ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday, 29 August 2009

ಮರೆಯ ಮನ

ಕಣ್ಣಲ್ಲೊಂದು ಹನಿ, ಎದೆಯಲ್ಲೊಂದು ಮೊನೆ,
ಮೊಗದಲ್ಲಿ ಬಿರಿದರಳು ದುಂಡು ಮಲ್ಲಿಗೆ,
ಮನಸೇಕೊ ಕಡು-ಕಡು ಕೆಂಡ ಸಂಪಿಗೆ.

ಕಣ್ವರಾನಂದಕ್ಕೆ ನೀರಿನುಂಗುರದುರುಳು,
ಸಾವಿತ್ರಿಗಿತ್ತಲ್ಲಿ ಸಾವಿನರಮನೆ,
ಊರ್ಮಿಳೆಯ ತಾಪಕ್ಕೆ ಮೂರು ಸೆರೆಮನೆ.

ಜಾನಕಿಯ ವನವಾಸ ಕರ್ತವ್ಯದನಾಯಾಸ,
ಮತ್ತಶೋಕ ವನದಲ್ಲಿ ಶೋಕಮನ,
ಪಾಂಚಾಲಿಯಜ್ಞಾತ ರಕ್ತ-ಸಿಂಚನ.

ಅಕ್ಕನುಸಿರಿಗೆ ಉಸಿರು ಕೊಟ್ಟ ದೇವಗೆ ಹೆಸರು,
ಚೆನ್ನಮ್ಮನಲಿ ತುಂಬು ಸ್ಥೈರ್ಯದಾ ಸೆಲೆ,
ಬೇಗೆಯೊಳಗೊಲುಮೆಯೇ ನೆಮ್ಮದಿಯ ನೆಲೆ.

ಮರೆಯಲಾರದ ಮನಕೆ ಮರೆಯಬಾರದ ಕನಸು-
ಸುಪ್ತ-ಜಾಗೃತಿಯೊಳಗೆ ಮನಸು ಕೂಸು.
(೧೧-ಫ಼ೆಬ್ರವರಿ-೨೦೦೪)

Monday, 24 August 2009

ಲಂಕೇಶ್ವರ

ಮರಿಕಪಿಯ ತೊಟ್ಟಿಲಿಗೆ ಕಟ್ಟಿಸಿಕೊಂಡು
ಕೈ-ಕಾಲಾಡಿಸಿ ಕೂಸನಾಡಿಸಿದ;
ಮಹಾಬಲಿಯ ಬಲವರಿಯಲು ಹೋಗಿ
ಸೆರೆಯಲಿ ಕನ್ನೆಯರ ಜೊತೆಗಾಡಿದ;
ದೇವೇಂದ್ರನ ಕೆಣಕಿ, ಗೋಣು ಕೆಳಹಾಕಿ
ಮಗನಿಂದ ಮನೆಗೆ ಹಿಂದಿರುಗಿದ;
ದ್ವಿದಶ ಭುಜಶಾಲಿ ಸಹಸ್ರ ಭುಜನನು ಹುಡುಕಿ
ಕೆಣಕಿ, ಕಾದಿ, ಮಣ್ಣು ಮೆತ್ತಿಸಿಕೊಂಡ;
ಅಸಮಬಲ ಸಾಹಸಿ ದಶಕಂಠ
ಅಜ್ಜನ ಕರುಣೆಯಿಂದ ಸ್ನೇಹವುಂಡ.

ಅಷ್ಟಾದರೂ ಒಂದೇ ಒಂದು ತಲೆಯೊಳಗೂ
ಬುದ್ಧಿ ಬಲಿಯದೆ, ಅರಿವು ಮೂಡದೆ,
ಕೆಂಡವ ಕೆದಕಿ ಸೆರಗಿನಲಿಟ್ಟುಕೊಂಡ,
ತನ್ನ ವಂಶವ ತಾನೇ ಸುಟ್ಟುಕೊಂಡ.
(೦೭-ಅಕ್ಟೋಬರ್-೨೦೦೬)