ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 15 January 2010

ನನ್ನೊಳಗಿನ ಪರ್ಯಾಯ

ನನ್ನ ಪರ್ಯಾಯವದು ನನ್ನೊಳಗೆಯೇ ಕೂತು
ಏನೇನೋ ಮಸಲತ್ತು ಮಾಡುತ್ತಿದೆ
ಹಾಗಲ್ಲ, ಹೀಗೆಂದು ತಿಳಿಹೇಳುವುದ ಬಿಟ್ಟು
ಬೆದರಿಕೆಯ ಆಟಗಳ ಹೂಡುತ್ತಿದೆ

ಇಳಿಯುವುದ ತಿಳಿಯದದು, ಏರುತೇರುತ್ತಲೇ
ಅ-ನಿಯತ ದಾರಿಯಲಿ ನೂಕಿ ನೂಕಿ
"ಏರಿದವ ಚಿಕ್ಕವನು ಇರಬೇಕು" ಎನ್ನದೆ
ತೋರುವುದು ಕೊಬ್ಬು ಮದ ಬೆಡಗು ಶೋಕಿ

ಅಂಜಿಕೆಯ ಮೂಲವದು ಸ್ವಾರ್ಥದ ಹುತ್ತವು
ಸುಳಿವ ಹೆಡೆ ನೆವದಲ್ಲಿ ಭಂಡ ಧೈರ್ಯ
ಕಾರ್ಯಕಾರಣಕೆಲ್ಲ ನಂಬಿಕೆಯ ತಳಕಟ್ಟು
ಅಳಿಸಿದರೆ ತಿಳಿಯುವುದು ನಿಜದ ಶೌರ್ಯ

ಗೂಢವಾಗಿರುತಿದ್ದ ಒಳಮನದ ಪದರಗಳ
ಪರ್ಯಾಯ ನೆಲೆಗಳನು ಅರಿವ ಕಲೆಯು
ಸಂಮೋಹನದ ಹಾದಿ ಅರಿವನರಳಿಸಿದಾಗ
ಬಾನಿನಗಲದ ಆಚೆ ಮಿತಿಯ ನೆಲೆಯು
(೨೩-ಸೆಪ್ಟೆಂಬರ್-೨೦೦೯)
(ಒಂದು ಸಮ್ಮೋಹನ ತರಗತಿ ಮತ್ತು ಸ್ವಸಮ್ಮೋಹನ ಪ್ರಯೋಗದ ಬಳಿಕ ಹೊಳೆದದ್ದು)

4 comments:

ಸೀತಾರಾಮ. ಕೆ. / SITARAM.K said...

ಟಿವಿಯಲ್ಲಿ ಬರುವ ಪುನರ್ಜನ್ಮ ರಿಯಾಲಿಟಿ ಷೋ ಸ್ಫೂರ್ಥಿಯಿ೦ದ ಬರೆದದ್ದೇ?
ಮನದ ಪುರ್ವಾಗ್ರಹಗಳು ಕಾಡುವ ಪರಿ ಅಕ್ಷರದಲ್ಲಿ ಚೆನ್ನಾಗಿ ಹಿಡಿದಿದ್ದಿರಾ!

sunaath said...

ಜ್ಯೋತಿ,
ಮನದ ಸುಪ್ತಪದರುಗಳ ಬಗೆಗೆ ಉತ್ತಮ ಕವನ.
ಈಗಾಗಲೇ, ನೀನು ಅನುಭವಿಸಿದ ಜನ್ಮಾಂತರ ಮನೋಪಯಣದ ಬಗೆಗೆ ಬರೆದಿರುವಿ. ಹಳೆಯ ಜನ್ಮಗಳ ಅನುಭವಗಳು ಮನಸ್ಸನ್ನು ನಿಯಂತ್ರಿಸುವ ಬಗೆಯನ್ನು ಓದಿ ಬೆರಗಾಗಿದ್ದೇನೆ.
ಒಟ್ಟಿನಲ್ಲಿ ಎಲ್ಲವೂ ಧರ್ಮ-ಕರ್ಮ ಸಂಯೋಗ!

ಸುಪ್ತದೀಪ್ತಿ suptadeepti said...

ಸೀತಾರಾಮ್ ಸರ್, ಧನ್ಯವಾದಗಳು.
ಟಿ.ವಿ.ಯಲ್ಲಿ ಬರುವ ರಿಯಾಲಿಟಿ ಷೋ ಬಗ್ಗೆ ನನಗೆ ಇಲ್ಲಿ ಬಂದ ಮೇಲಷ್ಟೇ ಗೊತ್ತಾಗಿದ್ದು. ಅವೆಲ್ಲಕ್ಕೂ ಮೊದಲೇ ನಾನಿದನ್ನು ಬರದಿದ್ದೆ. ಹಿಪ್ನೋಥೆರಪಿಯ ಬಗ್ಗೆ ತಿಳಿದು ಅದನ್ನು ಕಲಿತೆ. ಆ ಕಲಿಕೆಯ ಹಂತಗಳಲ್ಲಿನ ಕೆಲವೊಂದು ಅನುಭವಗಳ ಕುರಿತು "ಸುಪ್ತದೀಪ್ತಿ - ಇನ್ನರ್ ಲೈಟ್" ಬ್ಲಾಗಿನಲ್ಲಿ ಬರೆದಿದ್ದೇನೆ, ಬಿಡುವಾದಾಗ ಓದಿ. ಮನದ ಪೂರ್ವಾಗ್ರಹಗಳು, ಪದರಗಳು ನಮ್ಮನ್ನು ಸದಾ ನಿಯಂತ್ರಿಸುತ್ತಿರುತ್ತವೆ. ಅದರಿಂದ ಮುಕ್ತರಾಗುವುದು ಸಾಮಾನ್ಯರಾದ ನಮಗೆ ಕಷ್ಟ. ಹಾಗೆಯೇ, ಅದನ್ನು ಅಕ್ಷರಗಳಲ್ಲಿ ಮೂರ್ತಗೊಳಿಸುವುದೂ ಕಠಿಣ. ಆದರೂ, ಒಂದು ಸಣ್ಣ ಪ್ರಯತ್ನ, ನಿಮಗೆ ಮೆಚ್ಚುಗೆಯಾಗಿದ್ದು ಸಂತೋಷ.

ಸುಪ್ತದೀಪ್ತಿ suptadeepti said...

ಕಾಕಾ, ಧನ್ಯವಾದಗಳು.
ನಿಜ; ಎಲ್ಲವೂ ಧರ್ಮ-ಕರ್ಮ ಸಂಯೋಗ. ಹಾಗೆಂದು ತಿಳಿದರೂ ಈ ಬದುಕು ಬೆರಗುಗಳ ಮೂಟೆ. ಎಲ್ಲ ನಿತ್ಯಗಳ ನಡುವೆಯೂ ಎಲ್ಲವೂ ನೂತನವೆಂಬ ವಿಸ್ಮಯವಿದ್ದರೆ ಬಾಳು ಗೋಳಾಗದು, ಅಲ್ಲವೆ?