ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 22 November 2010

ಸುಮ್ಮನೆ ನೋಡಿದಾಗ...೦೪

ಈ ಬೆಳಗು ನನಗೆ ಎಂದಿನಂತಿಲ್ಲ. ನನ್ನ ಉತ್ಸಾಹಕ್ಕೆ ಕಾರಣ ಹುಡುಕಬೇಕಿರಲಿಲ್ಲ. ಅಮ್ಮನ ವಕ್ರನೋಟ ನನ್ನನ್ನು ತಾಗಲೇ ಇಲ್ಲ. ಕಾಲೇಜಿನ ಕಡೆಗೆ ಕುಣಿಹೆಜ್ಜೆ ಹಾಕಿದೆ. ಪಾದದ ಸುತ್ತ ಇಲ್ಲದ ಗೆಜ್ಜೆಸದ್ದು ಎದೆಯಲ್ಲಿ. ಕಥೆಯ ಹಸ್ತಪ್ರತಿ ಕೈಯಲ್ಲಿ- ಸಸ್ಯಶಾಸ್ತ್ರದ ರೆಕಾರ್ಡ್ ಪುಸ್ತಕದೊಳಗೆ ಅಡಗಿದ್ದ ಹಾಳೆಗಳನ್ನು ಬೇರಾರಿಗೂ ತಿಳಿಯದಂತೆ ನೇಹಾಳ ಕೈಗೆ ಹೇಗೆ ರವಾನಿಸುವುದೆನ್ನುವ ಯೋಜನೆ ಹಾಕುವಷ್ಟರಲ್ಲಿ ಕಾಲೇಜಿನ ಮೆಟ್ಟಲೇರಿದೆ.

ಬೆಳಗಿನ ತರಗತಿಗಳಲ್ಲಿ ನನ್ನ ಗಮನವಿಲ್ಲ. ಜೀವಶಾಸ್ತ್ರದ ಅಧ್ಯಾಪಕರು ಸಮಯ ಮೀರಿ ಪಾಠ ಮಾಡುತ್ತಿದ್ದುದು ವಾಚಿನ ಮೇಲೆ ಸುಮ್ಮನೇ ಬೆರಳಾಡಿಸುತ್ತಿದ್ದ ನನ್ನ ಅರಿವಿಗೆ ಬರಲೇ ಇಲ್ಲ. ನಮ್ಮನ್ನೆಲ್ಲ ತೀಕ್ಷ್ಣವಾಗಿ ನೋಡುತ್ತಾ ಪಾಠ ಮಾಡುವ ಅವರಿಗೆ ಮಾತ್ರ ನನ್ನ ಬೆರಳುಗಳಾಟ ಕಿರಿಕಿರಿಯಾಗಿ, ‘ಹ್ಮ್, ಐ ನೋ! ಐ ನೋ ಮೈ ಟೈಮ್. ಲೆಟ್ ಮಿ ಫ಼ಿನಿಷ್ ದಿಸ್ ಕಾನ್ಸೆಪ್ಟ್ ಮೇಡಮ್!’ ಅಂದರು ಗಂಭೀರವಾಗಿಯೇ. ನನ್ನ ಅದೃಷ್ಟಕ್ಕೆ ಅವರು ಯಾರಿಗಾಗಿ ಈ ಮಾತು ಹೇಳಿದರೆನ್ನುವುದು ಯಾರಿಗೂ ಗೊತ್ತಾಗಲೇ ಇಲ್ಲ. ನನ್ನೊಳಗು ಎಚ್ಚತ್ತುಕೊಂಡಿತು, ಅಷ್ಟೇ.

