ಜಗದಚ್ಚರಿಯ ಪರಿಗೆ ಬೆರಗಾಗುವಂದದಿಯೆ
ಅಗಲಿಕೆಗೆ ಮರುಗುವಂತೆ,
ಹಗೆ ಮೋಹ ಭವದಾಹದಂಟುನಂಟನ್ನಿತ್ತೆ
ಹೊಗುವಂತೆ ಹಾತೆ ಉರಿಯ;
ಧಗೆಯೊಳಗೆ ಮನವಿಹುದು, ಸುತ್ತ ಮುತ್ತಿದೆ ಹೊಗೆಯು,
ಮುಗಿಸಲಾರೆನು ಪಯಣವ;
ಅಗಣಿತದ ಗಣಿತದಲಿ ನನ್ನ ಲೆಕ್ಕವದೇನು
ನಗುವಿನಿಂದಳೆಯೊ ಬದುಕ.
ಅರಿವಿನಳವಿಗೆ ಸಿಗದ ಮರೆಯ ಶಕ್ತಿಯೆ, ಕೊಂಚ
ಅರಿವಳಿಕೆಯನ್ನು ಸರಿಸು;
ಬರಿದುಗಣ್ಣಿಗೆ ಬರುವ ಮಣ್ಣ ಬಣ್ಣಗಳನ್ನು
ಕುರುಡು ಬುದ್ಧಿಯಿಂದಳಿಸು;
ಹರಿಸು ನೀ ಸ್ನೇಹಜಲ, ಪ್ರೇಮಗಂಗಾಸಲಿಲ
ಹರಸು, ಹರಿ ಮಾಯೆಯನ್ನು.
(೧೫-ಜನವರಿ-೨೦೦೭)
2 comments:
ಮನುಷ್ಯರ ತಿಳಿವಳಿಕೆಗೊಂದು ಸೀಮೆಯಿದೆ. ಆದರೆ ಭಕ್ತಿಗೆ ಹಾಗು ಪ್ರೇಮಕ್ಕೆ ಸೀಮೆ ಇಲ್ಲ.
ಉತ್ತಮವಾದ ಜೀವನದರ್ಶನವನ್ನು ನಮ್ಮ ಎದುರಿಗೆ ಇಟ್ಟಿರುವಿ,
ಜ್ಯೋತಿ.
ನನಗೆ ಅಚ್ಚರಿ ಹಾಗು ಖುಶಿ ಆಗುವ ವಿಚಾರವೆಂದರೆ, ನಿನ್ನ ಪ್ರತಿಯೊಂದು ಕವನದ meter ಆ ಕವನದ ಭಾವಕ್ಕೆ perfect ಆಗಿ match ಆಗುವದು!
ಕಾಕಾ, ಮೀಟರ್ ಮತ್ತು ಭಾವದ ಹೊಂದಿಕೆಯನ್ನು ನಾನು ಗಮನದಲ್ಲಿರಿಸಿಕೊಂಡೇ ಇಲ್ಲ. ಅದು ಹೇಗೋ ತಾನೇ ಹಾಗೆ ಹೊಂದಿಕೆಯಾಗುತ್ತವೆ. ನನಗೂ ಅಚ್ಚರಿ ಕೊಡುವುದುಂಟು ಕೆಲವು ಕವನಗಳು. ಅದ್ಯಾಕೆ ಹೀಗೆ ಬರೆದೆ ಅಂತ ನಾನೇ ಪ್ರಶ್ನಿಸಿಕೊಳ್ಳುವುದುಂಟು. ನನ್ನ ಮಟ್ಟಿಗೆ ಈ ಕವನದ ಹುಟ್ಟಿನ ಪ್ರಕ್ರಿಯೆ ಕೆಲವಾರು ಸಲ ನಿಗೂಢವೇ.
ನಿಮ್ಮ ಪ್ರೀತಿಗೆ ಮತ್ತೆ ಧನ್ಯವಾದಗಳು.
Post a Comment