ರಾಮನವಮಿಯ ಹಿಂದೆ ನನ್ನ ರಾಮನ ಮುಂದೆ
ಸೆರಗೊಡ್ಡಿ ಬೇಡಿದ್ದೆ ಮಾಣು ಎಂದು
ಆಗದೆಂದನು ರಾಮ, ಸತ್ಯನಿಷ್ಠನು ಸೋಮ
ಪ್ರಜೆಗಳಾಣತಿಯೊಂದೆ ಧಾರ್ಯವೆಂದು
"ರಘುವಂಶ ಕುಲಜಾತ, ಜನಕನಿಗೆ ಜಾಮಾತ
ಆಗಿಹುದು ಧರ್ಮಪಥ ನನ್ನ ಪಾತ್ರ
ಎಳೆಯ ಬಾಲೆಯರಿರಲಿ ಮುದಿಯ ಮಾನಸರಿರಲಿ
ನನ್ನ ಛತ್ರದ ನೆರಳು ಏಕಮಾತ್ರ"
ಹೀಗೆಂದನೇ ರಾಮ, ನನ್ನ ಉಸಿರಿನ ಧಾಮ
ಅವನ ನೆರಳಲ್ಲಿ ನಾ ಸುಖಿಯೆಂದೆನೆ
ಮೂವರತ್ತೆಯರೊಡನೆ ಅರಮನೆಯ ಅಂಗಳದಿ
ಊರ್ಮಿಳೆಯ ನಗುವಿನಲಿ ನಗುವಾದೆನೆ
ಧರ್ಮರಾಜ್ಯದ ಕಾರ್ಯ ಜಗವೆಲ್ಲ ಮೊಳಗಿರಲು
ರಾಮನಂಕಿತ ನಿತ್ಯ ಬೆಳಗುತಿರಲು
ಬಂತದೋ ಬರಸಿಡಿಲು ಮುಂಗಾರ ಕರಿ ಮುಗಿಲು
ರಾಮನಂಘ್ರಿಯ ಅಶ್ರು ತೋಯಿಸುವೊಲು
ಎಳೆಯ ಬಾಲೆಯು ಅಲ್ಲ, ಮುದಿಯು ನಾ ಮೊದಲಲ್ಲ
ಕ್ಷುದ್ರ ಕಣ್ಣಿನ ಪಿಸುರು ಪೀತ ನೋಟ
ಬಳಸಿ ಮಾತೇ ಇಲ್ಲ, ಬಳಲದಿರು ಎನಲಿಲ್ಲ
ಕಳುಹಿದನೆ ವನಕೆನ್ನ, ಮೃಗಕೆ ಊಟ
ರಾಮನವಮಿಯ ನೆಪದಿ ಋಷಿಪುಂಗವನ ಮುಂದೆ
ಸೆರಗೊಡ್ಡಿ ಬೇಡಿದೆನು ಮಾಣಿರೆಂದು
ಇನ್ನು ಇಂತಹ ಗಾಥೆ ಬರೆಯಬೇಡಿರಿ ತಂದೆ
ತಾಳೆಗರಿ ಕಂಟಗಳ ತೊರೆಯಿರೆಂದು
(ಮಾಣ್, ಮಾಣು= ತಡೆ, ನಿಲ್ಲು, ನಿಲ್ಲಿಸು)
(ಕಂಟ= ತಾಳೆಗರಿಗಳ ಮೇಲೆ ಬರೆಯಲು ಬಳಸುವ ಉಕ್ಕಿನ ಲೇಖನಿ)
(`ರಾಮನವಮಿ'ಯನ್ನು ಶ್ರೀರಾಮ ಪಟ್ಟಾಭಿಷೇಕದ ದಿನವೆಂಬ ನೆಲೆಯಲ್ಲಿ ಪರಿಗಣಿಸಲಾಗಿದೆ, ಜನ್ಮದಿನೋತ್ಸವ ಎಂದಲ್ಲ)
(೦೫-ಎಪ್ರಿಲ್-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Wednesday, 24 March 2010
Subscribe to:
Post Comments (Atom)
5 comments:
ಪದ ಸ೦ಯೋಜನೆ ಅತ್ಯುತ್ತಮವಾಗಿದೆ. ಹಳೆಗನ್ನಡದ ಶೈಲಿ ಆಪ್ತವೆನಿಸಿತು. ಕವನದ ಸೀತಾಮಾತೆಯ ಪ್ರಶ್ನೇ ಆಪ್ತತೆಯಿ೦ದ ಕೂಡಿದೆ ಮತ್ತು ಮನವನ್ನ ಅರ್ದ್ರವವಾಗಿಸುತ್ತೆ. ಚೆ೦ದದ ಕವನ.
ಸಮಯ ಮಾಡಿಕೊ೦ಡು ನಮ್ಮ ಬ್ಲೊಗ್-ನಲ್ಲೂ ಸ೦ಚರಿಸಿ ತಿದ್ದಿ-ತೀಡಿ.
ತುಂಬಾ ತುಂಬಾ ಚೆನ್ನಾಗಿದೆ
ರಾಮನವಮಿ ಹಬ್ಬದ ಶುಭಾಶಯಗಳು
ಸೀತಾರಾಮ್ ಸರ್ ಮತ್ತು ಗುರುಮೂರ್ತಿ ಸರ್, ಮೆಚ್ಚಿಕೊಂಡದ್ದಕ್ಕೆ ವಂದನೆಗಳು.
ರಾಮನವಮಿಯ ನೆಪದಲ್ಲೊಮ್ಮೆ ಎಲ್ಲರಿಗೂ ಹಾರೈಕೆಗಳು.
ಸೀತಾರಾಮ್ ಸರ್, ನಿಮ್ಮ ಬ್ಲಾಗ್ ನೋಡುತ್ತಿರುತ್ತೇನೆ. ತಿದ್ದಿ-ತೀಡುವಷ್ಟು ತಿಳಿದವಳು ನಾನಲ್ಲ ಅಂತಲೂ ಹೇಳಲಿಚ್ಛಿಸುತ್ತೇನೆ.
ಸತ್ಯನಿಷ್ಠನು ಸೋಮ?- Nah, I don't agree with this. Soma (chandra) cunningly "had" Thaara (Guru's wife), so he's not sathyanishta!
Sagar
ಸಾಗರ್, ಇಲ್ಲಿ ಸೀತೆ ತನ್ನ ರಾಮನನ್ನೇ "ಸೋಮ" (ತನ್ನ ಚಂದ್ರ) ಎಂದು ಹೇಳಿಕೊಂಡದ್ದು, ಬಾನಿನ ಚಂದ್ರ ಸತ್ಯನಿಷ್ಟನೆಂದು ಹೊಗಳಿದ್ದಲ್ಲ; ಆಯ್ತಾ?
Post a Comment