ಊಟದ ಸಮಯ ಕಥೆ ಬರೆದ ವಿಷಯವನ್ನು ನೇಹಾಳಿಗೆ ಸೂಕ್ಷ್ಮವಾಗಿ ತಿಳಿಸಿದೆ. ಸ್ಫೂರ್ತಿಯಾದ ಸಂದರ್ಭ ಮಾತ್ರ ಸದ್ಯಕ್ಕೆ ನನ್ನಲ್ಲೇ ಇರಲಿ ಅಂದುಕೊಂಡೆ. ಅಪರಾಹ್ನದ ಮೊದಲ ತರಗತಿ ಇರಲಿಲ್ಲವಾದ್ದರಿಂದ ಮೈದಾನದ ಮೂಲೆಯ ಮರದ ನೆರಳಿಗೆ ಸಾಗಿದೆವು. ಕಥೆಯೊಳಗೆ ಇಳಿದುಹೋದವು ಎರಡು ಜೊತೆ ಕಣ್ಣುಗಳು. ಓದಿ ಮುಗಿಸಿದ ನೇಹಾ ಕೆಲವೊಂದು ಸಲಹೆಗಳನ್ನೂ ನೀಡಿದಳು. ಮುಖ್ಯವಾಗಿ ಇದನ್ನು ರಮ್ಯಗಾನದತ್ತ ವಾಲಿಸಬೇಕೆನ್ನುವ ಕೋರಿಕೆಯನ್ನಿತ್ತಳು. ಈಗಿರುವಂತೆ ಸರಳ ನೇರ ಅಣ್ಣ-ತಂಗಿಯ ಸುತ್ತ ಸಾಗುವ ನಿರೂಪಣೆ ನಮ್ಮ ಕಾಲೇಜ್ ವಾರ್ಷಿಕ ಸಂಚಿಕೆಯ ಓದುಗರಿಗೆ ಬೇಕಾಗಿಲ್ಲವೆಂದೂ ರೊಮ್ಯಾಂಟಿಕ್ ಕಥೆಯೇ ಈ ವಯೋಮಾನದ ಉದ್ಯಾನವೆಂದೂ ಬುದ್ಧಿ ಹೇಳಿದಳು. ನಾಜೂಕಾಗಿಯೇ ನಾನೊಬ್ಬ ಮೊದ್ದು ಎಂದಳು. ಇಬ್ಬರೂ ನಕ್ಕೂ ನಕ್ಕೂ ಕಣ್ಣಲ್ಲಿ ನೀರಿಳಿಸಿಕೊಂಡೆವು. ಸಂಜೆಯ ಕ್ಲಾಸುಗಳನ್ನು ಮುಗಿಸಿಕೊಂಡು ಮನೆಗೆ ಬರುತ್ತಾ ಮತ್ತೊಂದಷ್ಟು ಚರ್ಚೆಗಳಾದವು. ಕೊನೆಗೂ ಅವಳಿಗಾಗಿ ಈ ಕಥೆಯನ್ನು ತಿದ್ದಿ ಬರೆಯುವುದಕ್ಕೆ ಒಪ್ಪಿಕೊಂಡು ಮನೆ ಸೇರಿಕೊಂಡೆ.

ಅಮ್ಮನ ಮೂಡ್ ಮತ್ತೆ ಕೆಟ್ಟಿತ್ತು. ನನಗದರ ಬಿಸಿ ತಟ್ಟದಷ್ಟು ನನ್ನ ಹೃದಯ-ಮನಸ್ಸು ಕಥೆಯ ಹೊಸ ಹಂದರದೊಳಗೆ ಹುದುಗಿಹೋಗಿದ್ದವು.

