ಎಂಟು ಕಣ್ಣಿನ ಬಿದಿರುಗೋಲಿಗೆ
ಎಂಟು ದಿಕ್ಕಿನ ಉಸಿರ ಶಕ್ತಿ
ಒಂದೆ ಉಸಿರಿಗೆ ಭಿನ್ನ ಹೆಸರನು
ಒಂದೆ ಹೊರಳಲಿ ಕೊಡುವ ಶಕ್ತಿ
ಪೂರ್ಣ ತುಂಬಿದ ಮಣ್ಣ ಕುಡಿಕೆಗೆ
ಚಿಣ್ಣಕೋಲದು ಕುಣಿದು ಶಕ್ತಿ
ಅರ್ಧಮರ್ಧದ ವಿವಿಧ ಸೊಗಸಲಿ
ಪೂರ್ಣ ರೂಪದ ಅಲೆಯ ಶಕ್ತಿ
ನಾಕು ತಂತಿಯ ನಾಲ್ಕು ನೆಲೆಯಲಿ
ನಾಕ ತೋರುವ ಲೋಕ ಶಕ್ತಿ
ಹರಿದು ಹಾಯುತ ಮೀಟಿ ಆಯುತ
ಹರಿಸಿ ಸುರಿಸುವ ಮೋದ ಶಕ್ತಿ
ಏಳು ಸ್ವರಗಳು ಏಳು ನೆಲೆಗಳು
ಏಳು ಎಳೆಗಳ ಕೇಳು ಶಕ್ತಿ
ಮೂರು ಸ್ತರದಲಿ ಮೈಯ ಮರೆಯಲು
ಮೇಲು ಇಲ್ಲದ ಮೇಳ ಶಕ್ತಿ
(೧೭-ಎಪ್ರಿಲ್-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Monday, 8 March 2010
Subscribe to:
Post Comments (Atom)
8 comments:
ಅಕ್ಕಾ...
ತುಂಬ ಇಷ್ಟವಾದವು ಸಾಲುಗಳು.
ಓದುವಾಗ ಮೆಲುವಾದ ಮೇಳ ತಂಬೂರದ್ದು.
ಚೆಂದದ ಸಾಲುಗಳಿಗೆ ಧನ್ಯವಾದ.
ಶಾಂತಲಾ, ನಿನಗೆ ಇಷ್ಟವಾಗಿದ್ದು ಸಂತೋಷ.
ತಂಬೂರದ ಹಿಮ್ಮೇಳ ನಿನದೇ ಮನದ ಮೆಲುದನಿಯಲ್ಲವೇನೆ?
ಸ೦ಗೀತದ ಬಗ್ಗೆ ತಮ್ಮ ಕವನದ ಸಾಲುಗಳು ತು೦ಬಾ ಅಪ್ತವಾಯಿತು. ಚೆ೦ದದ ಕವನ. ಶಬ್ದ ಜೋಡಣೆಯ೦ತೂ ಖುಷಿ ನೀಡಿತು.
ಧನ್ಯವಾದಗಳು ಸೀತಾರಾಮ್ ಸರ್. ಓದುಗರಿಗೆ ಮುದ ನೀಡಿದರೆ ಆ ಬರಹಕ್ಕೆ ಸಾರ್ಥಕತೆ, ಅಲ್ವೆ?
ಜ್ಯೋತಿ, ಇದು ನನಗೆ ಬಹಳ ಇಷ್ಟವಾಯಿತು. ಸಂಗೀತಮಯ ಪದಜೋಡಣೆ. "ಸರಸಸ್ವರಸುರಝರೀಗಾ ಮನಮೌಸಾಮವೇದಸಾರಮಿದಿ..." ಎಂಬ ತೆಲುಗು ಚಿತ್ರಗೀತೆ (’ಸಿರಿವೆನ್ನಲ’ ಚಿತ್ರದ್ದು) ನೆನಪಾಯಿತು. ಕವಿತೆ ಬರೆದ ದಿನಾಂಕ ನೋಡಿದರೆ ಏಪ್ರಿಲ್ ೨೦೦೯ ಎಂದಿದೆ. ನಾನಂದುಕೊಂಡೆ ಇದು ಮೊನ್ನೆ ಕಾರ್ಕಳದಲ್ಲಿ ನಡೆದ ಪ್ರವೀಣ್ ಗೋಡಖಿಂಡಿ ಸಂಗೀತಕಾರ್ಯಕ್ರಮದ ಫಲಿತ ಎಂದು.
