ಬೇಸ್ ಬಾಲ್, ಫುಟ್ ಬಾಲ್,
ಸಾಕರ್, ಸ್ಕೇಟಿಂಗ್,... ಇಂಥವೇ
ಇತ್ಯಾದಿ ಆಟಗಳನ್ನು ಕಂಡು
ಬೆಳೆದ ಹತ್ತರ ವಯಸಿನ ಮಗ
ಊರಿಗೆ ಬಂದು ಕೆಲವಾರು ತಿಂಗಳುಗಳಲ್ಲೇ
ಕ್ರಿಕೆಟ್ಟಿನ ಒಳಹೊರಗನ್ನು ಅರಿತಿದ್ದಾನೆ
ಗೆಳೆಯರೊಡನೆ ಖ್ಖೋ-ಖ್ಖೋ ಆಡುತ್ತಾನೆ
ಕಬಡ್ದಿಯ ಪರಿಚಯವೂ ಆಗುತ್ತಿದೆ
ಮೊನ್ನೆ ನಮ್ಮ ಬಾಲ್ಯದ
ಕಥೆಗಳನ್ನು ಹೇಳುತ್ತಿದ್ದಾಗ...
"ಅಮ್ಮ, ಲಗೋರಿ ಅಂದ್ರೇನು?"
ಉತ್ತರ ವಿವರಿಸಿ ಹೇಳಿದರೆ
ಸ್ವಾರಸ್ಯವಿಲ್ಲೆನಿಸಿತು;
"ಈ ಸಲ ಹಳ್ಳಿಗೆ ಹೋದಾಗ
ಎಲ್ಲರೂ ಸೇರಿ ಆಡೋಣ,
ನಿಮಗೆ ಸರಿಯಾಗಿ ಅರ್ಥವಾಗಲಿ..."
ರಜೆಯೂ ಬಂದು ಹಳ್ಳಿಗೆ ಹೋಗಿ
ಅಲ್ಲೊಂದು ಸಮಾರಂಭಕ್ಕೆಂದು
ಮನೆಮಂದಿಯೆಲ್ಲ ಸೇರಿದ ಸಂದರ್ಭ;
ಊಟ ಮುಗಿಸಿ ಪಟ್ಟಾಗಿ ತೇಗಿ
ವೀಳ್ಯ ತಿಂದವರೂ
ಮಿತ ವೇಗದಲ್ಲಿ ಸಾಗುತ್ತಿದ್ದಾಗ-
ಎಲ್ಲರ ಗಮನ ಸೆಳೆದೆ-
"ಲಗೋರಿ ಆಡುವನಾ?"
ಎಲ್ಲ ನಿಶ್ಶಬ್ದ.
೧-೨- - - -೬-೭
ಪ್ರತೀ ಮುಖದಲ್ಲೂ ಗೆಲುವು
ಮೆಲುವಾಗಿ ಗುಸು ಗುಸು
ಪಿಸು ಪಿಸು ಶುರುವಾಗಿ
ಗಾಢವಾಗಿ ಹರಡಿ "ಯೇ...ಏ..ಏ..ಸ್ಸ್"ನಲ್ಲಿ
ತಾರಕಕ್ಕೇರಿದಾಗ ಮಗನಿಗೂ ನನಗೂ
ಅತ್ಯಾನಂದ; ಅನಿರೀಕ್ಷಿತ ಘಟಿಸಿತ್ತು.
ಸುಲಭವಾಗಿ ಗುಂಪು ವಿಭಜನೆ-
"ಗಂಡಸರೆಲ್ಲ ಒಂದು ಕಡೆ, ಹೆಂಗಸರೊಂದು"
ಚೆಂಡು, ಏಳು ಪಲ್ಲೆ-ಕಲ್ಲುಗಳು
ಆಗಲೇ ತಯಾರಿದ್ದವು;
ಗದ್ದೆಯಂಗಳವೂ ತೆರೆದಿತ್ತು.
