌಬೈಗಳನ್ನು ಕೇಳೀಕೇಳೀ ರೋಸಿಹೋಗಿತ್ತು ಮನಸ್ಸು. ಅದ್ಕೇ ನನ್ನೊಳಗಿನ ಸ್ವತಂತ್ರ ಸ್ವಂತಿಕೆ ಕಥೆಯೊಳಗೆ ಬಿಚ್ಚಿಕೊಂಡಿತ್ತೆನ್ನುವುದು ಹೊಳೆಯಿತು. ‘ಅದಕ್ಕಾಗಿಯಾದರೂ ಅಮ್ಮನಿಗೆ ಥ್ಯಾಂಕ್ಸ್ ಹೇಳ್ಬೇಕು ನೀನು’ ಅಂತ ನೇಹಾ ಹೇಳಬಹುದು ಎನ್ನುವ ಊಹೆಯಿಂದ ನಗುವೇ ಬಂತು. ಬಚ್ಚಲುಮನೆಯಲ್ಲಿ ಕೈಕಾಲು ತೊಳೆಯುತ್ತಿದ್ದ ಕಾರಣ ನನ್ನ ನಗು ಅಮ್ಮನಿಗೆ ಕಾಣಲಿಲ್ಲ. ಇನ್ನೊಂದು ಅವಾಂತರಕ್ಕೆ ಅವಕಾಶವಾಗಲಿಲ್ಲ.

ರಾತ್ರೆಯೆಲ್ಲ ಮತ್ತೆ ಅದೇ ಕನಸು. ಕಥಾನಾಯಕಿಯೇ ನಾನಾದಂತೆ... ಹರ್ಷಣ್ಣ ನನಗಾಗಿ ಗುಲಾಬಿ ರಂಗಿನ ಚಿತ್ತಾರವುಳ್ಳ ಬಿಳೀ ಸಲ್ವಾರ್ ಬಾಂಬೇಯಿಂದ ತಂದಂತೆ... ಅದನ್ನು ಧರಿಸಿ ನಾನು ಮೋಡಗಳಲ್ಲಿ ತೇಲುತ್ತಾ ಸುಂದರ ರಾಜಕುಮಾರನೊಬ್ಬನನ್ನು ಭೇಟಿಯಾದಂತೆ... ಅರೇ... ಅವನು ನನ್ನ ಕ್ಲಾಸ್‍ಮೇಟ್ ಶರತ್‍ನ ಕಸಿನ್ ಅಲ್ವಾ? ಶಿವಮೊಗ್ಗದವನು! ಅವನ ಹೆಸರೇನು?...

‘ಏ ಕತ್ತೆ! ಏಳು. ಮನೆಕೆಲ್ಸ ಮಾಡ್ಲಿಕ್ಕೆ ನಿನ್ನತ್ತೆ ಬರ್ತಾಳಾ? ಏಳು ಮೇಲೆ...’
ಅಮ್ಮನ ಪಾದ ನನ್ನ ಎಡಗೈಯನ್ನು ತಿವಿಯುತ್ತಿತ್ತು. ನೇಹಾ ಮತ್ತು ಶರತ್ ನನ್ನ ಮನಸ್ಸಿನಲ್ಲಿ ಅಡಗಿಕೊಂಡರು. ಅವರಿಬ್ಬರ ಬೆನ್ನ ಹಿಂದೆ ನನ್ನ ರಾಜಕುಮಾರ. ಅವನನ್ನು ಸಂಪರ್ಕಿಸಲೇ? ಹೇಗೆ? ಯಾಕೆ? ನನ್ನ ಭ್ರಾಂತಿಯೊಳಗೆ ಅವನ್ಯಾಕೆ ತೆರೆದುಕೊಂಡ? ಮೊದಲೇ ನನ್ನ ಮನಸ್ಸಿನಲ್ಲಿ ಅವನಿದ್ದನೆ? ಕಳೆದ ವರ್ಷ ಕಾಲೇಜ್ ಡೇ ಸಂದರ್ಭದಲ್ಲಿ ಅವನನ್ನು ನೋಡಿದ್ದೇನೋ ನಿಜ. ಅಲ್ಲಿಗೇ ನಿಂತಿತ್ತು ಅದು. ಮಂಗಳೂರಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಕೆಮಿಸ್ಟ್ರಿ ಲೆಕ್ಚರರ್ ಆತ.

