ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 26 February, 2010

ಹಿಮದ ಹೂವು (ಸ್ನೋ ಫ್ಲೇಕ್)

ಹಾಗೇ ತೆಳುವಾಗಿ ಹಗುರಾಗಿ ಸುಳಿದಾಡಿ ಇಳಿದದ್ದು
ನಿನ್ನ ಹೆಸರಿನ ಒಂದು ತುಣುಕಂತೆ, ಹೌದೆ?
ಸಣ್ಣನೆ ಗುನುಗಾಗಿ ಹಿತವಾಗಿ ಧಾರೆಯಲಿ ಬೆಳೆದದ್ದು
ನಿನ್ನ ಉಸಿರಿನ ಪಲುಕು ಮೆಲುಕಂತೆ, ಹೌದೆ?

ಅಲ್ಲಿಯೆ ಸುರಿದದ್ದು ಹರಿದದ್ದು ನೆರೆದದ್ದು ಮೊರೆದದ್ದು
ನಿನ್ನ ನೆನಪಿನ ರಸದ ಸುಮವಂತೆ, ಹೌದೆ?
ಮೆಲ್ಲನೆ ಉಸುರಿದ್ದು ಕೊಸರಿದ್ದು ಬೆಸೆದದ್ದು ಹೊಸೆದದ್ದು
ನಿನ್ನ ಇರವಿನ ಕ್ಷಣದ ಮರುಳಂತೆ, ಹೌದೆ?

ಅಂಚಿಗೆ ಬಂದಾಗ ಹನಿಯಾಗಿ ಮಣಿಯಾಗಿ ಹೊಳೆದದ್ದು
ನಿನ್ನ ಕಂಗಳ ಜೋಡು ಬೆಳಕಂತೆ, ಹೌದೆ?
ಬಾಗಿಲಲಿ ನಿಂದಾಗ ರಂಗಾಗಿ ಗುಂಗಾಗಿ ಸೆಳೆದದ್ದು
ನಿನ್ನ ನಗುವಿನ ಮಾಟ ಕುಲುಕಂತೆ, ಹೌದೆ?

ಬಾನಿಗೆ ಮೊಗವಿಟ್ಟು ಕಿವಿಯಿಟ್ಟು ಎದೆಯಿಟ್ಟು ಕರೆದದ್ದು
ನಿನ್ನ ಕಾಣುವ ಅನಿತು ಅಳಲಂತೆ, ಹೌದೆ?
ಕಿನ್ನರಿ ನಿನಗಾಗಿ ದನಿಯಾಗಿ ಮನವಾಗಿ ಒಲಿದದ್ದು
ನಿನ್ನ ಬೆರೆಯುವ ಸ್ನಿಗ್ಧ ಸುಖಕಂತೆ, ಹೌದೆ?

(೧೩-ಫೆಬ್ರವರಿ-೨೦೦೯)

2 comments:

sunaath said...

ಕಿನ್ನರಿಯ ಭಾವನೆಯು ಕವನವಾಯಿತಂತೆ, ಹೌದೆ?!

ಸುಪ್ತದೀಪ್ತಿ suptadeepti said...

ಕಾಕಾ,
ಕಿನ್ನರಿಗಾಗಿ ಕನವರಿಸಿದ್ದೇ ಕವನವಾಗಿದೆ;
ಕಂಡಿತೇ ಆ ಕಿನ್ನರನ ಮಿಡಿಯುವೆದೆ?