ಎಲ್ಲ ಬೆಳಗುವ ಸೂರ್ಯನ ಸುತ್ತ
ಕಟ್ಟಿದ ಮೋಡದಿಂದ ಬಿದ್ದದ್ದು
ಕೊರೆಯುವ ಛಳಿ ಹಿಡಿಸಿ ನಡುಗಿಸುವ ಹಿಮ
ಕರಗಿ ಹರಿದರೆ ನೀರಾದರೂ ಆದೀತು
ಬೆಟ್ಟದ ತಣ್ಣನೆ ಗಾಳಿಯಲ್ಲಿ ಅದೂ ಸಾಧ್ಯವಿಲ್ಲ
ನೋಟ ಹರಿದಷ್ಟೂ ಬಿಳಿಯ ರಾಶಿ
ದೂರದ ಬೆಟ್ಟ ನುಣ್ಣಗೆ, ಬೆಣ್ಣೆನುಣ್ಣಗೆ
ಎಲ್ಲ ತಗ್ಗು ದಿಣ್ಣೆಗಳನ್ನೂ ಸೇರಿಸಿ
ಆವರಿಸಿ ಹೊದೆಸಿ ಬಿಮ್ಮಗೆ ಕೂತ ಹಿಮ
ರವಿ ಇಣುಕಿದರೆ ಕಣ್ಣಿಗೇ ರಾಚುವ ಬೆಳಕು
ಮಸುಕು ಮಸುಕು, ಮುಸುಕಿದ ಮಂಜು
ಮೈಲರ್ಧದ ಆಚೆಗೇನೂ ಕಾಣದ ಪರದೆ
ತೆಳುವಾಗಿ ಹರಡಿದ ಮಾಯಾ ಜಾಲ
ಪ್ರತಿಫಲನದ ಪ್ರತೀಕ್ಷೆಯಲ್ಲಿಯೇ
ಎಗರಾಡದೆ ನಯವಾಗಿಯೇ ಹರಿಯುವ ಬಂಡಿ
ಎತ್ತರ ಗುಡ್ಡದ ನೆತ್ತಿಯ ಬದಿಯಲ್ಲಿ
ಕಿರುತಿರುವಿನ ರಸ್ತೆಯಂಚಿನ ಬೇಲಿ
ತಡೆಯೇ ತಿಳಿಯದಂತೆ ತೇಲಿಹೋದದ್ದು
ಕನಸೊ? ಕಲ್ಪನೆಯೊ? ಬದುಕೊ?
ಕೊರೆವ ಗಾಳಿಯೊಳಗೆ ಗುರುತುಗಳಿಲ್ಲ
(೦೫-ಜನವರಿ-೨೦೦೯)
9 comments:
ಕನಸೋ? ಕಲ್ಪನೆಯೋ? ಬದುಕೋ?
-ಹೌದಲ್ವಾ ಜ್ಯೋತೀಜೀ? ಗುರುತುಳಿಸದೇ ತೇಲಿ ಹೋದದ್ದು ಏನು ಬೇಕಾದರೂ ಆಗಬಹುದಲ್ವಾ?
ಇಷ್ಟವಾಯ್ತು ಕವಿತೆ..
ಇದು ಮೂಕವಿಸ್ಮಯ.
ಸುಂದರವಾದ ಭಾವಾಭಿವ್ಯಕ್ತಿ.
ಸುಪ್ತದೀಪ್ತಿಯವರೆ...
"ತಡೆಯೇ ತಿಳಿಯದಂತೆ ತೇಲಿಹೋದದ್ದು
ಕನಸೊ? ಕಲ್ಪನೆಯೊ? ಬದುಕೊ?
ಕೊರೆವ ಗಾಳಿಯೊಳಗೆ ಗುರುತುಗಳಿಲ್ಲ"
ಈ ಸಾಲುಗಳು ಹೆಚ್ಚು ಇಷ್ಟವಾದವು.
ಅದೆಲ್ಲಿ ಸಿಗುತ್ತವೆ ಇಷ್ಟು ಚೆಂದದ ಸಾಲುಗಳು!
ಸುಶ್, ಕಾಕಾ, ಶಾಂತಲಾ, ಮೂವರಿಗೂ ಧನ್ಯವಾದಗಳು.
ಹಿಮಾವೃತ ದಾರಿಯ ಪಯಣದ ಸುಂದರ ವರ್ಣನೆ. ಸೂರ್ಯನಿಗೂ ಚಳಿ ಬರಿಸುವ ಬೆಳ್ಳನೆ ಹಿಮರಾಶಿಯ ಚಿತ್ರ ಇನ್ನಷ್ಟು ಸ್ಫುಟವಾಗಿದ್ದರೆ ಚೆನ್ನಾಗಿತ್ತು.
ಧನ್ಯವಾದ ವೇಣಿ.
ನೀನು ಹೇಳಿದ್ದು: "ಸೂರ್ಯನಿಗೂ ಚಳಿ ಬರಿಸುವ ಬೆಳ್ಳನೆ ಹಿಮರಾಶಿಯ ಚಿತ್ರ ಇನ್ನಷ್ಟು ಸ್ಫುಟವಾಗಿದ್ದರೆ ಚೆನ್ನಾಗಿತ್ತು."
ನಾನು ಹೇಳೋದು: ಉತ್ತರ ಕವನದಲ್ಲೇ ಇದೆ--
"ಮಸುಕು ಮಸುಕು, ಮುಸುಕಿದ ಮಂಜು
ಮೈಲರ್ಧದ ಆಚೆಗೇನೂ ಕಾಣದ ಪರದೆ
ತೆಳುವಾಗಿ ಹರಡಿದ ಮಾಯಾ ಜಾಲ"
-- ಇಂಥ ವಾತಾವರಣದ ಸ್ಫುಟಚಿತ್ರ, ಅದೂ ಚಲಿಸುತ್ತಿರುವ ಕಾರಿನಿಂದಲೇ ತೆಗೆದಾಗ, ಹೇಗೆ ಇರಬಹುದು? ಅದನ್ನೇ ಇಲ್ಲಿ ಹಾಕಿದ್ದು.
ಧನ್ಯವಾದ ಶಂಕರಣ್ಣ. ಹೀಗೇ ಬರುತ್ತಿರಿ, ಕಮೆಂಟ್ಸ್ ಬರೆಯುತ್ತಿರಿ.
ಅಕ್ಕಾ,
ಕವನ ತುಂಬಾ ತುಂಬಾ ಚೆನ್ನಾಗಿದೆ. ಕೊನೆಯ ಸಾಲುಗಳು ಮತ್ತೂ ಇಷ್ಟವಾದವು.
ಧನ್ಯವಾದಗಳು ತೇಜು.
Post a Comment