Monday, 15 November 2010

ಸುಮ್ಮನೆ ನೋಡಿದಾಗ...೦೩

ಆಕರ್ಷಕ ಯುವಕನೊಬ್ಬ ಕುರ್ಚಿಯಲ್ಲಿ ಕೂತಿದ್ದ. ನಾನು ಒಳಗೆ ಹೆಜ್ಜೆಯಿಟ್ಟೊಡನೆಯೇ, "ಹಲೋ, ಗುಡ್ ಈವ್‍ನಿಂಗ್ ಯಂಗ್ ಲೇಡಿ" ಅಂದ. ಮಾತಿನಲ್ಲಿನ ಗಾಂಭೀರ್ಯಕ್ಕೆ ಪದಗಳ ನಾಜೂಕಿಗೆ ತಬ್ಬಿಬ್ಬಾದ ನಾನು ಅವನಿಗುತ್ತರಿಸದೆಯೇ ತಲೆ ತಗ್ಗಿಸಿಕೊಂಡು ನೇರವಾಗಿ ನನ್ನ ಕೋಣೆಗೆ ಸಾಗಿದೆ. ಪುಸ್ತಕಗಳನ್ನು ಮೇಜಿನ ಮೇಲಿಟ್ಟು ಬಚ್ಚಲುಮನೆಗೆ ಹೋಗಿ ಮುಖ-ಕೈಕಾಲು ತೊಳೆದುಕೊಂಡು ಅಡುಗೆಮನೆಗೆ ಬರುವಷ್ಟರಲ್ಲಿ ಅವನೂ ಊಟದ ಮೇಜಿನ ಮುಂದಿದ್ದ. ಅಮ್ಮ ಅಡುಗೆಕಟ್ಟೆಯ ಬದಿಯಲ್ಲಿದ್ದಳು. ಒಲೆಯಲ್ಲಿ ಸಾರು ಬಿಸಿಯಾಗುತ್ತಿತ್ತು. ಯಾರಿವನು?

"ಏನಾ, ಗೊತ್ತಾಗಲಿಲ್ವಾ?" ಅವನೇ ಕೇಳಿದ. ಇಲ್ಲವೆನ್ನುವಂತೆ ತಲೆಯಾಡಿಸಿದೆ.

ಅಮ್ಮನೇ ಹೇಳಿದಳು, "ನೀನು ಚಿಕ್ಕವಳಿದ್ದಾಗ ನಾವು ‘ಅಕಳಂಕ’ ಮನೆಯ ಬದಿಯಲ್ಲಿ ಬಾಡಿಗೆಗಿದ್ದೆವಲ್ಲ. ಆಗೆಲ್ಲ ನಿನ್ನನ್ನು ಎತ್ತಿ ಆಡಿಸಿ ಶಾಲೆಗೆ ಹೋಗುತ್ತಿದ್ದ ಆಚೆ ಮನೆಯ ಹರ್ಷ. ಈಗ ಬಾಂಬೆಯಲ್ಲಿ ಕೆಲಸದಲ್ಲಿದ್ದಾನೆ. ನಾವು ಮತ್ತೆ ಇದೇ ಊರಿಗೆ ಬಂದದ್ದು ಗೊತ್ತಾಯ್ತಂತೆ. ನಮ್ಮನ್ನು, ಅದ್ರಲ್ಲೂ ನಿನ್ನನ್ನು ನೋಡ್ಲಿಕ್ಕೇಂತಲೇ ಬಂದಿದ್ದಾನೆ. ನೀನು ಏನೂ ಮಾತಾಡದೇ ಒಳಗೆ ಓಡಿ ಬರುದು ಸರಿಯಾ? ಅತಿಥಿಗೆ ಮರ್ಯಾದೆ ತೋರಿಸ್ಲಿಕ್ಕೂ ಗೊತ್ತಿಲ್ವಾ ನಿಂಗೆ? ಅವನಿಗೆ..."

ಅಮ್ಮನ ಮಾತುಗಳು ಮುಗಿದಿರಲೇ ಇಲ್ಲ, ಹರ್ಷ ನಮ್ಮ ಬದಿಗೇ ಬಂದು ನಿಂತ. ನನ್ನ ತಲೆ ನೇವರಿಸುತ್ತ, "ನನ್ನ ಶಾಲಾ ದಿನಗಳ ಬಣ್ಣದ ಗೊಂಬೆ ಈಗ ಎಷ್ಟು ದೊಡ್ಡೋಳಾಗಿದಾಳೆ ಅಂತ ನೋಡ್ಲಿಕ್ಕೆ ಬಂದದ್ದು ಹೌದು. ಜೊತೆಗೆ ಅವಳ ನಾಚಿಗೆ, ದಾಕ್ಷಿಣ್ಯದ ರೀತಿಯೂ ನೋಡಿದ್ದಾಯ್ತು. ಚಿಕ್ಕತ್ತೆ, ಮಗಳನ್ನು ಚಂದ ಮಾಡಿ ಬೆಳ್ಸಿದ್ದೀರಿ. ಬಾಂಬೆಯ ಬಿಂದಾಸ್ ಹುಡುಗಿಯರನ್ನು ನೋಡೀ ನೋಡೀ ಬೇಜಾರಾಗಿತ್ತು. ಇವಳನ್ನು ನೋಡಿ ಕಣ್ಣು ಮನಸ್ಸು ತಂಪಾಯ್ತು. ಸುಖವಾಗಿರು ಗೊಂಬೇ..." ಹರಸುವಂತೆ ಮತ್ತೆ ತಲೆ ನೇವರಿಸಿದ.