ಅರುವತ್ತೈದು, ಎಪ್ಪತ್ತರ ಅಜ್ಜ-ಅಜ್ಜಿಯರು,
ನಲ್ವತ್ತು ನಲ್ವತ್ತೈದರ ಅಪ್ಪ-ಅಮ್ಮ,
ಮೂವತ್ತರ ಹುರುಪಿನ ಹುರುಯಾಳುಗಳು,
ಹದಿನೈದು ಇಪ್ಪತ್ತರ ಅಕ್ಕ-ತಮ್ಮ,
ಕೊನೆಗೆ ಹನ್ನೆರಡು ಹತ್ತು ಎಂಟುಗಳು;
ಎಲ್ಲರಲ್ಲೂ ಹೊಸ ಹುರುಪು
‘ಸರಿಯಾಗಿ ತಯಾರಾಗಲು’
ವಿಭಜಿಸಿ ನಿಂತಿದ್ದ ಗುಂಪುಗಳೊಳಗೆ
ಪಿಸುಮಾತು, ಕಿವಿಮಾತು,
ಎದುರಾಳಿಯ ಸೋಲಿಸಲು ಯೋಜನೆಗಳು.
ಪಲ್ಲೆಗಳೇಳು ಗದ್ದೆಯ ನಡುವೆ
ಗೋಪುರ, ಕಾದಿತ್ತು ಚೆಂಡು.
"ಅವರೆಲ್ಲ ಶೂ-ಚಪ್ಲಿ ಹಾಕ್ತಿದ್ದಾರೆ..."
ಪತ್ತೇದಾರಿ ಮಾಡಿದಳು ಏಳರ ಮಗಳು.
ಇನ್ನೇನು ಆಟ ಶುರುವಾಗಬೇಕು,
ಇಪ್ಪತ್ತರ ಒಬ್ಬ ತಕರಾರೆತ್ತಿದ-
"ನೀವು ಹೆಂಗಸರ ಗುಂಪಲ್ಲಿ
ಜಾಸ್ತಿ ಜನ ಇದ್ದೀರಿ, ಸರಿಯಲ್ಲ"
ತಲೆಲೆಕ್ಕವಾಗಿ, ಕೊನೆಗೆ
ನಾವೈದು ಜನ ಹೆಚ್ಚು.
ಇಬ್ಬರು ನಿರ್ಣಾಯಕರಾದರು,
ಇಬ್ಬರು ಕಾಫಿ ಮಾಡಲು ಹೋದರು,
ಒಬ್ಬಳು ತಿಂಗಳ ಬಾಣಂತಿ-
ಆಗಷ್ಟೇ ಗಮನಕ್ಕೆ ಬಂದಳು.
ಗುಂಪುಗಳ ಲೆಕ್ಕ ಸರಿತೂಗಿತು;
ಆಟದ ನಿಯಮ ಸಾರಲಾಯಿತು.
ಆಗಲೇ ನಮ್ಮೊಳಗಿನೊಂದು ದನಿ-
"ನಿನ್ನವನೆಲ್ಲಿ? ಕಾಣ್ತಾ ಇಲ್ಲ?"
ದಿಗಿಲಾಗಿ ಕಣ್ಣುಗಳು ಹುಡುಕಿದವು.
ಹುರುಪು ಸೋರಿತು, ಅಳುಕು
ಮನೆ ಮಾಡಿ ಆಳಲಾರಂಭಿಸಿತು.
ನನ್ನವನಿಗಾಗಿ ಸುತ್ತಲೂ ನೋಡಿದೆ,
ಮನೆಯೊಳಗೆಲ್ಲ ಓಡಿದೆ,
ಈಚೆ ಬಂದಾಗ ಚಾವಡಿಯಲ್ಲಿ
ಗಂಟೆ ಬಾರಿಸಿತು. ಲೆಕ್ಕ ಆರು.
ತಲೆಯೊಳಗೆ ಚಿಕ್ಕ ಹಕ್ಕಿ
ಚಿಲಿಪಿಲಿ, ಸುತ್ತ ನೋಡಿದರೆ-
ಮಬ್ಬುಗತ್ತಲು, ಒಂಟಿತನದರಿವು...
