ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 15 June 2008

ಖಾಲಿ ಗೂಡಿನ ಹಕ್ಕಿಗಳು

ಜೊತೆಗೊಂದು ಸಂಗಾತಿ ಬೇಕೆಂದು
ಸ್ವರಕ್ಕೆ ಸ್ವರ ಕೂಡಿಸಿ,
ಹಾಡಿ ನಲಿದು ನರ್ತಿಸಿ,
ಗೂಡು ಕಟ್ಟಿ, ಒಲಿಸಿ,
ಮನದೊಳಗೆ ಬಂದ ಮನದನ್ನೆ-
ಇಟ್ಟೆರಡು ಮೊಟ್ಟೆಗಳಿಗೆ ಕಾವಿರಿಸಿ,
ಮಮತೆಯ ಪಾನ ಊಡಿ, ನೋಡಿ,
ಸರದಿಯಲ್ಲಿ ಪುಟ್ಟ ಚುಂಚಗಳಿಗೆ
ಗುಟುಕಿರಿಸಿ, ನೀರುಣಿಸಿ,
ಕಾದಿಟ್ಟ ಚಿಲಿಪಿಲಿಗಳು...
ಕಣ್ಣ ಮುಂದೆ ಬೆಳೆದು, ಬಲಿತು,
ಬಣ್ಣ ರೆಕ್ಕೆ ತುಂಬಿ, ನಲಿದು,
ಬಿದ್ದು-ಎದ್ದು ಹಾರಲು ಕಲಿತು;
ಒಂದು ಮುಂಜಾನೆ...
ಚುಂಚಗಳಿಗೆ ತುತ್ತು ತಂದ ಘಳಿಗೆ
ಮರಳಿದ್ದೆವು ಖಾಲಿ ಗೂಡಿಗೆ.

ಕೂಗಿ ಕರೆದು, ಅಲೆದು ಸಾಕಾಗಿ, ಹುಡುಕಿ ಸುಸ್ತಾಗಿ,
ಎಲ್ಲೋ ಮರದೆಡೆಯಲ್ಲಿ ಮೈಮರೆತಾಗ
ಕಂಡೆವು ಮಗ ರಮಿಸಲೆತ್ನಿಸುತ್ತಿದ್ದ
ಆ ಸುಂದರಿಯನ್ನು.
ಹಾಗೇ ಮಗಳೂ ಅಲ್ಲೆಲ್ಲೋ ಬಿಂಕವಾಡಿ
ಮತ್ತಾರದೋ ಮನ ಸೆಳೆಯುವುದನ್ನು.

ಒಂದು ಗೂಡಿನ ದೀಪಗಳೆರಡು
ಮತ್ತೆರಡು ಹಣತೆಗಳ ಹಚ್ಚುವುದ ಕಂಡು
ಅದಮ್ಯ ತೃಪ್ತಿಯುಂಡು
ಜೊತೆಜೊತೆಯಾಗಿ ಹಾರಿ ಬಂದು
ಗೂಡು ಸೇರಿದೆವು.

ಖಾಲಿಯೆಂದೆನಿಸಿದ್ದ ಈ ಗುಡಿ
ತುಂಬಿ ಬಂದಂತಾಗಿ, ಉಕ್ಕಿದ ಧನ್ಯತೆಯಲಿ
ಮನಸು ಮೇಲೇರಿತ್ತು.
ಕಾಯವಳಿದ ಮಾಯೆ ದೇಹವುಳಿದು
ಛಾಯೆಯಾಗಿ ಆವಿಯಾಯಿತು.
(೧೫-ನವೆಂಬರ್-೨೦೦೧)

(ಆರೂವರೆ ವರ್ಷಗಳ ಹಿಂದೆ ಸ್ನೇಹಿತರೊಬ್ಬರ ಇಬ್ಬರು ಮಕ್ಕಳೂ ಕಾಲೇಜ್ ಅಧ್ಯಯನಕ್ಕೆಂದು ಮನೆಯಿಂದ ಹೊರಬಿದ್ದಾಗ, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಪದಪುಂಜ- Empty Nest Symdrome- ನನ್ನ ಅರಿವಿಗೆ ಬಂತು. ಅದರ ಚಿಂತನೆಯಲ್ಲಿ ಹೊಮ್ಮಿದ ಲಹರಿ. ಈಗ, ಈ ವರ್ಷ ತಮ್ಮ ಮಕ್ಕಳ ಗ್ರಾಜುಯೇಷನ್ ಗದ್ದಲದಲ್ಲಿರುವ ನನ್ನ ಗೆಳೆಯ-ಗೆಳತಿಯರಿಗಾಗಿ...)

6 comments:

ಶಾಂತಲಾ ಭಂಡಿ (ಸನ್ನಿಧಿ) said...

ಜ್ಯೋತಿ ಅಕ್ಕಾ...
ಓದುತ್ತ ಹೋದಂತೆ ತೆರೆದುಕೊಂಡು ತಮ್ಮೊಳವಲಿ ನಮ್ಮ ಹಿಡಿದಿಟ್ಟುಕೊಳ್ಳುವ ಪಕಳೆಗಳ ಹಾಗೆ...
ಓದಿ ಮುಗಿವಾಗ ಹೂವರಳಿದಂತೆ...
ಇಷ್ಟವಾಯಿತು.
ಇದನ್ನು ನನಗಾಗಿಯೂ ಬರೆದಿದ್ದೀರಾ?

ಸುಪ್ತದೀಪ್ತಿ suptadeepti said...

ಧನ್ಯವಾದ ಶಾಂತಲಾ.
ನಿನಗಾಗಿಯೂ ಆಗಬಹುದು, ಇನ್ನು ೧೨ ವರ್ಷಗಳ ಬಳಿಕ...

sunaath said...

"ಕಾಯವಳಿದ ಮಾಯೆ ದೇಹವುಳಿದು
ಛಾಯೆಯಾಗಿ ಆವಿಯಾಯಿತು."

Beautiful line.
-ಕಾಕಾ

ಸುಪ್ತದೀಪ್ತಿ suptadeepti said...

ಧನ್ಯವಾದಗಳು, ಕಾಕಾ.

Archu said...

"ಕಾಯವಳಿದ ಮಾಯೆ ದೇಹವುಳಿದು
ಛಾಯೆಯಾಗಿ ಆವಿಯಾಯಿತು."

nange tumbaa hidisitu :)
cheers,
archana

ಸುಪ್ತದೀಪ್ತಿ suptadeepti said...

dhanyavaadagaLu Archana...