ಹರ್ಷನ ನೆನಪೇ ಇಲ್ಲದ ನನಗೆ ಈ ನಡವಳಿಕೆ ಮತ್ತಷ್ಟು ಮುದುಡುವಂತೆ ಮಾಡಿತು. ಆದರೂ ಆತ ತಂಗಿಯಂತೆ ನನ್ನ ಆದರಿಸಿದ್ದು ಖುಷಿಯೂ ಕೊಟ್ಟಿತು. ಇಂಥ ಸುಂದರ ಸ್ಫುರದ್ರೂಪಿ ಅಣ್ಣನಿಗಾಗಿ ನಾನೆಷ್ಟು ಹಂಬಲಿಸಿಲ್ಲ? ಸಿನಿಮಾಗಳಲ್ಲಿನ ರಾಜ್‍ಕುಮಾರ್, ವಿಷ್ಣುವರ್ಧನ್ ಅವರಂತೆ ಅಣ್ಣಂದಿರು ಇರಬೇಕು ಎನ್ನುತ್ತಿದ್ದ ನನ್ನನ್ನು ನೇಹಾ ಮತ್ತು ಸುಜಾ ಛೇಡಿಸುತ್ತಿದ್ದರು. ಇದೀಗ ಸಿನೆಮಾ ಹೀರೋನಂತಿರುವ ಅಣ್ಣನೊಬ್ಬ ಬಾಂಬೆಯಿಂದ ನನಗಾಗಿ ಬಂದಿಳಿದಿದ್ದಾನೆ. ಇಂದು ಸಂತಸದಿಂದ ನಿದ್ದೆಯೇ ಬಾರದೆಂದು ಅನ್ನಿಸತೊಡಗಿತು. ನೇಹಾಳೊಂದಿಗೆ ಹೇಳಿಕೊಳ್ಳಬೇಕು, ಆದರೆ ಬೆಳಗಿನವರೆಗೆ ಕಾಯಬೇಕಲ್ಲ. ಅಥವಾ... ಇದನ್ನೊಂದು ಕಥೆಯಾಗಿಸಿದರೆ? ಹ್ಮ್! ಅದೇ ಸರಿ. ಇವತ್ತೇ ಕಥೆಯಾಗಿಸುತ್ತೇನೆ. ಹೇಗೂ ಕಾಲೇಜಿನ ಮನೆಗೆಲಸವೇನೂ ಇಲ್ಲ.

ಹರ್ಷನ ಜೊತೆಗೆ ಹರಟುತ್ತಾ ಊಟ ಮುಗಿಸಿ ಯಾವತ್ತಿನ ಹಾಗೆ ಅಡುಗೆಮನೆ ಎಲ್ಲ ಸ್ವಚ್ಛಗೊಳಿಸಿ, ಪಾತ್ರೆ ತೊಳೆದಿಟ್ಟೆ. ತನ್ನ ಮನೆಗೆ ಹೊರಟ ಹರ್ಷನನ್ನು ಗೇಟಿನತನಕ ಕಳಿಸಿಕೊಟ್ಟೆವು. ಅಮ್ಮ ಮಲಗಿದ ಮೇಲೆ ನನ್ನ ಕೋಣೆಯಲ್ಲಿ ತಡರಾತ್ರೆಯವರೆಗೂ ದೀಪವುರಿಯಿತು....