************
ನಲ್ಮೆಯ ಓದುಗರಿಗೆಲ್ಲ ಹೊಸ ವರ್ಷದ ಶುಭಾಶಯಗಳು.
ಹೊಸವರುಷವು ಹೊಸದೆ ಸಂಚಿ ತಂದಿದೆ
ಹೊಸವರುಷವು ಹೊಸದೆ ಸಂಚಿ ತಂದಿದೆ
ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ
ಎಲ್ಲ ಕನಸುಗಳು ಹುರುಪು ತರಲಿ
ಎಲ್ಲ ದಿನಗಳಲೂ ಹರುಷವಿರಲಿ.
**ನೀಳ್ಗತೆಯ ಮುಂದಿನ ಭಾಗ**
ನಮ್ಮಿಬ್ಬರ ಸ್ನೇಹ ಗೆಳೆತನವನ್ನೂ ಮೀರಿ ಅಕ್ಕತಂಗಿಯರ ಮಟ್ಟಕ್ಕೆ ಮುಟ್ಟಿತ್ತು ಹರಿಣಿಗೆ ಎಂಟು ತಿಂಗಳಾಗುವಷ್ಟರಲ್ಲಿ. ನಮ್ಮ ಹರಟೆ ಮಾತಿನ ನಡುವೆ ಬಾರದ ವಿಷಯಗಳೇ ಇರಲಿಲ್ಲ. ನೆರೆಕರೆಯಲ್ಲಿ ಈಕೆ ನನ್ನ ತಂಗಿಯೇ. ಇದರಿಂದ ಸಲ್ಲದ ನೂರೆಂಟು ಪ್ರಶ್ನೆಗಳಿಗೆ ಆರಂಭದಲ್ಲೇ ಪೂರ್ಣವಿರಾಮ ಬಿದ್ದಿತ್ತು. ಯಾವಾಗಲಾದರೂ ಸುಮುಖ್ ಟೂರ್ ಹೋದಾಗ ನಾವಿಬ್ಬರೂ ಸಿನೆಮಾ ನೋಡಿ ಹೋಟೇಲಲ್ಲಿ ಊಟ ಮಾಡಿ ಬರುತ್ತಿದ್ದೆವು, ಸುಮುಖ್ ಇದನ್ನು ಛೇಡಿಸಿ ನಮ್ಮನ್ನು ರೇಗಿಸುತ್ತಿದ್ದರು. ಮಾತು ಮಾತಿನ ನಡುವೆ ನಮಗೆ ಮಕ್ಕಳಾಗುವ ಸಾಧ್ಯತೆಯೇ ಇಲ್ಲವೆನ್ನುವ ಕಹಿಸತ್ಯವನ್ನು ಹರಿಣಿಗೆ ಹೇಳಿದ್ದೆ. ಅವಳಿಂದ ಕಣ್ಣೀರು ಪ್ರತಿಕ್ರಿಯೆಯಾಗಿತ್ತು.
‘ಈಗಲೇ ಮಗು ಬೇಕಿಲ್ಲದ, ಅರ್ಹತೆಯಿಲ್ಲದ ನನಗೆ ಈ ಪರಿಸ್ಥಿತಿ ಬಂದಿದೆ. ಬೇಕು ಬೇಕು ಅಂತ ಹಂಬಲಿಸುವ ನಿಮಗೆ ನನ್ನನ್ನು ನೋಡಿಕೊಳ್ಳುವ ಈ ಗತಿ. ಇದ್ಯಾವ ನ್ಯಾಯ ನಳಿನಿ? ಎಲ್ಲಿದ್ದಾನೆ ಆ ನಿನ್ನ ದೇವರು? ನನ್ನೆದುರು ಬಂದ್ರೆ ಕೆನ್ನೆಗೆ ಹೊಡೆದು ಕೇಳ್ತೇನೆ...’
