ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 15 October 2009

ದೀಪಗಳ ನೆನಪುಗಳು

ಜಗಲಿಯುದ್ದ ಸಾಲಿನಲ್ಲಿ ಹಣತೆಯಿರಿಸಿ
ತೈಲವೆರೆದು, ದೀಪವುರಿಸಿ
ಸಿಡಿಮದ್ದು ಸಿಡಿಸಿದ್ದು, ಕಿಲಕಿಲನೆ ನಕ್ಕಿದ್ದು
ತಮ್ಮ-ತಂಗಿಯರ ಕೂಡಿ
ಗೂಡುದೀಪ ಏರಿಸಿದ್ದು
ಹೂಗಳಾಯ್ದು ಮಾಲೆ ನೇಯ್ದು
ಅಪ್ಪನ ಗಡ್ಡದ ಜಡೆಯೊಳಿರಿಸಿ
ಅಮ್ಮನ ಉದ್ದದ ಮುಡಿಯೊಳಿರಿಸಿ
ತಂಗಿಯ ಮೋಟು ಜುಟ್ಟಿಗಿಳಿಸಿ ನಲಿದದ್ದು-
ಇಂದು ಬರೇ ನೆನಪು;
ಬಾಳಿನಲ್ಲಿ ಸವಿಯ ತರಲು
ಕಚಗುಳಿಯಿಡಲು ಸಿಹಿ ನೆನಪು.

ಹಾರಿ ಬಂದ ಯಂತ್ರ ಹಕ್ಕಿ
ಸಾವಿರಾರು ಜೀವ ಕುಕ್ಕಿ
ಭಸ್ಮವಾದ ಕನಸ ನೆಕ್ಕಿ
ನಗೆಯ ಬುಗ್ಗೆ ಆವಿ ಮಾಡಿ ತೂರಿಸಿದ್ದು
ರಣಭೇರಿ ಬಾರಿಸಿದ್ದು
ಜಗದ ಮನವ ಕೆರಳಿಸಿದ್ದು
ತಣ್ಣಗೆ ಮರಳಲ್ಲಿ ಹುದುಗಿಸಿದ್ದು-
ಇತ್ತೀಚಿನ ನೆನಪು;
ಬಾಳಿನಲ್ಲಿ ವಾಸ್ತವತೆಯ
ಬಿಂಬವಿರಲು ಕಹಿ ನೆನಪು.
(೦೫-ನವೆಂಬರ್-೨೦೦೨)

Thursday, 8 October 2009

ಸ್ಫೂರ್ತಿ ಸೆಲೆ

ಬೆಳಕಾಗಿ ಬಾರಾ..... ಚೆನ್ನೊಲವೆ-
ಹಸುರಾಗಿ ಬಾರಾ!
ಎಳೆ ಎಳೆಯ ಹೀರುತ್ತ,
ಹೊಳೆದರಳಿ ತೂಗುತ್ತ,
ಇಳೆಗೊಂದು ನೆರಳಾಗಿ ತಳಿರಾಗುವೆ;
ಕಳೆದೆಲ್ಲ ನಿನ್ನೆಗಳ,
ಬೆಳೆದ ಹೊಂಗನಸುಗಳ,
ಮಳೆಬಿಲ್ಲ ಮಾಲೆಯನು ನಾ ತೊಡಿಸುವೆ.


ಎಲರಾಗಿ ಬಾರಾ..... ಚೇತನವೆ-
ಉಸಿರಾಗಿ ಬಾರಾ!
ಎಲೆ ಎಲೆಯ ತೀಡುತ್ತ,
ಮಲರಮದ ತೂರುತ್ತ,
ಕಲರವದ ನೆಲೆಯಾಗಿ ಹಾರಾಡುವೆ;
ಹೊಲದ ತೆನೆ ಹೊನಲುಗಳ,
ಮಲೆಯಿಳಿವ ಮೋಡಗಳ,
ಅಲೆಯಲೆಯ ಚೆಲುವನ್ನು ನಾ ತೋರುವೆ.


ಹನಿಯಾಗಿ ಬಾರಾ..... ಸಂತಸವೆ-
ಕಸುವಾಗಿ ಬಾರಾ!
ಬನ ತಣಿಸಿ ಬಾಗುತ್ತ,
ಮನ ಕುಣಿಸಿ ಹಾರುತ್ತ,
ನಿನದಿಸುವ ನಲಿವಾಗಿ ತುಳುಕಾಡುವೆ;
ಅನುಗಾಲ ಒಲುಮೆಗಳ,
ಜಿನುಗುವತಿ ಚಿಲುಮೆಗಳ,
ಇನಿದೊರೆಗೆ ಸೆಲೆಯಾಗಿ ನಾ ಸೇರುವೆ.
(೧೨-ಆಗಸ್ಟ್-೨೦೦೪ ; ೧೩-ಅಕ್ಟೋಬರ್-೨೦೦೪)