ಆಕರ್ಷಕ ಯುವಕನೊಬ್ಬ ಕುರ್ಚಿಯಲ್ಲಿ ಕೂತಿದ್ದ. ನಾನು ಒಳಗೆ ಹೆಜ್ಜೆಯಿಟ್ಟೊಡನೆಯೇ, "ಹಲೋ, ಗುಡ್ ಈವ್‍ನಿಂಗ್ ಯಂಗ್ ಲೇಡಿ" ಅಂದ. ಮಾತಿನಲ್ಲಿನ ಗಾಂಭೀರ್ಯಕ್ಕೆ ಪದಗಳ ನಾಜೂಕಿಗೆ ತಬ್ಬಿಬ್ಬಾದ ನಾನು ಅವನಿಗುತ್ತರಿಸದೆಯೇ ತಲೆ ತಗ್ಗಿಸಿಕೊಂಡು ನೇರವಾಗಿ ನನ್ನ ಕೋಣೆಗೆ ಸಾಗಿದೆ. ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲುಮನೆಗೆ ಹೋಗಿ ಮುಖ-ಕೈಕಾಲು ತೊಳೆದುಕೊಂಡು ಅಡುಗೆಮನೆಗೆ ಬರುವಷ್ಟರಲ್ಲಿ ಅವನೂ ಊಟದ ಮೇಜಿನ ಮುಂದಿದ್ದ. ಅಮ್ಮ ಅಡುಗೆಕಟ್ಟೆಯ ಬದಿಯಲ್ಲಿದ್ದಳು. ಒಲೆಯಲ್ಲಿ ಸಾರು ಬಿಸಿಯಾಗುತ್ತಿತ್ತು. ಯಾರಿವನು?
"ಏನಾ, ಗೊತ್ತಾಗಲಿಲ್ವಾ?" ಅವನೇ ಕೇಳಿದ. ಇಲ್ಲವೆನ್ನುವಂತೆ ತಲೆಯಾಡಿಸಿದೆ.
ಅಮ್ಮನೇ ಹೇಳಿದಳು, "ನೀನು ಚಿಕ್ಕವಳಿದ್ದಾಗ ನಾವು ‘ಅಕಳಂಕ’ ಮನೆಯ ಬದಿಯಲ್ಲಿ ಬಾಡಿಗೆಗಿದ್ದೆವಲ್ಲ. ಆಗೆಲ್ಲ ನಿನ್ನನ್ನು ಎತ್ತಿ ಆಡಿಸಿ ಶಾಲೆಗೆ ಹೋಗುತ್ತಿದ್ದ ಆಚೆ ಮನೆಯ ಹರ್ಷ. ಈಗ ಬಾಂಬೆಯಲ್ಲಿ ಕೆಲಸದಲ್ಲಿದ್ದಾನೆ. ನಾವು ಮತ್ತೆ ಇದೇ ಊರಿಗೆ ಬಂದದ್ದು ಗೊತ್ತಾಯ್ತಂತೆ. ನಮ್ಮನ್ನು, ಅದ್ರಲ್ಲೂ ನಿನ್ನನ್ನು ನೋಡ್ಲಿಕ್ಕೇಂತಲೇ ಬಂದಿದ್ದಾನೆ. ನೀನು ಏನೂ ಮಾತಾಡದೇ ಒಳಗೆ ಓಡಿ ಬರುದು ಸರಿಯಾ? ಅತಿಥಿಗೆ ಮರ್ಯಾದೆ ತೋರಿಸ್ಲಿಕ್ಕೂ ಗೊತ್ತಿಲ್ವಾ ನಿಂಗೆ? ಅವನಿಗೆ..."
