ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 5 March 2009

ಅಡಕತ್ತರಿ

ಹೌದು! ಇದೊಂದು ಅಡಕತ್ತರಿ-
ಇಕ್ಕಳದಂತೆ ಅಡಕೆಯನ್ನು ಇಬ್ಬದಿಯಿಂದ
ನುರಿಯುತ್ತದೆ ಬಲವಾಗಿ ಪುಡಿಯಾಗುವವರೆಗೂ...
ನಡುವಿರುವ ಅಡಕೆಗೋ ಇಬ್ಬಂದಿ-
ಅಲ್ಲಿರಲಾಗದೆ ಹೊರಬರಲೂ ಆಗದೆ
ನುಸುಳಾಡುತ್ತದೆ, ಬಲಹೀನವಾಗಿ ಪುಡಿಯಾಗುವವರೆಗೂ...

ತನ್ನತನದ ಛಾಪು ಉಳಿಸಿಕೊಂಡು
ಹೊಸದೊಂದು ಅಡಕೆ ಮರವಾಗುವ
ಕನಸುಗಳನ್ನು ಕಣ್ತುಂಬಿ ಬೆಳೆದ ನೆನಪುಗಳೊಂದಿಗೆ
ಹೊಸತನದ ಒತ್ತಡಗಳಿಗೆ ಸಿಲುಕಿ
ಹೊಸ ರೂಪ, ಬಣ್ಣ, ಭಾವಗಳಲ್ಲಿ
ಒಂದಾಗಿ ಬೆರೆತು ಲೀನವಾಗುವ ನನಸುಗಳೊಂದಿಗೆ

ಬೆಳೆದ ಆ ನೆಲ, ಬಲಿತ ಮೇಲೆ
ನೆಲೆಸಿದ ಈ ನೆಲೆಗಳ ನಡುವೆ
ಸಿಲುಕಿದ ಅಡಕೆಯಾಗುತ್ತಿದೆ ಈ ಮನಸ್ಸೂ ಪ್ರತಿದಿನ
ಮಕ್ಕಳೂ ತಮ್ಮಂತಾಗಬೇಕೆಂಬ
ಹಂಬಲ ತುಂಬಿದ ಕನಸುಗಣ್ಣುಗಳು
ಛಲ ಕಳೆದುಕೊಳ್ಳುತ್ತಾ ಕಾಂತಿಹೀನವಾಗುತ್ತವೆ ದಿನಾ ದಿನಾ

ಎಲ್ಲವನ್ನೂ ತನ್ನಲ್ಲಿ ಕರಗಿಸಿಕೊಳ್ಳುವ
'ಮೆಲ್ಟಿಂಗ್ ಪಾಟ್ ಕಲ್ಚರ್'ನಲ್ಲಿ
ವೇಗವಾಗಿ ಕರಗಿ ಒಂದಾಗುತ್ತಿವೆ ಎಳಸು ಕುಡಿಗಳು
ಗುರು-ಹಿರಿಯರಿಗೆ ಗೌರವ
ದೇವ-ದೇವತೆಗೆ ಭಕ್ತಿ ಭಾವ
ಯಾವುದನ್ನೂ ಅರಿಯದಾಗಿವೆ ಎಳೆ ಮನಗಳು

ಆ ಮನಗಳನ್ನೆಲ್ಲಿಗೆಳೆದಾಡಲಿ?
ಒಂದೊಂದು ಚೈತ್ರಕ್ಕೂ ಒಂದಾಳು ಬೇರು
ಬಲಿತ ಸಸಿ ಕಸಿಕಟ್ಟಲಾದೀತೆ ಬೇರೆ ನೆಲದೊಳಗೆ?
ಬೇರು ಬಲಿಯುವ ಮುನ್ನ ಇನ್ನೂ-
ಸಮಯವಿದೆ ಎಂದುಕೊಂಡು
ಏಕಾಗ್ರಚಿತ್ತವಿತ್ತು ಆ ಲಕ್ಷ್ಮೀಕಟಾಕ್ಷದೆಡೆಗೆ

ರೆಕ್ಕೆ ಬೆಳೆದ ಮರಿಗಳೀಗ
ಗೂಡು ಬಿಟ್ಟು ಹಾರಿದಾಗ
ಖಾಲಿಗೂಡಿಗೆ ಸಂಜೆ ಮರಳುವೆದೆಯೂ ಖಾಲಿ
ಆ ಲಕ್ಷ್ಮಿಯು ಇದ್ದರೇನಂತೀಗ
ಈ ಹಳೆಯ ಬೇರುಗಳಲ್ಲಿಲ್ಲ ಶಕ್ತಿ
ಹಿಂದುರುಗಲಾಗದ ದಾರಿಯಲ್ಲಿ ನಡಿಗೆ ಹೊಡೆದಿದೆ ಜೋಲಿ

