ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 15 February 2009

ಜೋಡಿ ಗೀತೆಗಳಲ್ಲಿನ್ನೊಂದು- ಉಕ್ಕಿದ ಒಲವಿಗೆ...


ಅಕ್ಕರೆ ಹರಿದಾಗ ಉಕ್ಕಿದ ಒಲವೀಗೆ
ಸಕ್ಕರೆ ಹಾಲು ಸುರಿದ್ಹಾಂಗೆ- ನನರಾಣಿ-
ಕಕ್ಕುಲತೆಯಿಂದ ನನ ಬಳಸೆ

ಬಾರೆಲೆ ಸಿಂಗಾರಿ ಸಿಟ್ಟು ಸೆಡವನು ಬಿಟ್ಟು
ಕೂರಿಲ್ಲಿ ನೀನೆನ್ನ ಬಗಲಲ್ಲಿ- ನನರಾಣಿ-
ತೋರೆಲೆ ಪ್ರೀತಿ ಮೊಗದಲ್ಲಿ

ಒಮ್ಮೊಮ್ಮೆ ಬಡವಾಗಿ ಚಿಂತೇಲಿ ಕರಗೋಳೆ
ಬಿಮ್ಮನೆ ಮುನಿಸ ಬೀರೋಳೆ- ನನರಾಣಿ-
ಹೂಮನಸಲೊಮ್ಮೆ ನಗಬಾರೆ

ಮುಂಗಾರು ಮಳೆಯಾಗೆ ತೊಪ್ಪನೆ ತೋಯ್ದೋಳೆ
ಹಿಂಗಾssಡಿ ಹಂಗಾssಡಿ ಬಳುಕೋಳೆ- ನನರಾಣಿ-
ಜಂಗಮಳ್ಹಾಂಗೆ ತಿರುಗೋಳೆ

ತಬ್ಬುವೆನೆಂದರೆ ಮಿಸುಕಾಡಿ ಕೊಸರಾಡಿ
ಅಬ್ಬಿಗೆ ಹಾರಿ ಜಾರೋಳೆ- ನನರಾಣಿ-
ಮಬ್ಬಿನ ಸೆರಗ ಬೀಸೋಳೆ

ಕಿಲಕಿಲ ನಗುತಲಿ ಮನಸನ್ನ ಸೆಳೆಯೋಳೆ
ಗಲಗಲ ಗೆಜ್ಜೆ ದನಿಯೋಳೆ- ನನರಾಣಿ-
ಬಲವಂದು ಬಳಿಯೆ ನಿಲಬಾರೆ

ಥಟ್ಟಂತ ನಲಿನಲಿದು ಹರುಷವ ಹರಿಸೋಳೆ
ಪಟ್ಟಂತ ತಿರುತಿರುಗಿ ಮರೆಯಾಗಿ- ನನರಾಣಿ
ಕಟ್ಟ್ಯಾssಗ ಮೈದುಂಬಿ ಮೆರೆಯೋಳೆ

ಹಿಂದಿಲ್ಲ ಮುಂದಿಲ್ಲ ಒಬ್ಬಂಟಿ ನಾನಿಂದು
ಬಂದಿಲ್ಲಿ ಜೋಡಿ ನೀನಾಗೆ- ನನರಾಣಿ-
ನಿಂದೆನ್ನ ಬಾಳ ಉಸಿರಾಗೆ

ಹಗಲೇನs ಇರುಳೇನs ಪ್ರೇಮಕ್ಕೆ ಹಂಗೇನs
ಸೊಗಲಾಡಿ ಸರಿದು ಬಾರಿಲ್ಲೆ- ನನರಾಣಿ-
ಜಗದಾಗೆ ನಿನ್ಹಾಂಗೆ ಯಾರಿಲ್ಲೆ

ಜೀವಕ್ಕೆ ಜೀವಾಗಿ ಹಸಿರಿಗೆ ಹಸೆಯಾಗಿ
ಶಿವನೆತ್ತಿಯಿಂದ ಹರಿದೋಳೆ- ನನ'ಗಂಗಿ'-
'ಪರ್ವತ'ನ ಪ್ರೀತಿ ಒಪ್ಪಿಸಿಕೋ

(೧೩-ಸೆಪ್ಟೆಂಬರ್-೨೦೦೧)

Friday, 13 February 2009

ಜೋಡಿ ಗೀತೆಗಳಲ್ಲೊಂದು- ಅಕ್ಕರೆ ಹರಿದಾಗ...