ಇಂಥ ಸನ್ನಿವೇಶಗಳಲ್ಲಿ ಅವಳನ್ನು ಸುಮ್ಮನಿರಿಸುವುದೇ ಕಷ್ಟವಾಗುತ್ತಿತ್ತು. ಆ ದಿನಗಳಲ್ಲೇ ಮನೆಯ ಸುತ್ತಲಿನ ಹಲವಾರು ಗಿಡಗಳನ್ನು ನಾವಿಬ್ಬರೂ ಸೇರಿ ನೆಟ್ಟದ್ದು. ಈ ಜಾಜಿ ಮಂಟಪವೂ ಆಗಿಂದೇ. ನಾವು ನೆಟ್ಟ ಜಾಜಿ ಹಬ್ಬಲಿ ಅಂತ ಸುಮುಖ್ ತಾನೇ ಈ ಮಂಟಪ ಕಟ್ಟಿದ್ರು. ನಮ್ಮ ಮೂವರ ಸ್ನೇಹದ ಪ್ರೀತಿಯ ಹಂದರ ಇದು. ಅದ್ಕೇ ನಮಗೆಲ್ಲ ಮೆಚ್ಚಿನ ಸ್ಥಳವೂ ಇದೇ...
ದಿನ-ವಾರ-ತಿಂಗಳು ದಾಟಿದ್ದವು. ಹರಿಣಿ ಗೆಲುವಾಗಿರುತ್ತಿದ್ದಳು. ಅವಳನ್ನು ನೋಡುತ್ತಿದ್ದ ಡಾಕ್ಟರು ನಮ್ಮ ಹಿಂದಿನ ರಸ್ತೆಯಲ್ಲೇ ಇದ್ದರು. ಅದೂ ವರಪ್ರದವೇ ಆಗಿದ್ದು ಸುಮುಖ್ ಊರಲ್ಲಿ ಇಲ್ಲದ ದಿನವೇ ಹರಿಣಿಗೆ ಹೆರಿಗೆ ನೋವು ಬಂದಾಗ, ಹದಿನೈದು ದಿನ ಮೊದಲೇ. ಗಾಬರಿಯಿಂದ ಸುಮುಖ್ ಇಳಿದುಕೊಂಡಿದ್ದ ಹೋಟೇಲಿಗೇ ಫೋನ್ ಮಾಡಿದ್ದೆ, ನಡುರಾತ್ರೆ ಒಂದೂಕಾಲರ ಸಮಯ. ಅವರೇ ನೆನಪಿಸಿದರು, ಡಾಕ್ಟರ್ ಹಿಂದಿನ ರಸ್ತೆಯಲ್ಲೇ ಇರುವುದನ್ನು. ಆಮೇಲಷ್ಟೇ ಡಾಕ್ಟರ್ ಮನೆಗೆ ಫೋನ್ ಮಾಡಿದೆ. ಇಷ್ಟು ದಿನ ಎಲ್ಲವೂ ಸರಿಯಾಗಿ ನಡೆದಿತ್ತು. ಈಗ ನನ್ನ ಕೈಕಾಲೇ ಆಡುತ್ತಿರಲಿಲ್ಲ. ಗಾಬರಿಯಿಂದ ಉಸಿರು ಗಂಟಲಲ್ಲೇ ಏರಿಳಿಯುತ್ತಿತ್ತು, ಶ್ವಾಸಕೋಶದೊಳಗೆ ಹೋಗುತ್ತಿರಲಿಲ್ಲ. ಹರಿಣಿಯೇ ನನ್ನ ಕೈಗಳನ್ನು ಹಿಡಿದು, ‘ದೀರ್ಘವಾಗಿ ಉಸಿರಾಡು, ನೀಳವಾಗಿ ಉಸಿರು ತಗೋ, ನಿಧಾನವಾಗಿ ಹೊರಗೆ ಬಿಡು... ಹಾಗೇ... ರಿಲ್ಯಾಕ್ಸ್...’ ಅಂತೆಲ್ಲ ಹೇಳುತ್ತಿದ್ದಾಗಲೇ ಬಂದ ಡಾಕ್ಟರ್ ಈ ದೃಶ್ಯ ನೋಡಿ ನಕ್ಕುಬಿಟ್ಟರು. ಆಗಷ್ಟೇ ನನ್ನ ಪರಿಸ್ಥಿತಿ ಸುಧಾರಿಸಿಕೊಂಡಿತು.
