ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday, 17 October 2009

ಬೆಳಗಿ ಬರಲಿ

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.
ಹರಕೆ-ಹಾರೈಕೆಗಳು ನಮ್ಮೆಲ್ಲರೊಡನೆ ಎಂದೂ ಸಾಗಿ ಬರಲಿ
ಸುಖ, ಸಂತಸ, ನೆಮ್ಮದಿ, ಶಾಂತಿಗಳ ಎಂದೂ ಜೊತೆಗೆ ತರಲಿ.


ಸುತ್ತೆಲ್ಲ ಹಣಕಿಹರು ಆ ಪುಟ್ಟ ಹಣತೆಗಳು -
ಮತ್ತೊಮ್ಮೆ ದೀವಳಿಗೆ ನೆಪವ ಮಾಡಿ;
ಅತ್ತಿತ್ತ ಆಡಿಹರು ಬೆಳಕಿನಾ ಮೂರ್ತಿಗಳು -
‘ಕತ್ತಲೆಗೆ ಬೆದರದಿರಿ’, ಎಂದು ಸಾರಿ.

ತೈಲ ಸಾರವ ಹೀರಿ, ಬತ್ತಿ ಭಾವವ ಮೀರಿ -
ಮೃತ್ತಿಕೆಯ ಮರ್ತ್ಯತನ ದಾಟಿ ಏರಿ,
ನೆಲ-ಜಲದ ಒಲವಿಂದ ಬಲಗೊಂಡ ರೂವಾರಿ -
ಕತ್ತಲೆಯ ನುಂಗಿ, ತೋರುವರು ದಾರಿ.

ಮಣ್ಣಿನಲಿ ಕಂಡವರು, ಮಣ್ಣನ್ನೆ ಉಣುವವರು -
ಸಣ್ಣ ಕುಡಿಯಿಂದಲೇ ಬೆಳೆಯುವವರು,
ಬಣ್ಣಕ್ಕೆ ಬೇಕವರು, ಕಣ್ಣಿಗೆ ಕಾರಣರು -
ತಣ್ಣಗಿನ ಕತ್ತಲಲು ಕರಗದವರು.

ಮರುಕಳಿಸಿ ಬರುವ ನಗೆ ಮರುಅಲೆಯ ತರುವಂತೆ -
ತರಲಿವರು ನಮಗೆಲ್ಲ ಮರಳಿ ಹರುಷ,
ಗುರುತರದ ಹೊಣೆಯನ್ನೆ ಹೊತ್ತಿರುವ ತಮಸಾರಿ -
ಇರಲವರು ನಮ್ಮೊಳಗೆ ಬೆಳಗಿ ಮನಸ.
(೧೨-ನವೆಂಬರ್-೨೦೦೧)

Thursday, 15 October 2009

ದೀಪಗಳ ನೆನಪುಗಳು

ಜಗಲಿಯುದ್ದ ಸಾಲಿನಲ್ಲಿ ಹಣತೆಯಿರಿಸಿ
ತೈಲವೆರೆದು, ದೀಪವುರಿಸಿ
ಸಿಡಿಮದ್ದು ಸಿಡಿಸಿದ್ದು, ಕಿಲಕಿಲನೆ ನಕ್ಕಿದ್ದು
ತಮ್ಮ-ತಂಗಿಯರ ಕೂಡಿ
ಗೂಡುದೀಪ ಏರಿಸಿದ್ದು
ಹೂಗಳಾಯ್ದು ಮಾಲೆ ನೇಯ್ದು
ಅಪ್ಪನ ಗಡ್ಡದ ಜಡೆಯೊಳಿರಿಸಿ
ಅಮ್ಮನ ಉದ್ದದ ಮುಡಿಯೊಳಿರಿಸಿ
ತಂಗಿಯ ಮೋಟು ಜುಟ್ಟಿಗಿಳಿಸಿ ನಲಿದದ್ದು-
ಇಂದು ಬರೇ ನೆನಪು;
ಬಾಳಿನಲ್ಲಿ ಸವಿಯ ತರಲು
ಕಚಗುಳಿಯಿಡಲು ಸಿಹಿ ನೆನಪು.

ಹಾರಿ ಬಂದ ಯಂತ್ರ ಹಕ್ಕಿ
ಸಾವಿರಾರು ಜೀವ ಕುಕ್ಕಿ
ಭಸ್ಮವಾದ ಕನಸ ನೆಕ್ಕಿ
ನಗೆಯ ಬುಗ್ಗೆ ಆವಿ ಮಾಡಿ ತೂರಿಸಿದ್ದು
ರಣಭೇರಿ ಬಾರಿಸಿದ್ದು
ಜಗದ ಮನವ ಕೆರಳಿಸಿದ್ದು
ತಣ್ಣಗೆ ಮರಳಲ್ಲಿ ಹುದುಗಿಸಿದ್ದು-
ಇತ್ತೀಚಿನ ನೆನಪು;
ಬಾಳಿನಲ್ಲಿ ವಾಸ್ತವತೆಯ
ಬಿಂಬವಿರಲು ಕಹಿ ನೆನಪು.
(೦೫-ನವೆಂಬರ್-೨೦೦೨)