ಕಾರ್ಗಡಲ ಅಲೆ ಹೆಪ್ಪುಗಟ್ಟಿ
ಕರಗಲಾರದೆ ಕೊರಗಿದಾಗ
ತುಳುಕಲಾರದ ಕೊಳದಲ್ಲಿ
ಸಿಡಿಲು-ಗುಡುಗು
ಕಾಣದ ಮಿಂಚಿನ ಸೆಳೆಗೊಡ್ಡಿ
ಅಂಚು ಕೊಂಚ ಹಸಿಯಾದಾಗ
ಕಟ್ಟೆಕೊನೆಯ ಏರಿಯಲ್ಲಿ
ಒಸರು-ಕೆಸರು
ಸಿಡಿಲ ಮರಿ ಹುಟ್ಟಿ ಬಂತೆಂದು
ಕಲ್ಲಣಬೆ ಆರಿಸುವಾಗ
ಬುಟ್ಟಿಯೊಳು ಮಿಡಿಹೆಡೆಯಲ್ಲಿ
ಉಸಿರು-ಹೆಸರು
ಬೆಳ್ನೊರೆಯ ಸೋಗಿನಲಿ ತೆರೆದು
ಎದೆಯ ಹೆಬ್ಬಂಡೆ ಹರಿದಾಗ
ಕಿಬ್ಬದಿಯ ಜೋಳಿಗೆಯಲ್ಲಿ
ಹಸಿವು-ಅಳಲು
(೨೨-ಮಾರ್ಚ್-೨೦೦೯)
(ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಆಯೋಜಿಸಿದ್ದ "ಯುಗಾದಿ ಕವನ ಸ್ಪರ್ಧೆ"ಯಲ್ಲಿ ದ್ವಿತೀಯ ಬಹುಮಾನಕ್ಕೆ ಪಾತ್ರವಾದ ಕವನ. ಇದರ ಅರ್ಥ, ಸಂದೇಶ ಏನಿರಬಹುದೆಂದು ನಿರ್ಣಾಯಕರು ಸುಮಾರು ಮುಕ್ಕಾಲು ಗಂಟೆ ಕಾಲ ಚರ್ಚಿಸಿದರಂತೆ. ನಿಮಗೇನನ್ನಿಸುತ್ತದೆ? ತಿಳಿಸುವಿರಲ್ಲ.)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Tuesday, 30 March 2010
Subscribe to:
Post Comments (Atom)
6 comments:
ಜ್ಯೋತಿ ಅಕ್ಕಾ...
ನೀರಿನ ವಿವಿಧ ಪಾತ್ರಗಳೊಳಗೆ ವಿವಿಧ ರೂಪದ ಭಾವನೆಗಳ ಸುಳಿವು ಸಿಕ್ಕಿದ್ದಂತೂ ಸತ್ಯ.
ಇಷ್ಟು ಮಾತ್ರ ನನಗನ್ನಿಸಿದ್ದು.
ಶಾಂತಲಾ, ನಿನ್ನ ಪ್ರತಿಕ್ರಿಯೆಗೆ ಧನ್ಯವಾದ. ಮೂವರು ನಿರ್ಣಾಯಕರಿಗೂ ಬರೆದ ನನಗೂ ತೋರದೇ ಇದ್ದ ಹೊಸ ಹೊಳಹು ನಿನಗಿದರಲ್ಲಿ ಕಂಡಿದೆಯಲ್ಲ. ಇದೇ ನೋಡು ಕವನದ ವ್ಯಾಪ್ತಿ ಹಿರಿದಾಗುವ ರೀತಿ. ಥ್ಯಾಂಕ್ಸ್ ಕಣೇ.