‘ವಸಂತ್’! ಬೆಳಕೊಂದು ಮನದೊಳಗೆ ನುಗ್ಗಿತೆ? ಪಾದಗಳಿಗೆ ಗೆಜ್ಜೆ ಯಾರು ಕಟ್ಟಿದರು? ಖಾಲಿ ಜಡೆಯ ಬುಡದಲ್ಲಿ ಮಲ್ಲಿಗೆಯ ಘಮ ಎಲ್ಲಿಂದ? ಹೊಸಗಾಳಿಯ ಅಲೆಯೇರಿ ಮನೆಗೆಲಸ ಮುಗಿಸಿಕೊಂಡು ಕಾಲೇಜಿಗೆ ಬಂದಾಗ ನೇಹಾ ನನ್ನತ್ತ ನೋಡಿದ ನೋಟಕ್ಕೆ ಏನಾದರೂ ಬೇರೆ ಅರ್ಥವಿದೆಯೆ? ಮಾಮೂಲಿನಂತೆ ಇರುವ ಪ್ರಯತ್ನ ವಿಫಲವಾಗುತ್ತಿತ್ತು. ಶರತ್ ಕಡೆ ಕಣ್ಣು ಹಾಯಿಸಲೂ ಸಾಧ್ಯವಾಗುತ್ತಿಲ್ಲ, ಅವನ ಕಸಿನ್ ನನ್ನೊಳಗೆ ಇರುವುದನ್ನು ಅವನೇ ಕಂಡರೆ?. ನೋಟ್ಸ್ ಕೇಳುತ್ತಾ ನನ್ನೆದುರು ನಿಂತವನಿಗೆ ನನ್ನ ಕೊಡೆ ಕೊಟ್ಟು ನಗೆಗೀಡಾದೆ. ಇವತ್ತು ಶುಕ್ರವಾರ. ಮಧ್ಯಾಹ್ನದ ನಂತ್ರ ನಮಗೆ ಯಾವುದೇ ಕ್ಲಾಸಸ್ ಇಲ್ಲ. ಬೆಳಗಿನ ತರಗತಿಗಳನ್ನು ಮುಗಿಸಿ ನೇಹಾ ಮನೆಗೇ ಹೋಗುವ ಪರಿಪಾಠ. ನಿಟ್ಟುಸಿರು ಬಿಟ್ಟು ಪಾಠಗಳ ಕಡೆ ಗಮನ ಕೊಡಲು ಪ್ರಯತ್ನಿಸಿದೆ. ಒಳಗಿನ ಕಾವು ಉಸಿರುಗಳಲ್ಲಿ ಹೊರಹರಿದು ಕೆನ್ನೆಗಳಿಗೆ ಜ್ವರವೇರುತ್ತಲೇ ಇತ್ತು. ನೇಹಾಳ ಮನೆ ತಲುಪಿದಾಗ ಜಾಜಿ ಮಂಟಪದ ನೆರಳೂ ಉಸಿರ್ಗರೆಯುತ್ತಿತ್ತೆ?

7 comments:

sunaath said...

ಜ್ಯೋತಿ,
ಕತೆಯನ್ನು ಆಸಕ್ತಿ ಕೆರಳಿಸುವ ಹಂತಗಳಲ್ಲಿ ಬೆಳೆಯಿಸುತ್ತ ಹೋಗುವದು ಸರಿಯಾದ ವಿಧಾನವೇ ಆದರೂ ಸಹ, ನಮ್ಮ(ಓದುಗರ) ಕುತೂಹಲ ದೀರ್ಘವಾಗಿದ್ದು, ನಿಮ್ಮ ಕಂತುಗಳು ಚಿಕ್ಕದಾಗಿರುವದು ಉಚಿತವೇ?