ಡಾಕ್ಟರ್ ನಮ್ಮಿಬ್ಬರನ್ನೂ ಹೊರಡಿಸಿಕೊಂಡು ತಮ್ಮ ನರ್ಸಿಂಗ್ ಹೋಮಿಗೆ ತಮ್ಮ ಕಾರಲ್ಲೇ ಕರೆದುಕೊಂಡು ಹೋದರು. ಪದೇ ಪದೇ ಪ್ರತೀ ಕಾಲು ಗಂಟೆಗೊಮ್ಮೆ ‘ಅಮ್ಮಾ....’ ಅಂತ ಹೊಟ್ಟೆ ಹಿಡಿಯುತ್ತಿದ್ದ ಹರಿಣಿಯನ್ನು ಸಮಾಧಾನಿಸುತ್ತಾ, ಅವಳು ನನಗೆ ಮಾಡಿದ್ದ ಪಾಠವನ್ನು ಅವಳಿಗೇ ಕಲಿಸಿದರು. ಕಾಂಟ್ರ್ಯಾಕ್ಷನ್ ಬಂದಾಗ ದೀರ್ಘವಾಗಿ ಉಸಿರಾಡಿ ಬಾಯಿಯ ಮೂಲಕ ನಿಧಾನವಾಗಿ ಉಸಿರು ಬಿಡುತ್ತಾ ಪೂರ್ತಿಯಾಗಿ ರಿಲ್ಯಾಕ್ಸ್ ಆಗುವ ರೀತಿಯನ್ನು ಹೇಳಿಕೊಟ್ಟರು. ಆಮೇಲಾಮೇಲೆ ನೋವು ಪ್ರತೀ ಐದು ನಿಮಿಷಕ್ಕೊಂದು ಬರುವಾಗ ಉಸಿರಾಟವನ್ನೂ ಅದಕ್ಕೆ ಸರಿಯಾಗಿ ಹೊಂದಿಸಲು ಹೇಳಿದರು. ನೋವಿನ ಒಂದೂವರೆ ನಿಮಿಷಗಳ ಕಾಲವೂ ನೀಳವಾಗಿ ಒಳ ಉಸಿರನ್ನೂ ಪುಟ್ಟಪುಟ್ಟ ನಿಶ್ವಾಸನ್ನೂ ಮಾಡಲು ತಿಳಿಸಿದರು. ಮುಂದೆ ಎರಡು ನಿಮಿಷಕ್ಕೊಮ್ಮೆ ತೊಂಭತ್ತು ಸೆಕೆಂಡ್ ಉದ್ದದ ಕಾಂಟ್ರ್ಯಾಕ್ಷನ್ಸ್ ಬಂದಾಗಲಂತೂ ನನ್ನ ದೇಹವೇ ನಡುಗುತ್ತಿತ್ತು.
ಅಂತೂ ಇಂತೂ ಮಧ್ಯಾಹ್ನದ ಹನ್ನೊಂದು ಗಂಟೆಯ ಹೊತ್ತಿಗೆ ಲೇಬರ್ ರೂಮಿಗೆ ಕರೆದೊಯ್ದರು. ಮತ್ತೆ ಹತ್ತೇ ನಿಮಿಷಗಳಲ್ಲಿ ಹಸುಗೂಸಿನ ಹೊಸ ಅಳು ನನ್ನನ್ನು ಯಾವುದೋ ಲೋಕಕ್ಕೆ ಕರೆದೊಯ್ದಿತ್ತು. ಮಗುವನ್ನು ನೋಡುವ ಆತುರದಲ್ಲಿ ಇದ್ದವಳಿಗೆ ಬೆನ್ನ ಹಿಂದೆ ಬಂದು ನಿಂತ ಸುಮುಖ್ ಗಮನಕ್ಕೇ ಬಂದಿರಲಿಲ್ಲ. ಮಗುವನ್ನು ಈಗ ತರುತ್ತಾರೆ, ಇನ್ನೊಂದು ಕ್ಷಣಕ್ಕೆ ತರುತ್ತಾರೆ... ಕಾಯುತ್ತಿದ್ದವರಿಗೆ ಮತ್ತೊಂದು ಹಸುಗೂಸಿನ ಹೊಸ ಅಳು ಕೇಳಿತ್ತು. ನಾನು ಕಂಡ ಹಾಗೆ ಅಂದು ಹರಿಣಿಯೊಬ್ಬಳೇ ಹೆರಿಗೆಗಿದ್ದವಳು. ಅಂದ್ರೆ... ಹರಿಣಿಗೆ ಅವಳಿಗಳೇ...
