ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 30 March 2010

ಅದೃಶ್ಯ

ಕಾರ್ಗಡಲ ಅಲೆ ಹೆಪ್ಪುಗಟ್ಟಿ
ಕರಗಲಾರದೆ ಕೊರಗಿದಾಗ
ತುಳುಕಲಾರದ ಕೊಳದಲ್ಲಿ
ಸಿಡಿಲು-ಗುಡುಗು

ಕಾಣದ ಮಿಂಚಿನ ಸೆಳೆಗೊಡ್ಡಿ
ಅಂಚು ಕೊಂಚ ಹಸಿಯಾದಾಗ
ಕಟ್ಟೆಕೊನೆಯ ಏರಿಯಲ್ಲಿ
ಒಸರು-ಕೆಸರು

ಸಿಡಿಲ ಮರಿ ಹುಟ್ಟಿ ಬಂತೆಂದು
ಕಲ್ಲಣಬೆ ಆರಿಸುವಾಗ
ಬುಟ್ಟಿಯೊಳು ಮಿಡಿಹೆಡೆಯಲ್ಲಿ
ಉಸಿರು-ಹೆಸರು

ಬೆಳ್ನೊರೆಯ ಸೋಗಿನಲಿ ತೆರೆದು
ಎದೆಯ ಹೆಬ್ಬಂಡೆ ಹರಿದಾಗ
ಕಿಬ್ಬದಿಯ ಜೋಳಿಗೆಯಲ್ಲಿ
ಹಸಿವು-ಅಳಲು
(೨೨-ಮಾರ್ಚ್-೨೦೦೯)
(ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಆಯೋಜಿಸಿದ್ದ "ಯುಗಾದಿ ಕವನ ಸ್ಪರ್ಧೆ"ಯಲ್ಲಿ ದ್ವಿತೀಯ ಬಹುಮಾನಕ್ಕೆ ಪಾತ್ರವಾದ ಕವನ. ಇದರ ಅರ್ಥ, ಸಂದೇಶ ಏನಿರಬಹುದೆಂದು ನಿರ್ಣಾಯಕರು ಸುಮಾರು ಮುಕ್ಕಾಲು ಗಂಟೆ ಕಾಲ ಚರ್ಚಿಸಿದರಂತೆ. ನಿಮಗೇನನ್ನಿಸುತ್ತದೆ? ತಿಳಿಸುವಿರಲ್ಲ.)

Wednesday, 24 March 2010

ಅವಳಳಲು

ರಾಮನವಮಿಯ ಹಿಂದೆ ನನ್ನ ರಾಮನ ಮುಂದೆ
ಸೆರಗೊಡ್ಡಿ ಬೇಡಿದ್ದೆ ಮಾಣು ಎಂದು
ಆಗದೆಂದನು ರಾಮ, ಸತ್ಯನಿಷ್ಠನು ಸೋಮ
ಪ್ರಜೆಗಳಾಣತಿಯೊಂದೆ ಧಾರ್ಯವೆಂದು

"ರಘುವಂಶ ಕುಲಜಾತ, ಜನಕನಿಗೆ ಜಾಮಾತ
ಆಗಿಹುದು ಧರ್ಮಪಥ ನನ್ನ ಪಾತ್ರ
ಎಳೆಯ ಬಾಲೆಯರಿರಲಿ ಮುದಿಯ ಮಾನಸರಿರಲಿ
ನನ್ನ ಛತ್ರದ ನೆರಳು ಏಕಮಾತ್ರ"

ಹೀಗೆಂದನೇ ರಾಮ, ನನ್ನ ಉಸಿರಿನ ಧಾಮ
ಅವನ ನೆರಳಲ್ಲಿ ನಾ ಸುಖಿಯೆಂದೆನೆ
ಮೂವರತ್ತೆಯರೊಡನೆ ಅರಮನೆಯ ಅಂಗಳದಿ
ಊರ್ಮಿಳೆಯ ನಗುವಿನಲಿ ನಗುವಾದೆನೆ

ಧರ್ಮರಾಜ್ಯದ ಕಾರ್ಯ ಜಗವೆಲ್ಲ ಮೊಳಗಿರಲು
ರಾಮನಂಕಿತ ನಿತ್ಯ ಬೆಳಗುತಿರಲು
ಬಂತದೋ ಬರಸಿಡಿಲು ಮುಂಗಾರ ಕರಿ ಮುಗಿಲು
ರಾಮನಂಘ್ರಿಯ ಅಶ್ರು ತೋಯಿಸುವೊಲು

ಎಳೆಯ ಬಾಲೆಯು ಅಲ್ಲ, ಮುದಿಯು ನಾ ಮೊದಲಲ್ಲ
ಕ್ಷುದ್ರ ಕಣ್ಣಿನ ಪಿಸುರು ಪೀತ ನೋಟ
ಬಳಸಿ ಮಾತೇ ಇಲ್ಲ, ಬಳಲದಿರು ಎನಲಿಲ್ಲ
ಕಳುಹಿದನೆ ವನಕೆನ್ನ, ಮೃಗಕೆ ಊಟ

ರಾಮನವಮಿಯ ನೆಪದಿ ಋಷಿಪುಂಗವನ ಮುಂದೆ
ಸೆರಗೊಡ್ಡಿ ಬೇಡಿದೆನು ಮಾಣಿರೆಂದು
ಇನ್ನು ಇಂತಹ ಗಾಥೆ ಬರೆಯಬೇಡಿರಿ ತಂದೆ
ತಾಳೆಗರಿ ಕಂಟಗಳ ತೊರೆಯಿರೆಂದು

(ಮಾಣ್, ಮಾಣು= ತಡೆ, ನಿಲ್ಲು, ನಿಲ್ಲಿಸು)
(ಕಂಟ= ತಾಳೆಗರಿಗಳ ಮೇಲೆ ಬರೆಯಲು ಬಳಸುವ ಉಕ್ಕಿನ ಲೇಖನಿ)
(`ರಾಮನವಮಿ'ಯನ್ನು ಶ್ರೀರಾಮ ಪಟ್ಟಾಭಿಷೇಕದ ದಿನವೆಂಬ ನೆಲೆಯಲ್ಲಿ ಪರಿಗಣಿಸಲಾಗಿದೆ, ಜನ್ಮದಿನೋತ್ಸವ ಎಂದಲ್ಲ)
(೦೫-ಎಪ್ರಿಲ್-೨೦೦೯)