ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday, 20 May 2008

ಬೇಕಾಗಿತ್ತು....

Monday, June 25, 2007

ಬೇಕಾಗಿತ್ತು ಒಂದಿಷ್ಟೇ ಇಷ್ಟು
ನೀರು, ಗಾಳಿ, ಬೆಳಕು
ಕರಗುವಷ್ಟು ಕೊಟ್ಟೆಯಲ್ಲ
ಉಸಿರಾರುವವರೆಗೂ

ಯಾರಿಗೂ ಇಲ್ಲವೆನ್ನದೆ
ನೆರಳಾದೆ, ಮನೆಯಾದೆ
ಕರುಳು ನೆನೆಯುವಂತೆ
ನಿಂತಿದ್ದೇನೆ, ಖಾಲಿ ಮನ

ದೇವರಾಜ್ಯದಲ್ಲಿ ತಾಳ್ಮೆಯಿದೆ
ಕತ್ತಲಿಲ್ಲ, ಸತ್ಯವಿದೆ
ಆವರಿಸುವ ನಿರ್ಲಿಪ್ತದಲ್ಲೂ
ಇನ್ನಾರದೋ ಬಾಳ್ವೆಯಿರಲಿ

ಬೇಕಾಗಿತ್ತು ಇನ್ನೊಂದೇ ಒಂದು
ದಿನ, ಘಂಟೆ, ನಿಮಿಷ
ನಗುವಿಗೆ ದನಿಯಾಗಲು
ಮಡಿಲ ಮಗುವಾಗಲು
(೧೩-ಜೂನ್-೨೦೦೭)
{"ಚಿತ್ರ-ಕವನ"ದಲ್ಲಿ ಒಂದು ಚಿತ್ರಕ್ಕೆ ಬರೆದ ಕವನ}
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 2:35 PM
Labels:

10 ಪತ್ರೋತ್ತರ:

Anonymous said...
'karuLu neneyuvaMte niMtiddEne...'
aagalE hELida haage, ninneya saMje saarthakavaagittu.
heegE bareetaa iri.
-vikram hathwar
June 25, 2007 5:05 PM

suptadeepti said...
ಧನ್ಯವಾದಗಳು ವಿಕ್ಕಿ. ನೀವೆಲ್ಲ ಹೀಗೇ ನನಗೆ ರೆಕ್ಕೆ ಕಟ್ಟಿ, ಒಂದು ದಿನ ಹಾರಿ ಹೋಗುತ್ತೇನೆ....! :)
June 25, 2007 11:07 PM

ಸುಶ್ರುತ ದೊಡ್ಡೇರಿ said...
ಹೊಸ ಕವಿತೆ ಬರೀರಿ ಅಂದ್ರೆ ಅಲ್ಲಿ ಬರ್ದಿದ್ದನ್ನೆ ಇಲ್ಲಿ ಹಾಕ್ತೀರಾ ಇಲ್ಲಿ ಬರ್ದಿದ್ದನ್ನೇ ಅಲ್ಲಿ ಹಾಕ್ತೀರಲ್ರೀ?? :-[
June 26, 2007 12:47 AM

suptadeepti said...
@ಸುಶ್: ಅಲ್ಲಿ ಬರ್ದಿದ್ದನ್ನ ಓದಿರೋರು ಇಲ್ಲೂ ಓದಿದ್ರೆ ತಪ್ಪೇನಿಲ್ಲ. ಜೊತೆಗೆ, ಅಲ್ಲಿ ಬರದಿರೋರೂ ಇಲ್ಲಿ ಬರ್ತಾರೆ, ಅದೂ ನನಗೆ ಗೊತ್ತು. ಹೊಸಾ ಕವಿತೆ? ಇದಂತೂ ಹೊಸದೇ... ಇನ್ನೂ ಇನ್ನೂ ಕವಿತೆಗಳೇ ಬರೋದು ಬಿಡಿ. ಬೇಜಾರಾಗೋ ತನಕ ಅವನ್ನೇ ಬಡಿಸ್ತೇನೆ...!
June 26, 2007 9:25 AM