ತುಂಬಾ ಸುಂದರ ಕವನ,
ನನಗೆ ಅನ್ನಿಸುತ್ತದೆ, ಮಾನವನ ಮನಸ್ಸಿನ ಸೂಕ್ಷ್ಮಗಳ ಅನಾವರಣ ಎಂದು
ಕವನವೇ ಹಾಗೆ,
ಒಬ್ಬೊಬ್ಬರಿಗೆ ಒಂದೊಂದು ರೀತಿ ಗೋಚರಿಸುತ್ತದೆ
ಗುರುಮೂರ್ತಿಯವರಿಗೆ ಧನ್ಯವಾದಗಳು. ನಿಮಗೂ ಇದರಲ್ಲಿ ಹೊಸದೇ ಆಯಾಮ ಕಂಡಿದೆ, ಅದಕ್ಕಾಗಿ ವಂದನೆಗಳು.
"ಸೃಷ್ಟಿ' ಕ್ರಿಯೆಯಲ್ಲಿನ ಅದೃಶ್ಯ ಬೆರಗಿನ ಪರಿಯನ್ನು ವರ್ಣಿಸುವ ಶಬ್ದಜಾಲವೆ೦ದುನ್ ನನಗನ್ನಿಸಿತು. ಅದು ಜೀವಾ೦ಕುರವಿರಬಹುದು! ಕಾವಾ೦ಕುರವಿರಬಹುದು! ಅಥವಾ ನಮಗೆಟುಕದ ರಹಸ್ಯ ವಿಸ್ಮಯಗಳಿರಬಹುದು. ಎಲ್ಲಕ್ಕೂ ಅವರವರ ಭಾವಕ್ಕೆ ಭಕುತಿಗೆ ಅದರಲ್ಲಿ ಅಡಗಿಹುದು ಅರ್ಥ. ತಮ್ಮದೆನೆ೦ದು ಕೊನೆಗೆ ಹೇಳಿ ಅಲ್ಲಿವರೆಗೆ ತಮ್ಮ ಬ್ಲೊಗ್ ಎಡತಾಕುತ್ತಿರುವೆವು. ಪ್ರತಿಸಲ ಓದಿದಾಗ ಹೊಸ ಹೋಳಹು ಹರಿವದು.... ಬೇ೦ದ್ರೇಯವರ ನಾಕುತ೦ತಿ -ಕೀರ್ತಿನಥರ ಕಣ್ಣಲ್ಲಿ, ಅಮೂರರ ಕಣ್ಣಲ್ಲಿ, ಇನ್ನು ಹಲವರ ಕಣ್ಣಲ್ಲಿ ಬೇರೆ ಬೇರೆಯಾಗಿ ಕ೦ಡ೦ತೇ... ಬೇ೦ದ್ರೆ ಕಣ್ಣಿನಲ್ಲಿ ಏನು ಎನ್ನುವದ ತಿಳಿಯಬೇಕಾದರೆ ಅವರ ಕಾಲಾನ೦ತರದ ವಾಮನ ಬೇ೦ದ್ರೇಯವರ ಟಿಪ್ಪಣೆ ಓದಬೇಕು. ಹಾಗೆ ತಮ್ಮದು.
ಕವನ ಚೆ೦ದವಿದೆ.
ಕವನ ಮೆಚ್ಚಿಕೊಂಡು ಅದರ ವಿವರಣೆಗಾಗಿ ಕಾಯುತ್ತಿರುವ ಸೀತಾರಾಮ್ ಸರ್, ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ ವಿಶ್ಲೇಷಣೆ ಅನಗತ್ಯ ಎನಿಸಿದೆ. ಯಾಕಂದ್ರೆ, ನನ್ನ ವಿವರಣೆ ಕೊಟ್ರೆ ಓದುಗರ ಕಲ್ಪನೆಗೆ ಕಡಿವಾಣ ಹಾಕಿದಂತೆ ಆಗೋಲ್ಲವೆ? ಇದೀಗ ಒಬ್ಬೊಬ್ಬರಿಗೆ ಒಂದೊಂಥರಾ ಅರ್ಥ ಹೊಳೀತಿದೆಯಲ್ಲ, ಅದೇ ಚೆನ್ನಾಗಿದೆ ಓದೋಕೆ.
Post a Comment