ಹೌದು ವತ್ಸ, ಇದು ಕಳೆದ ವರ್ಷ ಬರೆದದ್ದೇ.
ಕಾರ್ಕಳದ ಕಾರ್ಯಕ್ರಮದಲ್ಲಿನ ‘ಪ್ರವೀಣ ಪ್ರಾವೀಣ್ಯ’ (ಮತ್ತು ಉಳಿದ ಗಾಯಕರ ಸಂಗೀತ)ದ ಮೋಡಿ ಕವಿತೆಯನ್ನೂ ಮೀರಿದ್ದು, ಅನುಭವ ಅನುಭಾವ ಎರಡಕ್ಕೆ ಮಾತ್ರ ನಿಲುಕುವಂಥಾದ್ದು, ಪದಗಳಿಗಲ್ಲ. ಶಬ್ದಗಳಲ್ಲಿ ಹಿಡಿಯಲಾರದ ‘ಸ್ವರಾಭಾರ’ ಆ ಸಂಗೀತಸುಧೆಯದ್ದಾಗಿತ್ತು. ತೆಲುಗು ಚಿತ್ರಗೀತೆಯನ್ನು ನಾನು ಕೇಳಿಲ್ಲ, ಕೇಳಿದರೂ ನನಗರ್ಥವಾಗುವುದಿಲ್ಲ.
ಈ ಕವನ ನಿಮಗೆ ಮೆಚ್ಚುಗೆಯಾಗಿದ್ದಕ್ಕೆ ಸಂತೋಷ. ಅದನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ಜ್ಯೋತಿ,
ತೆಲುಗು ಅರ್ಥ ಆಗಬೇಕಿಲ್ಲ, ಆದರೆ ಆ ಹಾಡನ್ನೊಮ್ಮೆ ಯೂಟ್ಯೂಬ್ನಲ್ಲಿ ಇಲ್ಲಿ ಆಲಿಸಿ.
ಸುಹಾಸಿನಿ ಚಿತ್ರಗಾರ್ತಿ ಮೂಕಿ; ಸರ್ವದಮನ್ ಬ್ಯಾನರ್ಜಿ ವೇಣುವಾದಕ ಅಂಧ. ಅವರಿಬ್ಬರ ಪ್ರೇಮಕಥೆಯ ಅದ್ಭುತ ಚಿತ್ರ. ಈ ಹಾಡಿನಲ್ಲಿ ಕೊಳಲುವಾದನ ಪಂ.ಹರಿಪ್ರಸಾದ್ ಚೌರಾಸಿಯಾ ಅವರದು. ಪಿ.ಸುಶೀಲಾ ಮತ್ತು ಎಸ್.ಪಿ.ಬಿ ಗಾಯನ ರೋಮಾಂಚನಕಾರಿ. ಚಿತ್ರೀಕರಣವೂ ಅಷ್ಟೇ ಹೃದಯಸ್ಪರ್ಶಿ. ಆಗಲೇ ಹೇಳಿದಂತೆ, ಭಾಷೆ ಅರ್ಥಗಳ ಹಂಗಿಲ್ಲದೆ ನೋಡಿ. ಎರಡನೇ ಸರ್ತಿಯೂ ನೋಡಿ.
ಖಂಡಿತಾ ನೋಡುತ್ತೇನೆ ವತ್ಸ, ಕೊಂಡಿ ಕೊಟ್ಟದ್ದಕ್ಕೆ ಥ್ಯಾಂಕ್ಸ್.
Post a Comment