ಮರಳಿ ಮಣ್ಣಿಗೆ ಮರಳುವಾಸೆ
ಕೆರಳಿ ಮರಳುತ್ತಿದೆ ತೆರೆಗಳಂತೆ
ತೋಟವೇ ಇಲ್ಲದ ನೆಲದಲ್ಲಿ ನೆಲೆಯೆಂಬುದೆಲ್ಲಿ?
ಬೆಳೆದ ಮಣ್ಣಿನ ಸೆಳೆತವೊಂದು-
ಕರುಳ ಬಳ್ಳಿಯ ನಂಟು ಒಂದು-
ಒತ್ತಡಗಳೆಡೆಯ ಮನಸು ಅಡಕೆಯಿಲ್ಲಿ!

(೦೫-ಮಾರ್ಚ್-೨೦೦೦)

Wednesday, 25 February 2009

ಜಂಟಿ ಪಯಣ

ಅಂದು ನೀ ಬಂದಾಗ ಮಂದಿರದ ಹೊಸಿಲಲ್ಲಿ
ಮಂದಿ ನಿನ್ನನು ತಡೆದು ನಿಂದದ್ದು ನೆನಪಿದೆಯ?

'ಕಂದ'ನೆಂದೆನ್ನಮ್ಮ ಬಳಿಬಂದು ಕುಳಿತಾಗ
ನೀನು ಮೊಗ ತಿರುವಿದ್ದು ನಕ್ಕಿದ್ದು ನೆನಪಿದೆಯ?

ಚಂದ್ರ ಹಾಸಿದ ರಾತ್ರಿ ಮತ್ತಿನಲಿ ಈ ಧಾತ್ರಿ
ನನ್ನೊಳಗ ಕವಿಯೆದ್ದು ಹಾಡಿದ್ದು ನೆನಪಿದೆಯ?

ಹಿಂಜಿದರಳೆಯ ಕಾಳರಾತ್ರೆಯೊಳಗದ್ದಿಟ್ಟ
ಮಾಟ ಮುಂಗುರಳಲ್ಲಿ ಹೊಸೆದುಸಿರ ನೆನಪಿದೆಯ?

ಅರುಣ ಕಿರಣವ ಕದ್ದ ಹೊಂಗೆನ್ನೆ ಹಸೆಯಲ್ಲಿ
ನಿನ್ನ ದಾಸ್ಯಕೆ ಬಿದ್ದ ಕನಸುಗಳ ನೆನಪಿದೆಯ?

ಹನಿಹನಿದು ಸುಧೆಯಾಗಿ ಹರಿವ ಹೊಳೆ ಪ್ರೀತಿಯಲಿ
ಬಂಡೆ-ಸುಳಿಗಳ ಸೆಳೆತ ಕಾಡಿದ್ದು ನೆನಪಿದೆಯ?

ಪಲ್ಲವಿಸಿದೆಲ್ಲ ನಗು ಅಲೆಯಲೆಯ ಸೆಲೆಯಾಗಿ
ಮನದೊಳಗೆ ಮರುಕಳಿಸಿ ಸೇರಿದ್ದು ನೆನಪಿದೆಯ?

ಸವೆದ ಹಾದಿಯ ನಡುವೆ ಕಲ್ಲುಗಳು, ಮುಳ್ಳುಗಳು,
ಕೈಹಿಡಿದು ಜತೆಯಾಗಿ ನಡೆದದ್ದು ನೆನಪಿದೆಯ?

ಒಲುಮೆಯಂಗಳದಲ್ಲಿ ವಾತ್ಸಲ್ಯ ಮಮತೆಗಳ
ಬಳ್ಳಿ-ಗಿಡ-ಮರಗಳನು ಬೆಳೆಸಿದ್ದು ನೆನಪಿದೆಯ?

ಕಾಲನಾಲಗೆಯಲ್ಲಿ ರಸಗ್ರಂಥಿ ನಾವಾಗಿ
ಜೀವದ್ರವದೆಲ್ಲ ಸವಿ ಹೀರಿದ್ದು ನೆನಪಿದೆಯ?



ಬಟ್ಟೆ ಬದಲಿಸುವಂತೆ ಬಂಧನವ ಕಿತ್ತೊಗೆದು,
ಭಾವಗಳ ಬಿಟ್ಟೆದ್ದೆ; ಬದುಕಿದನು ನೆನೆಸಿದೆಯ?

ಇಂದು ನೀ ನಿಂದಿರುವೆ ಮಂದಿರದ ಹೊಸಿಲಲ್ಲಿ
'ಹೋಗಿ ಬರುವೆನು' ಎಂದೆ; ಚೇತನವ ಬಯಸಿದೆಯ?
(೦೩-ಡಿಸೆಂಬರ್-೨೦೦೨)