ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 18 March 2014

ಮತ್ತೆ ದ್ರೌಪದಿ...

 ಹಿಮಾಗ್ನಿ

ಧರ್ಮಧ್ಯಾನಕೆ ನೀನು ಪದರಶಾಂತಿಯ ಧರಣಿ
ಇಂಗದ ಹಸಿವಿಗೆ ಪರಿಪೂರ್ಣಮಾತೆ
ರಸಿಕನಾಲಂಬನಕೆ ಶೃಂಗಾರ ರಂಭೆಯೇ
ಸೌಂದರ್ಯಮೂರ್ತಿಗೆ ಸದ್ರೂಪಲಕ್ಷ್ಮಿ
ಬಲುರಾಜತಂತ್ರಿಗೆ ಸೂಕ್ತಮಂತ್ರಿಯ ನೆರಳು
ಸಾಮ್ರಾಜ್ಯ ಛತ್ರದ ಅಭಿಷಿಕ್ತ ದಾಸಿ  

ನೀತಿಸಂಹಿತೆಗಳಿಗೆ ಭೂಮಿಕೆಯು ನೀನಾದೆ
ವಾಯುವೇಗಕೆ ಇತ್ತೆ ಮತ್ತೆ ಉತ್ಕರ್ಷ
ಶೌರ್ಯೋತ್ತುಂಗಕ್ಕೆ ಸ್ವಯಂ ಬಹುಮಾನ
ಆತ್ಮಗೌರವಕಾದೆ ಸೆಳೆವಶ್ವಶಕ್ತಿ
ಅಸಮ ಬುದ್ಧಿಯ ಬಲಕೆ ಪುಷ್ಠಿ ಸುರಭಿಯು ನೀನು
ಕರ್ಷಣಾಕೇಂದ್ರವೇ ನೀನಂತರ್ಬಿಂದು

ಋಜುಮಾರ್ಗ ಸತ್ವಕ್ಕೆ ನಿಜಬಟ್ಟೆಯಾಗಿದ್ದೆ
ಮಿಡಿಯುವೆದೆಯೊಳಗಿನ ತಿದಿಯೊತ್ತು ನೀನೇ
ಲೋಕೈಕ ಬಿಂಕಕ್ಕೆ ಕಡಿವಾಣದಂಕುಶವು
ಚತುರಚಿತ್ತದಸುತ್ತ ದಿವ್ಯಚೇತನವು
ಸುಕುಮಾರಸಹನೆಗೆ ಚಪ್ಪರದ ಮಲ್ಲಿಗೆಯು
ಪಂಚತತ್ವದ ಸುತ್ತ ಪ್ರಭೆಯ ದಿವ್ಯಾಗ್ನಿ

"ಷಟ್ಕರ್ಮಯುಕ್ತಾ ಕುಲಧರ್ಮಪತ್ನೀ"
ನೀನಾದೆ ಈ ಆರು ಗುಣಕೊಂದೆ ನಿಕಷ
ಧರ್ಮಪತ್ನಿಯ ಪಟ್ಟ ಚೌಕಟ್ಟು ನೆಲೆಯಿತ್ತು
ಕಟ್ಟಿದರು ನಿನ್ನೊಳಗ ಅಗ್ನಿಕನ್ನೆಯನು
ಮೆಟ್ಟದೆಯೆ ಕೊಚ್ಚದೆಯೆ ನಿನ್ನ ರೊಚ್ಚಿನ ಸಿರಿಯ
ಒರೆಗಿರಿಸಿ ದಮನಿಸಿದೆ ಕುಲಾಂತಶತಕ

ಸಾಹಸದ ಗಾಥೆಯಲಿ ನಿನಗೆಲ್ಲಿ ಸಂಗಾತ
ಅಂಗಾತ ಒರಗಿದರು ತನುಜಾತರೆಲ್ಲ
ಸಹಿಸುತ್ತ ದಹಿಸುವಿಕೆ ದಹಿಸುತ್ತ ಸಹಿಸುವಿಕೆ
ಬಿರುಗಾಳಿಗೊಡ್ಡಿದ್ದೆ ಸಿರಿತುರುಬುಸೆರಗ
ಐಮನೆಯ ಥರಥರದ ನಿಯಮಪರದೆಗಳೊಳಗೆ
ಸ್ವಂತಿಕೆಯ ಸಹಿಬರೆದ ಹಿಮಾಗ್ನಿರಮಣಿ
*ಸುಪ್ತದೀಪ್ತಿ
[(೧೦-೨೧)-ಫೆಬ್ರವರಿ-೨೦೧೪]

Tuesday, 14 January 2014

ಕಿಚ್ಚು-ಸಾಗರ

ಹುಟ್ಟಿದ್ದೇ ಹೆಣ್ಣಾಗಿ, ಸೇಡಿನ ಕಣ್ಣಾಗಿ
ಮೈಯೆಲ್ಲ ಬೆಂಕಿಯುರಿ, ಅಗ್ನಿಕನ್ಯೆ;
ತಂದೆ ಪಾಲನೆಗಿಂತ ತಾಯ್ಗರುಳು ಏರದಿರೆ
ಬೆಳೆದದ್ದು ಧೀರತ್ವ ಧೀಮಂತಿಕೆ
 