ನರ್ಸ್ ಒಬ್ಬಳು ಹೊರಗೆ ತಲೆ ಹಾಕಿ, ‘ಟ್ವಿನ್ಸ್ ಹುಡುಗಿಯರು. ಕಂಗ್ರಾಟ್ಸ್’ ಅಂತಂದು ಮತ್ತೆ ತಲೆ ಒಳಗೆ ಎಳೆದುಕೊಂಡಳು. ನಾವು ಪರಸ್ಪರ ಮುಖ ನೋಡಿಕೊಂಡೆವು. ಅವಳಿಜವಳಿ ಹುಡುಗಿಯರು. ಅಪ್ಪಾ, ದೇವರೇ... ಇದೇನು ಆಟವಾ ನಿನ್ನದು? ಒಂದಾದ್ರೂ ಸ್ಯಾಂಕ್ಷನ್ ಮಾಡು ಅಂತ ಬೇಡ್ತಾ ಇದ್ದ ನಮಗೆ ಸೊನ್ನೆ. ಒಂದನ್ನೇ ಏನ್ ಮಾಡ್ಲಿ ಅಂತ ಯೋಚಿಸುವವರಿಗೆ ಡಬಲ್... ಬೋನಸ್. ಎಲ್ಲಿಂದೆಲ್ಲಿಗೆ ಲೆಕ್ಕಾಚಾರ. ದೇವ್ರೇ ನಿಂಗೆ ತಲೆ ಸರಿಯಿಲ್ಲ. ನಿಂಗೆ ಲೆಕ್ಕ ಬರುದೇ ಇಲ್ಲ. ಯೂಸ್ ಲೆಸ್ ಫೆಲೋ ನೀನು...
ನನ್ನ ಮನಸ್ಸಿನೊಳಗೆ ಸಾವಿರಾರು ಅಕ್ಷರ-ಪದ-ವಾಕ್ಯಗಳು ಕಲಸಿಕೊಂಡಿದ್ದವು. ‘ಬ್ಲೀಡಿಂಗ್ ಜಾಸ್ತಿ ಉಂಟು. ಬಿ.ನೆಗೆಟಿವ್ ಬ್ಲಡ್ ತನ್ನಿ’ ಅಂತ ಹೇಳಿದಳು ಇನ್ನೊಂದು ನರ್ಸ್. ನನ್ನದು ಬಿ. ನಾನೇ ಕೊಡ್ತೇನೆ ಅಂತ ಹೊರಟವರು ಹತ್ತು ನಿಮಿಷದಲ್ಲಿ ಚಪ್ಪೆ ಮುಖ ಮಾಡಿ ಹಿಂದೆ ಬಂದರು, ತಾನು ಬಿ.ಪೊಸಿಟಿವ್ ಅಂದರು. ನನ್ನದೂ ಬಿ ಗ್ರೂಪ್ ಅಂತ ನೆನಪಾಯ್ತು. ಹೋದೆ. ಟೆಸ್ಟ್ ಮಾಡಿದಾಗ ನನ್ನದು ಬಿ.ನೆಗೆಟಿವ್. ಹರಿಣಿಯ ಪಕ್ಕದ ಟೇಬಲ್ ಮೇಲೆ ನಾನೂ ಮಲಗಿದೆ. ನನ್ನ ಕೈಯಿಂದ ಅವಳ ಕೈಯೊಳಗೆ ನೇರವಾಗಿ ರಕ್ತ ಹೋಗುವಂತೆ ಹೊಂದಿಸಿದರು. ಅವಳನ್ನೇ ನೋಡುತ್ತಾ ಮಲಗಿದೆ. ಅಕ್ಕ-ತಂಗಿಯರೆಂದು ಹೇಳಿಕೊಂಡದ್ದು ಸಾರ್ಥಕವೆನಿಸಿತ್ತು.
