ಒಂದೆರಡು ಚಮಚ ಗಂಟಲಿಗಿಳಿಸಿದರೆ-
ಉದ್ದ ಕೊಳವೆಯ ಉದ್ದಕ್ಕೂ
ಗೊಂದಲ ಕೋಲಾಹಲ;
ತಳಮಳ, ತಲ್ಲಣ.
ಕಿವುಚಿ, ಕುಲುಕಿ, ಮಸಕಿ,
ಸೋಸಿ, ಜಾಡಿಸಿ, ತೊಳಸಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.
ಒಂದೆರಡು ಚಮಚ ನೆತ್ತಿಸವರಿದರೆ-
ಮಿಳಮಿಳ, ಪಿಚಪಿಚ,
ಜಿಡ್ಡು, ಜಿಗುಟು, ಅಂಟು.
ನೆನೆಸಿ, ಕಾಯಿಸಿ, ತೋಯಿಸಿ,
ಬಿಸಿಬಿಸಿ ಎರೆದು ಉಜ್ಜಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.
ಒಂದೆರಡು ಚಮಚ ಲೇಪಿಸಿಕೊಂಡರೆ-
ಕಳವಳ, ಕಿರಿಕಿರಿ.
ಸವರಿ, ನೀವಿ, ಮರ್ದಿಸಿ,
ಬೆಚ್ಚಗೆ ಸುರಿದು ತಿಕ್ಕಿ,
ಕೆಲಸ ಮುಗಿಸಿದಾಗ-
ನಿರುಂಬಳ ಹಗುರ ಭಾವ.
(೦೮-ಎಪ್ರಿಲ್-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Subscribe to:
Post Comments (Atom)
5 comments:
ಕವನ ಚೆನ್ನಾಗಿದೆ.ಸಣ್ಣವಯಸ್ಸಿನಲ್ಲಿ ಒಲ್ಲದೆ ಹರಳೆಣ್ಣೆ ಕುಡಿದ ಮತ್ತು ಕುಡಿದು ಅನುಭವಿಸಿದ ಪಡಿಪಾಟಲು ನೆನಪಿಗೆ ಬಂತು.ನನ್ನ ಬ್ಲಾಗಿಗೂ ಒಮ್ಮೆ
ಬನ್ನಿ.
ಕಹಿಯಾದರೂ ಪ್ರಯೋಜನಕಾರಿ ಹರಳೆಣ್ಣೆಯ ಪರಿಚಯ ಕವನದಲ್ಲಿ ಮುದ್ದಾಗಿ ಮೂಡಿದೆ.
ಹರಳೆಣ್ಣೆಯನ್ನು ಮೆಚ್ಚಿಕೊಂಡ ಇಬ್ಬರಿಗೂ ಧನ್ಯವಾದಗಳು.
ಡಾ. ಕೃಷ್ಣಮೂರ್ತಿಯವರೇ, ಈಗೀಗ ಕೊಲೋನ್ ಕ್ಲೀನ್ಸರ್ ಎನ್ನುವ ದೊಡ್ಡ ಹೆಸರು ಹೊತ್ತ ದೊಡ್ಡ ದೊಡ್ಡ ಔಷಧಿಗಳು ಮಾರುಕಟ್ಟೆಯಲ್ಲಿವೆ. ಅವೆಲ್ಲವೂ ಮಾಡುವುದು ಇದೇ ಸರಳ ಹರಳ ಎಣ್ಣೆಯ ಹಗುರಾಗಿಸುವ ಕೆಲಸವನ್ನೇ. ವರ್ಷಕ್ಕೊಮ್ಮೆಯಾದರೂ ಸೇವಿಸಿದರೆ ಆರೋಗ್ಯಕ್ಕೆ ಉತ್ತಮವೆನ್ನುತ್ತಾರೆ ಹಿರಿಯರು. ಪಡಿಪಾಟಲಿಲ್ಲದೆ ಆರೋಗ್ಯವಿಲ್ಲ, ಅಲ್ವೆ?
ಸೀತಾರಾಮ್ ಸರ್, ಅತಿಯಾದರೆ ಅಮೃತವೂ ವಿಷ; ಹಾಗೇನೇ ಕಹಿಯಾದರೂ ಬೇವು ಅಮೃತ. ಹರಳೆಣ್ಣೆಯೂ ಅದೇ ಸಾಲಿನದು.
ತುಂಬಾ ಸುಂದರ ಕವನ
ಮುಂದುವರೆಯಲಿ
ಏನು ಮೂರ್ತಿ ಸರ್, ಹರಳೆಣ್ಣೆ ಸಹವಾಸ ಮುಂದುವರೆಯಲಿ ಎಂದಿರಾ ಹೇಗೆ? ಮೆಚ್ಚುಗೆಗಂತೂ ಧನ್ಯವಾದಗಳು.
Post a Comment