ಅರಳಿದೆ ಹೆಣ್ಣಾಗಿ, ರೂಪಕ್ಕೆ ಕಣ್ಣಾಗಿ
ಸ್ವಯಂವರ ಸೊಬಗಲ್ಲಿ ಪಾರಿತೋಷ;
ಮನದೊಳಗೆ ಒಂದಾಸೆ, ತಂದೆ-ಮಗಳಿಬ್ಬರಿಗೆ
ಗೆಲಬೇಕು ಜಗದೇಕವೀರ ಪಾರ್ಥ
 
ಬಯಕೆಯೇ ಗೆದ್ದರೂ ವರಿಸಿದ್ದು ಐವರನು
ತಾನೇ ದಾಳವೋ? ಲಾಳಿ ತಾನಾದೆಯ?
ಒಬ್ಬೊಬ್ಬ ಪತಿರಾಯ ಒಂದೊಂದು ಮರ್ಮದವ
ವರುಷವೊಂದರ ಚಕ್ರನಿಯಮ ನಿನಗೆ
 
ಇಂದು ಇನಿಯನು ಒಬ್ಬ ನಾಳೆಗವ ಪರಕೀಯ
ಕಣ್ಮನವ ಹೊರಳಿಸದೆ ನಡೆಯಬೇಕು;
ಭಾವನೋ ಮೈದುನನೋ, ನಾಲ್ಕುವರ್ಷದ ದೀಕ್ಷೆ
ಸಲುಗೆಯಾಚೆಗೆ ಮಾತು ಸವೆಯಬೇಕು
 
ಸತ್ಯ-ಧರ್ಮಕ್ಕೆ ಮನಸ ಕಟ್ಟಿಕೊಟ್ಟವನೊಬ್ಬ
ಮಗದೊಬ್ಬ ಶೌರ್ಯವೇ ಮೈವೆತ್ತವ;
ಇನ್ನೊಬ್ಬ ರಸಿಕತೆಗೆ ರಾಜಮಾರ್ಗದಿ ನಡೆದ
ಯಮಳರೋ ಸೌಂದರ್ಯಮೂರ್ತರೂಪಿಗಳು
 
ಒಂದೊಂದು ವ್ಯಕ್ತಿತ್ವ ಒಂದೊಂದು ವರುಷಕ್ಕೆ
ಹೊಂದಿಕೊಳ್ಳುವ ಹೊತ್ತು ಎತ್ತಂಗಡಿ;
ಐದು ಭಾವಗಳಲ್ಲಿ ಹಂಚಿಹರಿದುದು ಪ್ರೀತಿ
ಹೊತ್ತುಹೆತ್ತಿಹ ಸಮಯ ಏಕಾಂತವೆ?
 
ಐದು ಅಂತಃಪುರದ ಅರಸಿಯಾಗಿದ್ದವಳೆ
ನಿನ್ನ ಸ್ವಂತಕ್ಕೇನು ಒದಗಿ ಬಂದಿತ್ತು?
ರಾಜಸೂಯದ ಸ್ನಾನವೇಕೆ ಮುಳುವಾಯಿತು?
ಸಾಮ್ರಾಜ್ಞಿ ಶ್ರೀಮುಡಿಗೂ ಕೈ-ನೆಟ್ಟಿತು
 
ಅಂತಿಂಥ ಪಾಡಲ್ಲ ಪಾಂಚಾಲಿ ನಿನ್ನದು
ಅದಕೇ ಜಗದಗಲ ನಿನ್ನ ಕೀರ್ತಿ;
ಅಂಥ ಬಾವುಟದಡಿಯ ನೆರಳಿನಾಸರೆ ಬೇಕು
ನಿನ್ನೈದು ಪತಿಗಳ ಒಗ್ಗಟ್ಟಿಗೆ;
 
ಹೆತ್ತ ಮಕ್ಕಳ ರಕ್ತ-ಸಿಕ್ತ ಸಿಂಹಾಸನದಿ
ಮತ್ತೆ ರಾಜ್ಯವನಾಳ್ದ ಧೀರರವರು;
ಒಮ್ಮೆಯಾದರೂ ನಿನ್ನ ಕಣ್ಣ ಸಾಗರಕಿಳಿದ
ಸಾಹಸಿಗರವರೇನು, ಹೇಳು ನೀನೆ?
 
ಹೆಣ್ಣಲ್ಲವೇ ನೀನು, ಭಾರತಿಯ ಹಣೆಗಣ್ಣು
ಕುರುಸಭೆಗೆ ಕರೆಸಿದ್ದೆ ಕೃಷ್ಣಾನುಕಂಪ;
ಇಂದು ಒಬ್ಬೊಬ್ಬಳಿಗೂ ಆತ್ಮಬಲ ಛಾತಿಕೊಡು
ದಮನಿಸಲು ಕೀಚಕ-ದುಶ್ಶಾಸನ ಪಡೆ
************
(೦೮-ಜನವರಿ-೨೦೧೪ (೨))

ಓದುಗರೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು- ಹೊಸ ಕವನದೊಸಗೆಯೊಂದಿಗೆ.

ಇದನ್ನು ಬರೆಯುವ ಮೊದಲು ಇದೇ ವಿಷಯಾಧಾರಿತ ಕವನವೊಂದನ್ನು ಬರೆದೆ. ಅದು ಈ ಕೊಂಡಿಯಲ್ಲಿದೆ. ಅದನ್ನೂ ಓದಿ, ಅಭಿಪ್ರಾಯ ತಿಳಿಸಿ.