ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 24 March 2010

ಅವಳಳಲು

ರಾಮನವಮಿಯ ಹಿಂದೆ ನನ್ನ ರಾಮನ ಮುಂದೆ
ಸೆರಗೊಡ್ಡಿ ಬೇಡಿದ್ದೆ ಮಾಣು ಎಂದು
ಆಗದೆಂದನು ರಾಮ, ಸತ್ಯನಿಷ್ಠನು ಸೋಮ
ಪ್ರಜೆಗಳಾಣತಿಯೊಂದೆ ಧಾರ್ಯವೆಂದು

"ರಘುವಂಶ ಕುಲಜಾತ, ಜನಕನಿಗೆ ಜಾಮಾತ
ಆಗಿಹುದು ಧರ್ಮಪಥ ನನ್ನ ಪಾತ್ರ
ಎಳೆಯ ಬಾಲೆಯರಿರಲಿ ಮುದಿಯ ಮಾನಸರಿರಲಿ
ನನ್ನ ಛತ್ರದ ನೆರಳು ಏಕಮಾತ್ರ"

ಹೀಗೆಂದನೇ ರಾಮ, ನನ್ನ ಉಸಿರಿನ ಧಾಮ
ಅವನ ನೆರಳಲ್ಲಿ ನಾ ಸುಖಿಯೆಂದೆನೆ
ಮೂವರತ್ತೆಯರೊಡನೆ ಅರಮನೆಯ ಅಂಗಳದಿ
ಊರ್ಮಿಳೆಯ ನಗುವಿನಲಿ ನಗುವಾದೆನೆ

ಧರ್ಮರಾಜ್ಯದ ಕಾರ್ಯ ಜಗವೆಲ್ಲ ಮೊಳಗಿರಲು
ರಾಮನಂಕಿತ ನಿತ್ಯ ಬೆಳಗುತಿರಲು
ಬಂತದೋ ಬರಸಿಡಿಲು ಮುಂಗಾರ ಕರಿ ಮುಗಿಲು
ರಾಮನಂಘ್ರಿಯ ಅಶ್ರು ತೋಯಿಸುವೊಲು

ಎಳೆಯ ಬಾಲೆಯು ಅಲ್ಲ, ಮುದಿಯು ನಾ ಮೊದಲಲ್ಲ
ಕ್ಷುದ್ರ ಕಣ್ಣಿನ ಪಿಸುರು ಪೀತ ನೋಟ
ಬಳಸಿ ಮಾತೇ ಇಲ್ಲ, ಬಳಲದಿರು ಎನಲಿಲ್ಲ
ಕಳುಹಿದನೆ ವನಕೆನ್ನ, ಮೃಗಕೆ ಊಟ

ರಾಮನವಮಿಯ ನೆಪದಿ ಋಷಿಪುಂಗವನ ಮುಂದೆ
ಸೆರಗೊಡ್ಡಿ ಬೇಡಿದೆನು ಮಾಣಿರೆಂದು
ಇನ್ನು ಇಂತಹ ಗಾಥೆ ಬರೆಯಬೇಡಿರಿ ತಂದೆ
ತಾಳೆಗರಿ ಕಂಟಗಳ ತೊರೆಯಿರೆಂದು

(ಮಾಣ್, ಮಾಣು= ತಡೆ, ನಿಲ್ಲು, ನಿಲ್ಲಿಸು)
(ಕಂಟ= ತಾಳೆಗರಿಗಳ ಮೇಲೆ ಬರೆಯಲು ಬಳಸುವ ಉಕ್ಕಿನ ಲೇಖನಿ)
(`ರಾಮನವಮಿ'ಯನ್ನು ಶ್ರೀರಾಮ ಪಟ್ಟಾಭಿಷೇಕದ ದಿನವೆಂಬ ನೆಲೆಯಲ್ಲಿ ಪರಿಗಣಿಸಲಾಗಿದೆ, ಜನ್ಮದಿನೋತ್ಸವ ಎಂದಲ್ಲ)
(೦೫-ಎಪ್ರಿಲ್-೨೦೦೯)

Tuesday, 16 March 2010

ಲಭ್ಯ

ಹೇಳಬೇಕೆಂದುಕೊಂಡದ್ದು ಒಂದು
ಬಿಸಿಯುಸಿರಿನ ಒತ್ತಡಕ್ಕೆ ಪಕ್ಕಾಗಿ
ಮುತ್ತು ಮುತ್ತಾಗಿ ಚಿಮ್ಮಿ ಉದುರಿ
ತೋಟದೆಡೆಯಲ್ಲಿ ಬಿತ್ತಿದ್ದು ಮೊಳಕೆಯೊಡೆದು
ಅಕ್ಷರಕ್ಷರ ಪದಪದ ಸಾಲುಗಳೆಲ್ಲ
ಒಂದಕ್ಕೊಂದು ಬೆಸೆದು ಗೋಜಲು ಗೋಜಲು
ಬಿಸಿಲಿಗೆ ಹಚ್ಚನೆ ಹರಡಿ ಬೆಳೆದು
ಹಿತ್ತಿಲ ತುಂಬೆಲ್ಲ ಕಣ್ಣಿಗೆ ತಂಪು
ಕಾಲ್ತೊಡಕುವ ಕುಂಬಳ ಬಳ್ಳಿ
ದಟ್ಟ ಬಣ್ಣ ನಳನಳಿಸುವ ದೊರಗು
ಎಲೆಗಳ ನಡುವೆ ಹೂವಾಗಿದ್ದೂ ಕಾಣದೆ
ಕಿರುಕಾಯಾಗಿ ಎಳಸು ಮಾಗಿ
ಪಕ್ವವಾದಾಗ ಹಸುರಿನ ಮರೆಯಲ್ಲಿ
ಬೂದುಬಿಳುಪೋ ಚೆಂದಗೆಂಪೋ, ಅಂತೂ
ಬಳ್ಳಿಗೆ ನಿಸ್ವಾರ್ಥ ಸಫಲ ಧರ್ಮ
ಮಾಲಿಗೆ ಅಧಿಕಾರವಿಲ್ಲದ ಕರ್ಮ

(೨೪-ಜೂನ್-೨೦೦೯)

(09-08-09ರಂದು ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ. ಸಂಪಾದಕರಿಗೆ ವಂದನೆಗಳೊಂದಿಗೆ ಧನ್ಯವಾದಗಳು. ಡಾ. ವಸಂತಕುಮಾರ್ ಪೆರ್ಲ ಅವರು ಸಂಪಾದಿಸುತ್ತಿರುವ "ಕಾವ್ಯ ೨೦೦೯"ರಲ್ಲಿಯೂ ಸೇರ್ಪಡೆಯಾಗುತ್ತಿದೆ; ಅವರಿಗೂ ಸಸ್ನೇಹ ನಮನಗಳು.)