ನೆಲದ ಚಾಪೆಯ ಮೇಲಿಂದ
ವಾಸ್ತವದ ಮುಂಜಾನೆಗೆ ಮುಖ ಮಾಡಿದ್ದೆ.
ನೆನಪುಗಳ ಹಂದರ ಸ್ಪಷ್ಟವಾಯಿತು.
ಕೆಲಸದ ನಿಮಿತ್ತ ದೂರ ಹೋದ
ನಲ್ಲನ ಮುಖ ನಗೆ ಬೀರಿತು.
ಜೊತೆಗೇ ಕಂಡವು ಜವಾಬ್ದಾರಿಗಳ
ಒಂದೊಂದೇ ನೆಲೆಗಳು-
ಆ ಬಿಲ್ಲು, ಈ ಬಿಲ್ಲುಗಳು,
ಬ್ಯಾಂಕು, ಪೋಸ್ಟಾಫೀಸುಗಳು,
ಹಣ್ಣು-ತರಕಾರಿ-ಬ್ರೆಡ್-ಜ್ಯಾಮುಗಳು,
ಮಗ-ಮಗಳ ಶಾಲೆ, ಪರೀಕ್ಷೆಗಳು,
ಮುಗಿಯದ ಮನೆಗೆಲಸಗಳು,
ಬಂದು ಹೋಗುವ ನೆಂಟರಿಷ್ಟರು,
ಇವೆಲ್ಲದರ ಜೊತೆಗೆ ನನ್ನ ಓದು...
ಗದ್ದೆಯಂಗಳದ ನಡುವಿಂದ ಯಾರೋ
"ಏಳು ಕಲ್ಲುಗಳ ಲ...ಗೋ...ರೀ..." ಅಂದರು.
(೧೦-ಮಾರ್ಚ್-೨೦೦೦)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Tuesday 15 June, 2010
Subscribe to:
Post Comments (Atom)
7 comments:
ಜ್ಯೋತಿ,
ಮೈದಾನದಲ್ಲಿ ಆಡುವ ಲಗೋರಿ ಮಕ್ಕಳಿಗೆ,ದಿನನಿತ್ಯ ಆಡಲೇಬೇಕಾದ ಲಗೋರಿ ದೊಡ್ಡವರಿಗೆ. ಒಟ್ಟಿನಲ್ಲಿ ಜೀವನವೇ ಒಂದು ಲಗೋರಿ. ನಿಮ್ಮ ಕವನದಲ್ಲಿ ಏನೆಲ್ಲ nostalgia, ಏನೆಲ್ಲ ಭಾವನೆ ಅಡಗಿಕೊಂಡಿವೆ. ಪ್ರತಿ ಕವನಕ್ಕೂ ಅತ್ಯಂತ suitable meter ನಿಮಗೆ ಸ್ಫೂರ್ತವಾಗುವಂತೆ, ಇಲ್ಲೂ ಸಹ
free verse ತಾನಾಗಿ ಅರಳಿದೆ. ಅಭಿನಂದನೆಗಳು.
ಅದ್ಭುತ ಹೋಲಿಕೆಗಳೊ೦ದಿಗೆ ಜೀವನವನ್ನ ಲಗೋರಿಗೆ ಸಮಿಕರಿಸಿ ಹೇಳದೆ ಅಪಾರ ಅರ್ಥವನ್ನು ಹರವಿದ್ದಿರಾ ಕವನದಲ್ಲಿ. ಚೆ೦ದದ ತಾ೦ತ್ರಿಕ ಕವನ.
Jyothi madam,
chennagide kavana mattu lagori
Thanks to all.
I'm on tour. Will reply in detail once I'm home.
Thanks again.
Regards,
Jyothi.
oh. yaava tour?
This blog is good.
ಅಕ್ಕ... "ನಾವಿಕ ವಿಶ್ವ ಕನ್ನಡ ಸಮ್ಮೇಳನ"ದ ’ಕಾವ್ಯಧಾರೆ’ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ನಿಮಗೆ ಶುಭಾಶಯಗಳು. :-)
Post a Comment