ಎಲ್ಲವೂ ಸುಸೂತ್ರವಾಗಿ ಹರಿಣಿ ಮತ್ತು ಮಕ್ಕಳು ಮನೆಗೆ ಬಂದಾಗ ನಿಜವಾದ ತೊಂದರೆ ಶುರುವಾಯ್ತು. ಎಲ್ಲ ಕೆಲಸಗಳನ್ನೂ ನಿಭಾಯಿಸಿಕೊಂಡು ಬಾಣಂತಿ ಮಕ್ಕಳ ಆರೈಕೆ ನನ್ನಿಂದಾಗದ ಕೆಲಸವೆಂದು ಸಂಜೆಯೊಳಗೇ ಗೊತ್ತಾಯ್ತು. ಆಗ ಸಹಾಯಕ್ಕೆ ಬಂದವರು ಲಚ್ಚಮ್ಮ. ಬಾಲವಿಧವೆ. ನಮ್ಮ ದೂರದ ನೆಂಟರು. ಎಲ್ಲರಿಗೂ ಅವರು ಲಚ್ಚಮ್ಮನೇ. ಭಾರೀ ಜಾಣೆ. ಗಡಸು ವ್ಯಕ್ತಿತ್ವದೊಳಗೆ ಅತ್ಯಂತ ಹೃದಯವಂತ ಮನಸ್ಸು. ಅವರು ಚಕಚಕ ಓಡಾಡುತ್ತಾ ಕೆಲಸ ಮಾಡುತ್ತಿದ್ದರೆ ನಾವೆಲ್ಲ ಆಮೆಗಳ ಹಾಗೆ ಅನ್ನಿಸುತ್ತಿತ್ತು. ಹಗಲೆಲ್ಲ ನನ್ನ ಕೆಲಸಗಳಲ್ಲೂ ಕೈಸಹಾಯ ಮಾಡುತ್ತಾ, ಬಾಣಂತಿ ಮಕ್ಕಳನ್ನು ಸ್ನಾನ ಮಾಡಿಸಿ, ಮಕ್ಕಳ ನೀರು-ಹೊಲಸಿನ ಬಟ್ಟೆ ಒಗೆದುಹಾಕಿ, ಮಧ್ಯಾಹ್ನ ಒಂದಷ್ಟು ಹೂಬತ್ತಿ-ದೀಪದಬತ್ತಿ ಹೊಸೆದು, ಸಂಜೆ ಮಕ್ಕಳಿಗೆ ಬಜೆ ಕೊಟ್ಟು, ರಾತ್ರೆಗೆ ಬಟ್ಟೆಗಳನ್ನೆಲ್ಲ ಹೊಂದಿಸಿಕೊಂಡು ಊಟ ಮುಗಿಸಿ ಬಾಣಂತಿ ಕೋಣೆ ಸೇರಿದರೆ ಅಲ್ಲಿಂದ ಮಕ್ಕಳ ಸ್ವರವೂ ಕೇಳದ ಹಾಗೆ ರಾತ್ರೆಯನ್ನೂ ನಿಭಾಯಿಸುತ್ತಿದ್ದರು. ಒಮ್ಮೊಮ್ಮೆ ಅವರಿಗೆ ವಿಶ್ರಾಂತಿ ಇರಲೀಂತ ನಾನು ರಾತ್ರೆ ಹರಿಣಿ ಜೊತೆ ಮಲಗಿದರೆ ಅವರಿಗೆ ನಡುಮನೆಯಲ್ಲಿ ನಿದ್ದೆಯೇ ಬಾರದು. ನಡುರಾತ್ರೆಯೇ ನನ್ನನ್ನೆಬ್ಬಿಸಿ, ‘ನಳಿನಿ. ನೀ ನಿನ್ನ ಕೋಣೆಗೇ ಹೋಗು. ನನಗಿಲ್ಲೇ ಸರಿ.’ ಅಂತ ನನ್ನನ್ನಟ್ಟುತ್ತಿದ್ದರು. ಅವರ ಚೈತನ್ಯದ ಗುಟ್ಟು ಏನಿರಬಹದೆಂದು ಸುಮುಖ್, ಹರಿಣಿ ಮತ್ತು ನಾನು ಅಚ್ಚರಿಗೊಂಡದ್ದು ಎಷ್ಟುಸಲವೋ!