Pataragitti (ಪಾತರಗಿತ್ತಿ) said...

ಸುಪ್ತದೀಪ್ತಿ,

ಪಾಪ..ಕಾಲೇಜ್ ಕ್ಲಾಸ್ ಅಂತಾ ಇದ್ದಳು ಹುಡುಗಿ..ರೋಮ್ಯಾಂಟಿಕ್ ಕತೆ ಬರಿಸಿ ಚಕ್ಕರ್ ಹೊಡಿಸಿದ್ದಿರಿ :)

ಮುಂದಿನ ಕಂತಿನಲ್ಲಿ ಮತ್ತೆ ಕ್ಲಾಸಿಗ್ ಚಕ್ಕರ್ ಅನಿಸುತ್ತೆ.

-ಶಿವ್

ಮನಮುಕ್ತಾ said...

nice..

ಸುಪ್ತದೀಪ್ತಿ suptadeepti said...

ಕಾಕಾ, ಶಿವ್, ಮನಮುಕ್ತಾ, ಇಲ್ಲೀತನ್ಕ ಬಂದು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ಕಾಕಾ, ನಿಮ್ಮ ಕುತೂಹಲ ಎಷ್ಟು ದೀರ್ಘವಾಗಿದ್ದೆಂದು ನನಗೆ ಹೇಗೆ ತಿಳಿಯಬೇಕು? ಈಗ ತಿಳಿದಿದೆ. ಇನ್ನು ಮುಂದಿನ ಕಂತುಗಳು ತುಸು ದೀರ್ಘವಾದಾವು ಎಂದು ಆಶಿಸುತ್ತೇನೆ. ಆಗದೆ?

ಶಿವ್, ಮುಂದಿನ ಕಂತಿನಲ್ಲಿ ಕ್ಲಾಸಿಗೆ ಚಕ್ಕರ್ ಅಂತ ನೀವೇ ಘೋಷಿಸಿದಿರಲ್ಲ. ನೀವೇ ಆ ಕಂತನ್ನು ಬರೀತಿದ್ದೀರಾ ಹೇಗೆ? ವಾರಾಂತ್ಯದ ಲೆಕ್ಕದಲ್ಲಿ ನಾನಿದ್ದೆ.

Anonymous said...

chennaagide kathe ammanannu baiddiddu jaasti aayitEnO..!
mundina kantugaLu bEga barali
swalpa swalpanE barI bEDi please jaasti brIiri

oodalu shuru maadida takshana
mugidE hOguttade!

ಸುಪ್ತದೀಪ್ತಿ suptadeepti said...

ಅನಾಮಿಕರೆ, ಹೆಸರು ಹೇಳದೆಯೂ ಹೆಜ್ಜೆ ಗುರುತು ಹಾಕಿದ್ದಕ್ಕೆ ಧನ್ಯವಾದಗಳು.
ಅಮ್ಮನನ್ನು ಬೈದದ್ದು ಜಾಸ್ತಿಯಾಯ್ತು ಅಂತ ನಿಮಗನ್ನಿಸಿದೆಯಾ? ಕಥಾನಾಯಕಿಯ ಸ್ಥಾನದಲ್ಲಿ ನಿಂತು ನೋಡಿ, ಹೇಗನಿಸುತ್ತದೆ ಹೇಳಿ.
ಓದಲು ಶುರು ಮಾಡಿದ ತಕ್ಷಣವೇ ಮುಗಿದು ಹೋಗುವಂತೆಯೇ ಬರೆಯುತ್ತಿರುವುದು. ಒಂದೇ ಉಸಿರಿಗೆ ಓದಿ ಮುಗಿಸಿದೆ ಅಂತ ಯಾರಾದರೂ ಹೇಳಿದರೆ ಅದು ವಾಸ್ತವವಾಗಿರಬೇಕಲ್ಲ, ಅದ್ಕೆ.

ಸೀತಾರಾಮ. ಕೆ. / SITARAM.K said...

hariva lahaige takkudaada kathe...