(ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ" ಧ್ವನಿಮುದ್ರಿಕೆಯಲ್ಲಿದೆ.
ಹಾಡಿದವರು: ಶ್ರೀಮತಿ ಸಂಗೀತಾ ಬಾಲಚಂದ್ರ, ಉಡುಪಿ.)
ಹವಳದ ತುದಿಯಲಿ ಅರಳುವ ಮುತ್ತು
ಹರಡುವ ಕಂಪು ಮುಸ್ಸಂಜೆಗೆ ಗೊತ್ತು
ಹಸುರಿನ ತೆರೆಯಲಿ ಮಿಂಚುವ ಮಾಯೆ
ಹೊತ್ತಾರೆ ನೋಡಲು ಬೆಳ್ಳನೆ ಛಾಯೆ
ಕಡಲಿನಾಳದ ಚಿಪ್ಪು ಒಡೆದಿಲ್ಲಿ ಬಂತೆ?
ಬರುವಾಗ ಹವಳವನು ಸೆಳೆತಂದಿತಂತೆ!
ದೇವಲೋಕದ ಗಂಧ ಚಂದನವ ಪೂಸಿ
ನಮಗಾಗಿ ಅರಳುತಿವೆ ಸೌಂದರ್ಯ ಸೂಸಿ
ಒಂದೊಂದು ತಾರೆಯೂ ಅಲ್ಲಿಂದ ಕಳಚಿ
ಇಳಿವಾಗ ಹದವಾದ ಹಾಲಂತೆ ಬಿಳಿಚಿ
ತುದಿಯಲ್ಲಿ ನೆಪಮಾತ್ರಕೊಂದು ಕಿಡಿ ಕೆಂಡ
ಮುಡಿದುಕೊಂಡರೆ ಮಾತ್ರ ಕ್ಷಣದಲ್ಲಿ ದಂಡ
ಇಂಥ ನಾಜೂಕು ಚೆಲುವ ಅಮರಾವತಿ ಹೂವು,
ಇಲ್ಲೆಲ್ಲಿ ಹುಡುಕಲಿ, ಪರದೇಶಿಗಳು ನಾವು
ಆ ಕಂಪು, ಆ ಅಂದ, ಗಂಟೆಗಳ ಆಯುಸ್ಸು
ಕಳೆದುಹೋಗಿದೆ ಈಗ; ಅಂತೆ ಬಾಲ್ಯ ವಯಸ್ಸು
ನಿನ್ನ ಮುತ್ತುಗಳನ್ನು ಆಯುತ್ತಿದ್ದ ಕೈಗಳು
ಪೋಣಿಸಿ ಮಾಲೆಮಾಡಿ ಏರಿಸಿಕೊಂಡ ಹೆರಳು
ದೇವ ಪೂಜೆಗೆ ನಿನ್ನ ತುಂಬಿಟ್ಟ ಹರಿವಾಣ
ಪಾರಿಜಾತ, ನೀನಿಲ್ಲದೂರಲ್ಲಿ ಇವೆಲ್ಲ ಭಣಭಣ
(೧೦-ಜುಲೈ-೧೯೯೮)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday 22 June, 2008
Subscribe to:
Post Comments (Atom)
3 comments:
'ಅಮರಗಂಧ' ಎಷ್ಟೊಳ್ಳೆ ಶೀರ್ಷಿಕೆ! ಚಂದ ಕವಿತೆ. ಸಖತ್ ಇಷ್ಟ ಆಯ್ತು.
ಆದ್ರೆ ಹಾಡು ಕೇಳಿ ತೃಪ್ತಿ ಆಗ್ಲಿಲ್ಲ. ಇನ್ನೂ ಚನಾಗ್ ಹಾಡಬಹುದಿತ್ತೇನೋ ಅನ್ನಿಸ್ತು.. :(
ಕವನ wonderful.
ಹಾಡುಗಾರಿಕೆ ಸಮರ್ಪಕವಾಗಿಲ್ಲ.(podcastನಲ್ಲಿ ಟಿಪ್ಪಣಿ ಬರೆಯೋಕೆ ಸಾಧ್ಯವಾಗಲಿಲ್ಲ).
ಸುಶ್, ಸುನಾಥ್ ಕಾಕಾ ಇಬ್ಬರಿಗೂ ಧನ್ಯವಾದಗಳು.
Post a Comment