ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 14 April 2009

ಆಶಯ




ಪುಟ್ಟ ಹಣತೆ ಹೊಸಿಲಿನಲ್ಲಿ ಜಗಲಿಗಿಷ್ಟು ಬೆಳಕು,

ನಡುಮನೆಯಲಿ ಅಂಗಳದಲಿ ಮಸುಕು ಮಸುಕು ಮುಸುಕು.


ಗಾಳಿಯೆರಗಿ, ಸಿಡಿಲು ಗುಡುಗಿ, ಗಗನ ಗಮನ ನಯನ,

ಸೋನೆಯೊಳಗೆ ಮಂಜು ಇಂಗಿ ಸಾಧಿಸಿ ನವ ಅಯನ.

ಕರಗಲಿಲ್ಲ ಕೊರಗಲಿಲ್ಲ ಇಳೆಯು ಮಳೆಯ ಕೊಳೆಗೆ,

ತೂರಲಿಲ್ಲ ಹೊರಗ ಕೆಸರು ಮನದಂಗಳದೊಳಗೆ.


ಸಾರಲಿಹುದು, ಬೀರಲಹುದು, ತೋರಬಹುದು ಕಿರಣ,

ತೆರೆಯ ಸರಿಸಿ, ಹೊರೆಯ ಇಳಿಸಿ, ಮರೆಗೆ ಸರಿಯೆ ವರುಣ.

ಅರ್ಚನೆಯಲಿ ಆರತಿಯಲಿ ನೀಡಿ-ಪಡೆದು ತಿಲಕ,

ಹಣತೆಗಿಷ್ಟು ತೈಲವಿತ್ತು ಮಣಿದ ಎದೆಗೆ ಪುಳಕ.

(೨೦-ಸೆಪ್ಟೆಂಬರ್-; ೧೫-ಅಕ್ಟೋಬರ್-೨೦೦೫)

Thursday, 9 April 2009

ನನ್ನೊಲವೆ....

ನನ್ನೊಲವ ಸಾಕಾರ, ನಿನಗೇಕೆ ಅಲಂಕಾರ,
ಬಂಡುಂಬ ಬಯಕೆಯಲಿ ಕಂಪಿಸಿದೆ ಅಧರ;
ರಾಗದಾಲಾಪಕ್ಕೆ ಮುಂಗುರುಳ ವೈಯಾರ,
ಕಾತರದ ಎದೆಯೊಳಗೆ ಗುಂಯ್ಗುಡುವ ಭ್ರಮರ.

ನನ್ನ ಕೈಯೊಳು ನಿನ್ನ ಕೈಯಿರಿಸಿ ಕರೆತಂದೆ,
ಈ ಮನೆಯ ಹೊಸಿಲಲ್ಲಿ ನಿಲ್ಲಿಸಿದೆ ಅಂದು;
ಅಕ್ಕಿ-ಬೆಲ್ಲವ ಚೆಲ್ಲಿ ಅಳುಕುತ್ತ ಒಳಬಂದೆ,
ಮಂಗಳದ ಸರಮಾಲೆ ನಿನ್ನೊಡನೆ ತಂದು.

ನನ್ನಮ್ಮ-ಅಪ್ಪನಿಗೆ ಪ್ರೀತಿ ತೋರಿದೆ ನೀನು,
ತಮ್ಮ-ತಂಗಿಯ ಜೊತೆಗೆ ನಿಜ ಮಮತೆಯನ್ನು;
ಬಣ್ಣಗೆಡದಿರುವಂತೆ ಬೆರೆಸಿರುವೆ ಹಾಲ್ಜೇನು,
ಮನದಂಗಳದ ತುಂಬ ಬೆಳ್ನೊರೆಯ ಜೊನ್ನು.

ನನ್ನವರು ಎಂದವಳೆ, ನೀನೆಂದು ನನ್ನವಳು,
ಪ್ರೇಮದೀವಿಗೆ ಹೊತ್ತು ಮುನ್ನಡೆಯುವವಳು;
ಕಾರ್ಗಾಲ ಮಿಂಚಲ್ಲಿ ಕಂದನನು ಕಂಡವಳು,
ಕಣ್ರೆಪ್ಪೆಯೊಳು ಬೆಳಕ ಕಾಯುತಿರುವವಳು.

ನನ್ನೊಲವೆ, ಪ್ರಿಯವಧುವೆ, ದೀಪದೊಲು ನೀ ಬೆಳಗು,
ತೈಲವಾಗುವೆ ನಾನು ಆಂತರ್ಯದೊಳಗೆ;
ಸಂದಕಾಲದ ಬಲವು ಹರಡಿರಲಿ ಕುಸುಮ ನಗು,
ನಿನ್ನ ಜೊತೆಯಿರಲೆಂದು ಮಧುಚಂದ್ರವೆಮಗೆ.
(೦೬-೦೮-೨೦೦೩)