ಅವನೆ ಕರೆದ ಮೇಲೆ ಹೋಗದಿರಲಿ ಹೇಗೆ?
ಅವನ ಕರೆಯ ಮೀರಿ ನಿಲ್ಲಬಲ್ಲೆನೆ?
ಬೆಳಕು ಮೂಡುವಲ್ಲಿ ನಿಂತು ಆಡುವವನ
ಬೆಳಕ ಗೋಳದೊಳಗೆ ಎಡವಿ ಬಿದ್ದೆನೆ
ಹಾಲುಗಡಲಿನಲ್ಲಿ ಲೀಲೆ ತೋರುವವನ
ಹಾಲುಗೆನ್ನೆಯನ್ನು ಕಂಡು ನಿಂದೆನೆ
ಬೆಟ್ಟವೆತ್ತಿ ನಿಂದು ಮಳೆಯ ತಡೆಯುವವನ
ಬೆಟ್ಟದೇರಿನಲ್ಲಿ ಅಟ್ಟಿ ಸೋತೆನೆ
ಕಂದಕರುಗಳೊಡನೆ ಮಲೆಯಲಾಡುವವನ
ಕಂದಪಾದಗಳನು ಹಿಡಿದುಕೊಂಡೆನೆ
ಕಾಡಜೇನು ಮೆಲುವ ಅವಳ ರಮಿಸುವವನ
ಕಾಡಿಬೇಡಿ ಬಯಸಿ ಮೋಡಿಗೊಂಡೆನೆ
ಕರುಣೆ ಕಣ್ಣಿನಲ್ಲಿ ನೋಟ ಹರಿಸುವವನ
ಕರುಣರಸದ ಹನಿಯ ಸವಿಯ ಉಂಡೆನೆ
(೨೨-ಮಾರ್ಚ್-೨೦೦೮/ ೨೩-ಸೆಪ್ಟೆಂಬರ್-೨೦೦೯)
(‘ಸಮ್ಮೋಹನ ಚಿಕಿತ್ಸಾ ತರಬೇತಿ’ಯಲ್ಲಿ ಸಹಾಧ್ಯಾಯಿಯೊಂದಿಗೆ ಅಭ್ಯಾಸ ಮಾಡುತ್ತಿರುವಾಗ ಸಮ್ಮೋಹಿತ ಸ್ಥಿತಿಯಲ್ಲಿ "ಕಂಡು ಅನುಭವಿಸಿದ" ದೃಶ್ಯವೊಂದರ ಭಾವಪ್ರವಾಹ ಎಚ್ಚತ್ತ ನಂತರ ಅಕ್ಷರಗ್ರಹಿಕೆಗೆ ದಕ್ಕಿದ್ದಿಷ್ಟು)
(ಮತ್ತೆ ಬಂದಿದೆ ಆ ದೇವನ ಜನ್ಮಾಷ್ಟಮಿ ಸಂಭ್ರಮ. ಅದೇ ನೆಪದಲ್ಲಿ ಅವನ ನೆನಕೆ.)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Wednesday, 1 September 2010
Subscribe to:
Post Comments (Atom)
12 comments:
ಸಮ್ಮೋಹಿತ ಸ್ಥಿತಿಯಲ್ಲಿ ಕಂಡ ಕೃಷ್ಣನ ವರ್ಣನೆ ತಮ್ಮ ಕವನದಲ್ಲಿ ಸುಪ್ತದೀಪ್ತಿಯಾಗಿ ಹರಿವ ಲಹರಿಯಂತೆ ವೇದ್ಯವಾಗಿದೆ. ಚೆಂದದ ಕವನ. ಜನ್ಮಾಷ್ಟಮಿಯಂದು ತುಂಬಾ ಪ್ರಸ್ತುತವೂ ಸಹಾ! ಜನ್ಮಾಷ್ಟಮಿಯ ಶುಭಾಶಯಗಳು ತಮಗೆ.