ಹರಿಣಿಯ ಅವಳಿಗಳಿಗೆ ಮೂರು ತಿಂಗಳಾಗುವಾಗ, ಇಲ್ಲಿಂದ ಹೊರಟುಹೋಗುವ ಮಾತೆತ್ತಿದಳು ನಿರ್ಲಿಪ್ತವಾಗಿ. ಆಗಲೇ ನನಗೆಚ್ಚರವಾಗಿದ್ದು, ಹೋಗುತ್ತಾಳಾದರೂ ಎಲ್ಲಿಗೆ? ಹೇಗೆ? ಮುಂದಿನ ಜೀವನದ ಕತೆಯೇನು? ಯಾರಿದ್ದಾರೆ ಅವಳಿಗೆ ಆಸರೆಯಾಗಿ? ಸುಮುಖ್ ಹೇಳುತ್ತಲೇ ಇದ್ದರೂ ಮಕ್ಕಳನ್ನು ನಮಗಾಗಿ ಇಲ್ಲಿಯೇ ಬಿಟ್ಟು ಹೋಗೆನ್ನುವ ಮಾತು ನನ್ನಿಂದ ಇದುವರೆಗೆ ಬಂದಿರಲಿಲ್ಲ. ಅವಳನ್ನು ಕಳಿಸುವ ಯೋಚನೆಯೇ ನನಗಿರಲಿಲ್ಲ. ಈಗ ಏಕಾಏಕಿ ಹೊರಡುವೆ ಅಂದವಳನ್ನು ಏನೂಂತ ಕೇಳುವುದು? ಹೇಗೆ ನಿಲ್ಲಿಸಿಕೊಳ್ಳುವುದು? ಏನೂ ತೋಚದೆ ಸುಮುಖ್ ಮುಖ ನೋಡಿದೆ, ಏನಾದರೂ ಮಾಡಿರೆನ್ನುವ ಹಾಗೆ. ಸಣ್ಣಗೆ ಸಿಳ್ಳೆ ಹಾಕಿ ನಕ್ಕಾಗ ಕಸಿವಿಸಿಯಾಗಿತ್ತು. ನಗುತ್ತಾ ಹರಿಣಿಯ ಕೋಣೆಗೆ ಹೋದವರ ಮೇಲೆ ಕೋಪ ಬಂದು ಅಡುಗೆಮನೆಗೆ ಹೋಗಿಬಿಟ್ಟೆ.
2 comments:
Good,good....ಗುಟ್ಟು ಬಿಟ್ಟು ಕೊಡದೇ ಸಾಗುತ್ತಿರುವ ಕತೆ!
ಕಾಕಾ, ತಮಾಷೆ ಮಾಡ್ತಿದ್ದೀರಾ? ಹಿಂದಿನ ಸಂಚಿಕೆಯಲ್ಲೇ ಕಥೆಯ ಹೊಳಹು ಕಂಡಿದೆ ಅಂದಿರಿ! ಈಗ ಗುಟ್ಟು ಬಿಟ್ಟುಕೊಡದೆ ಸಾಗುತ್ತಿದೆ ಅನ್ನುತ್ತಿದ್ದೀರಿ. ಪ್ರೋತ್ಸಾಹದ ಪರಿಯನ್ನು ನಿಮ್ಮಿಂದ ಕಲಿಯಬೇಕಿದೆ ನಾನು. Thanks.
Post a Comment