ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 4 September, 2009

ನನ್ನ ಮನೆಯಲ್ಲಿ...

ನನ್ನ ಮನೆಯಲ್ಲೇ ನಾನು ಪರಕೀಯ;
ಅಪ್ಪನ ಮಾತಿಗೆ ಎದುರಾಡದೆ-
ಅಣ್ಣ-ತಮ್ಮರ ದನಿಗೆ ದನಿಗೊಡದೆ-
ಹೊಸಿಲ ಹೊರಗುರುಳಿ, ಮರಳಿ-
ಬಂದು ಹೋಗುತಿಹ ನೆಂಟ.

ನನ್ನ ಮನೆಯಲ್ಲೇ ನಾನು ಬಲುಸ್ವಾರ್ಥಿ;
ಬೆಳಕಿರದ ಸೂರಿಗೆ ದೀಪ ತೂಗಿಸಿ-
ಬೆಡಗಿರದ ಗೋಡೆಗೆ ಬಣ್ಣ ಅಂಟಿಸಿ-
ಅಂಗಳ ಬೆಳೆಯಿಸಿ, ಅರಳಿಸಿ-
ಅಂದ ತೋರಿಸಿದ ಬಂಟ.

ನನ್ನ ಮನೆಯಲ್ಲೇ ನಾನು ಕಡುದೋಷಿ;
ಸರಿದಾರಿ ತೋರಿ ಒಂದಿಷ್ಟು ಗದರಿ-
ಸಂಯಮದ ಪಾಠ ಮತ್ತಷ್ಟು ಒದರಿ-
ಕಿರಿಯರ ಕೈ ಹಿಡಿದು ನಡೆದು-
ಮುಂದೆ ಸಾಗಿಸಿದ ಕುಂಟ.

ನನ್ನ ಮನೆಯಲ್ಲೇ ನಾನು ಹುಚ್ಚಾತ್ಮ;
ಉಂಡೆಯಾ, ಉಟ್ಟೆಯಾ, ಅನ್ನದವರೊಳಗೆ-
ಉಸಿರಿನ ಕೋಟೆಯ ಪಿಸುದನಿಗಳೊಳಗೆ-
ಕಟಕಿಯನು ಕಂಡೂ ಕಾಣದ-
ನಗೆ-ಕಾಯಕದ ಒಂಟಿ.

(ಹುಟ್ಟಿ-ಬೆಳೆದ ಮನೆಗಾಗಿ ಸ್ವಂತ ಸಂಸಾರವನ್ನೂ ಕಡೆಗಣಿಸಿ, ತನ್ನದೆಲ್ಲವನ್ನೂ ಧಾರೆಯೆರೆದು, ಬಾಳು ಸಾಗಿಸುವ ‘ಪರಕೀಯ ಆತ್ಮ’ರಿಗಾಗಿ....)
(೨೫-ಫ಼ೆಬ್ರವರಿ-೨೦೦೪)

5 comments:

sunaath said...

ದೇವರು ಇಂಥ ಪುಣ್ಯಾತ್ಮನಿಗೆ ಶುಭ ಮಾಡಲಿ!

sritri said...

ಇಂತಹ ಪರಕೀಯರನ್ನು ಬಹಳಷ್ಟು ಮನೆಗಳಲ್ಲಿ ಕಂಡು ಮರುಗಿದ್ದೇನೆ.

ಸುಪ್ತದೀಪ್ತಿ suptadeepti said...

ಸುನಾಥ್ ಕಾಕಾ, ವೇಣಿ,
ಇಂಥ ‘ಪರಕೀಯ’ರನ್ನು ಕಂಡು, ಅವರ ಮೇಲೆ ಮರುಕ, ಗೌರವ, ಕಾಳಜಿ... ಎಲ್ಲವೂ ಹುಟ್ಟಿದ್ದರಿಂದ ಈ ಕವನ.
ಅಂಥವರಿಗೆ ದೇವರೊಬ್ಬನೇ ಶುಭ ಮಾಡಬೇಕಷ್ಟೇ, ಕಾಕಾ.

ಇಬ್ಬರಿಗೂ ಧನ್ಯವಾದಗಳು.

Anonymous said...

idu sathya jyothi.... namma naduveye iruva inthavarige vandane... avarannu thorisida nimagoo kooda ....

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಶಮಾ. ಇಂಥವರು ನಮ್ಮ ನಡುವೆ ಇದ್ದಾರೆಂದೇ ಮಳೆ-ಬೆಳೆ ಆಗುತ್ತಿವೆ ಅನ್ನಬಹುದು ನಮ್ಮ ಹಿರಿಯರು. ನೋಡುವ ಕಣ್ಣಿರಬೇಕು. ಅದು ನಿಮಗಿದೆ. ವಂದನೆಗಳು.