ಜನ್ಮಾಷ್ಟಮಿಯ ಶುಭಾಶಯಗಳು
ತುಂಬಾ ಸೊಗಸಾದ ಗೀತೆ
ಆ ಗೊಲ್ಲರ ಗೊಲ್ಲನಿಗೆ
ಜನ್ಮಾಷ್ಟಮಿಯ ಶುಭಾಶಯಗಳು
ಕವನ ಓದುತ್ತಿದ್ದಂತೆ, ಗೋಕುಲದಲ್ಲಿದ್ದಂತೆ ಭಾಸವಾಗುವದು.
ಗೋಪಿಯೊಬ್ಬಳು ಕೃಷ್ಣನನ್ನು ನೆನೆಯುವ ಭಾವವಿಭ್ರಮ ಸೊಗಸಾಗಿ ವ್ಯಕ್ತವಾಗಿದೆ.
krishnashtami shubashayagalu.
nice baraha :-D
nanna blog ge banni.
ಸೀತಾರಾಮ್ ಸರ್, ದಿಲೀಪ್, ಗುರುಮೂರ್ತಿ ಸರ್, ಸುನಾಥ್ ಕಾಕಾ, ಬದರಿ ಸರ್: ಎಲ್ಲರಿಗೂ ಧನ್ಯವಾದಗಳು ಹಾಗೂ ಶ್ರೀಕಷ್ಣ ಜಯಂತ್ಯುತ್ಸವದ ಶುಭಾಶಯಗಳು. ಜಗನ್ನಿಯಾಮಕನು ಜಗದೆಲ್ಲರಿಗೂ ಜಗಳಾಡದಂತೆ ಜಾಗೃತಿ ನೀಡಲಿ ಎಂದು ನನ್ನ ಹಾರೈಕೆ, ಪ್ರಾರ್ಥನೆ.
ಚನ್ನಾಗಿದೆ ಕವನ :)
http://manjukaraguvamunna.blogspot.com/
ಹರಿವ ಲಹರಿಯಿ೦ದ ಬ೦ದ ಅವನಿಯ ದೊರೆಯ ಕರೆ ಅನಿರ್ವಚನೀಯ ಆನ೦ದವನ್ನು ತ೦ದಿದೆ.
ನಿಮ್ಮ ಕವನ ಮನಕೆ ಮುದ ನೀಡಿತು.
ಶುಭಾಶಯಗಳು
ಅನ೦ತ್
ಕವನ ಚೆನ್ನಾಗಿದೆ.
ದೊಡ್ಡಮನಿ ಮಂಜು, ಅನಂತರಾಜ್, ಮನಮುಕ್ತಾ: ನನ್ನ ಅಕ್ಷರಲೋಕಕ್ಕೆ ಸ್ವಾಗತ ಮತ್ತು ನಿಮ್ಮ ಅಭಿಪ್ರಾಯ ದಾಖಲಿಸಿದ್ದಕ್ಕೆ ವಂದನೆಗಳು. ಹೀಗೇ ಬರುತ್ತಿರಿ, ಬರೆಯುತ್ತಿರಿ.
ಸುಪ್ತದೀಪ್ತಿಯವರೇ,
ಸುಂದರ ಕವನ !
ಕಾಡಜೇನು ಮೆಲುವ ಅವಳ ರಮಿಸುವವನ..
ಈ ಕಾಡಜೇನು ಮೆಲುವ ಗೋಪಿಕೆ ಯಾರು?
ಶಿವ್, ಪ್ರತಿಕ್ರಿಯೆಗೆ ಧನ್ಯವಾದಗಳು.
"ಕಾಡಜೇನು ಮೆಲುವ" ಆಕೆ ಗೋಪಿಕೆಯಲ್ಲ, ಗೋಕುಲದವಳಲ್ಲ; ಕಾಡಿನಲ್ಲೇ ಇದ್ದ/ ಇರುವ ಜಾಂಬವಂತನ ಪುತ್ರಿ ಜಾಂಬವತಿ.
ಶ್ಯಮಂತಕ ಮಣಿ ಪ್ರಕರಣದಲ್ಲಿ ಆಕೆಯ ವಿವಾಹ ಶ್ರೀಕೃಷ್ಣನೊಂದಿಗೆ ಆಗುತ್ತಲ್ಲ, ಅದರ ಉಲ್ಲೇಖ.
Post a Comment