ಅಮ್ಮನ ಮಾತುಗಳು ಮುಗಿದಿರಲೇ ಇಲ್ಲ, ಹರ್ಷ ನಮ್ಮ ಬದಿಗೇ ಬಂದು ನಿಂತ. ನನ್ನ ತಲೆ ನೇವರಿಸುತ್ತ, "ನನ್ನ ಶಾಲಾ ದಿನಗಳ ಬಣ್ಣದ ಗೊಂಬೆ ಈಗ ಎಷ್ಟು ದೊಡ್ಡೋಳಾಗಿದಾಳೆ ಅಂತ ನೋಡ್ಲಿಕ್ಕೆ ಬಂದದ್ದು ಹೌದು. ಜೊತೆಗೆ ಅವಳ ನಾಚಿಗೆ, ದಾಕ್ಷಿಣ್ಯದ ರೀತಿಯೂ ನೋಡಿದ್ದಾಯ್ತು. ಚಿಕ್ಕತ್ತೆ, ಮಗಳನ್ನು ಚಂದ ಮಾಡಿ ಬೆಳ್ಸಿದ್ದೀರಿ. ಬಾಂಬೆಯ ಬಿಂದಾಸ್ ಹುಡುಗಿಯರನ್ನು ನೋಡೀ ನೋಡೀ ಬೇಜಾರಾಗಿತ್ತು. ಇವಳನ್ನು ನೋಡಿ ಕಣ್ಣು ಮನಸ್ಸು ತಂಪಾಯ್ತು. ಸುಖವಾಗಿರು ಗೊಂಬೇ..." ಹರಸುವಂತೆ ಮತ್ತೆ ತಲೆ ನೇವರಿಸಿದ.
ಹರ್ಷನ ನೆನಪೇ ಇಲ್ಲದ ನನಗೆ ಈ ನಡವಳಿಕೆ ಮತ್ತಷ್ಟು ಮುದುಡುವಂತೆ ಮಾಡಿತು. ಆದರೂ ಆತ ತಂಗಿಯಂತೆ ನನ್ನ ಆದರಿಸಿದ್ದು ಖುಷಿಯೂ ಕೊಟ್ಟಿತು. ಇಂಥ ಸುಂದರ ಸ್ಫುರದ್ರೂಪಿ ಅಣ್ಣನಿಗಾಗಿ ನಾನೆಷ್ಟು ಹಂಬಲಿಸಿಲ್ಲ? ಸಿನಿಮಾಗಳಲ್ಲಿನ ರಾಜ್‍ಕುಮಾರ್, ವಿಷ್ಣುವರ್ಧನ್ ಅವರಂತೆ ಅಣ್ಣಂದಿರು ಇರಬೇಕು ಎನ್ನುತ್ತಿದ್ದ ನನ್ನನ್ನು ನೇಹಾ ಮತ್ತು ಸುಜಾ ಛೇಡಿಸುತ್ತಿದ್ದರು. ಇದೀಗ ಸಿನೆಮಾ ಹೀರೋನಂತಿರುವ ಅಣ್ಣನೊಬ್ಬ ಬಾಂಬೆಯಿಂದ ನನಗಾಗಿ ಬಂದಿಳಿದಿದ್ದಾನೆ. ಇಂದು ಸಂತಸದಿಂದ ನಿದ್ದೆಯೇ ಬಾರದೆಂದು ಅನ್ನಿಸತೊಡಗಿತು. ನೇಹಾಳೊಂದಿಗೆ ಹೇಳಿಕೊಳ್ಳಬೇಕು, ಆದರೆ ಬೆಳಗಿನವರೆಗೆ ಕಾಯಬೇಕಲ್ಲ. ಅಥವಾ... ಇದನ್ನೊಂದು ಕಥೆಯಾಗಿಸಿದರೆ? ಹ್ಮ್! ಅದೇ ಸರಿ. ಇವತ್ತೇ ಕಥೆಯಾಗಿಸುತ್ತೇನೆ. ಹೇಗೂ ಕಾಲೇಜಿನ ಮನೆಗೆಲಸವೇನೂ ಇಲ್ಲ.
ಹರ್ಷನ ಜೊತೆಗೆ ಹರಟುತ್ತಾ ಊಟ ಮುಗಿಸಿ ಯಾವತ್ತಿನ ಹಾಗೆ ಅಡುಗೆಮನೆ ಎಲ್ಲ ಸ್ವಚ್ಛಗೊಳಿಸಿ, ಪಾತ್ರೆ ತೊಳೆದಿಟ್ಟೆ. ತನ್ನ ಮನೆಗೆ ಹೊರಟ ಹರ್ಷನನ್ನು ಗೇಟಿನತನಕ ಕಳಿಸಿಕೊಟ್ಟೆವು. ಅಮ್ಮ ಮಲಗಿದ ಮೇಲೆ ನನ್ನ ಕೋಣೆಯಲ್ಲಿ ತಡರಾತ್ರೆಯವರೆಗೂ ದೀಪವುರಿಯಿತು....
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Monday, 15 November 2010
Subscribe to:
Posts (Atom)