ಸಂಜೀಗಿ ಮಲ್ಲೀಗಿ ಅರಳ್ಯಾವ ಬೆಳ್ಳಾಗೆ
ಈಗೆಲ್ಲಿಗ್ಹೊಂಟ್ಯೋ ನನರಾಯ- ನೋಡಲ್ಲಿ-
ಮಿಣುಕಾಡೊ ಕಣ್ಣು ನಗತಾವ

ಹೀಂಗ್ಹೀಂಗೆ ಬಂದಿದ್ದೆ, ಹಾಂಗ್ಹಾಂಗೇ ಹೊಂಟೆದ್ದೆ
ಬ್ಯಾಸರಿಕೆ ಯಾಕೋ ನನರಾಯ- ಒಂದಾರೆ-
ತೋಳ್ದಿಂಬಿಗೊರಗಿ ನೋಡೆಂದೆ

ದಿನವೆಲ್ಲ ಓಡ್ಯಾಡಿ ದಣಿವಾಗಿ ಬಂದೀಯೆ
ಒಂದೀಟು ಅಡ್ಡಾಗು ನನರಾಯ- ನಿಂಗಿಂಥ-
ಆತುರದ ಕಾರ್ಯ ಬ್ಯಾಡೇಳು

ಕಾಲಿಗೆ ನೀರ್ಕೊಡುವೆ, ಕೈಯೊಳಗೆ ಕೈಯಿಡುವೆ
ಅಕ್ಕರೆ ಮಳೆಗರೆವೆ ನನರಾಯ- ಕಣ್ಣಲ್ಲಿ-
ಕಣ್ಣಿರಿಸಿ ನಗಬಾರೊ ಪ್ರೀತೀಲೆ

ಆಸರಿಗೆ ಎಳನೀರ ಆರಿಸಿ ಅತ್ತಿಡುವೆ
ಇನಿಮಾವು ಉಣಲಿಡುವೆ ನನರಾಯ- ನೀನಿಂದು-
ತಾಂಬೂಲ ರಾಗದ ಸವಿನೋಡೊ

ಗೋಧೂಳಿ ಕೆಂಬಣ್ಣ ಕೆನ್ನೀರ ಮಾಡಿಟ್ಟು
ದಿಟ್ಟಿಯ ತೆಗೆಯುವೆ ನನರಾಯ- ಬಾ ಇಲ್ಲಿ-
ಅತ್ತಿತ್ತ ನೋಡೋ ಹಂಗ್ಯಾಕೋ

ಹಚ್ಚಾನೆ ಹಾಸಿರುವೆ ಹಚ್ಚಾಡ ನಿಂಗಾಗಿ
ಅಚ್ಚು-ಮೆಚ್ಚಿನಲೇ ನನರಾಯ- ನೀನೀಗ-
ಮೆಚ್ಚುಗೆ ಬೀರಿ ಒರಗೊಮ್ಮೆ

ಅರುಣನ ಹೊಂಬಣ್ಣ ರಂಗನ್ನೆ ಹೊದೆಸುವೆ
ತಂಗಾಳಿ ತೊಟ್ಟಿಲಲಿ ನನರಾಯ- ನಿನ್ನನ್ನು-
ಜೋಗುಳ ಹಾಡಿ ಮಲಗಿಸುವೆ

ಮೊಗ್ಗೀಗೆ ಜೀವಾದೆ ಕಣ್ಣೀನ ಹೂವಾದೆ
ಹಸಿರಿಗೆ ನೀ ಉಸಿರು ನನರಾಯ- ಬೆಳಕಾಗಿ-
ಬೇಕಾದೆ ನೀನು ಜಗಕೆಲ್ಲ

ಆ ಶಿವನ ಹಣೆಗಣ್ಣು, ಆ ಹರಿಯ ತಿರುಚಕ್ರ
ನೀನಲ್ಲವೇನೋ ನನರಾಯ- 'ದಿನಪತಿ'ಯೆ
'ಭೂಸತಿ'ಯ ಪ್ರೀತಿ ಒಪ್ಪಿಸಿಕೋ

(೦೬-ಸೆಪ್ಟೆಂಬರ್-೨೦೦೧)