sritri said...
ನೀವೆಲ್ಲ ಹೀಗೇ ನನಗೆ ರೆಕ್ಕೆ ಕಟ್ಟಿ, ಒಂದು ದಿನ ಹಾರಿ ಹೋಗುತ್ತೇನೆ....!
- ಹಾರಲು ತಯಾರಾಗುತ್ತಲೇ ಇದ್ದೀಯಲ್ಲಾ! :)
June 26, 2007 9:51 AM

suptadeepti said...
@ ಶ್ರೀತ್ರಿ: "ಹಾರಲು ತಯಾರಾಗುತ್ತಲೇ ಇದ್ದೀಯಲ್ಲಾ! :)"
ನಿಜ, ನಿಂತಲ್ಲೇ ನಿಲ್ಲಲಾಗದ ಬದುಕು ನನ್ನದು. ಬೇರೂರಲು ಎಷ್ಟು ಪ್ರಯತ್ನ ಪಟ್ಟರೂ ಜೀವನ ಎಂಬ ಗಾಳಿ ಬದುಕಿನ ಪಟವನ್ನ ಎತ್ತೆತ್ತಲೋ ಹಾರಿಸುತ್ತಲೇ ಇದೆ. ಸಂದ ಹಾದಿಯ ನೆನಪು ಮರೆತಿಲ್ಲ, ಮರೆಯುವುದೂ ಇಲ್ಲ. ಅದಷ್ಟೇ ನೆಮ್ಮದಿ.
June 26, 2007 10:11 AM

Jagali Bhagavata said...
ಹ್ಞೂ ಸುಶ್ರುತ..ಚೆನ್ನಾಗಿ ತರಾಟೆಗೆ ತಗೊಂಡಿದೀಯಾ. ನಿನಗೆ ನನ್ನ ಸಂಪೂರ್ಣ 'ನೈತಿಕ' ಬೆಂಬಲವಿದೆ.:-)
ಸುಪ್ತದೀಪ್ತಿ....ಹೊಸ ಕವನ ಬರೀರಿ. ಹಳೆದು ಬೇಡ ನಮಗೆ:-))
June 26, 2007 8:57 PM

suptadeepti said...
@ ಭಾಗವತ: "ನನ್ನ ಸಂಪೂರ್ಣ 'ನೈತಿಕ' ಬೆಂಬಲವಿದೆ.:-)"-- ಯಾಕೋ ಇಲ್ಲಿ ಸಂಶಯಾತ್ಮಕವಾಗಿದೆ ವ್ಯವಹಾರ.
ನೈತಿಕತೆ ಇಲ್ಲದವರಿಗೆ ನೈತಿಕ ಬೆಂಬಲವೋ ಅಥವಾ, ನೈತಿಕತೆ ಇಲ್ಲದವರ ನೈತಿಕ ಬೆಂಬಲವೋ?
ಹೊಸದೋ, ಹಳೇದೋ, ನಾನು ತಾರೀಖು ಬರ್ದ್ರೆ ಮಾತ್ರ ನಿಮಗೆ ಗೊತ್ತಾಗೋದು ತಾನೆ?
ಮೊದಲ ಸಾರಿ ಓದೋರಿಗೆ ಯಾವಾಗ ಬರೆದದ್ದಾದರೆ ಏನು?
June 26, 2007 9:11 PM

ಅರ್ಚನಾ said...
wawh...eshtu sogasada kavana :-)
June 29, 2007 8:19 PM

suptadeepti said...
ಧನ್ಯವಾದಗಳು ಅರ್ಚನಾ. ಹೀಗೇ ಬರುತ್ತಿರಿ.
June 29, 2007 8:21 PM

ಹೇಳು ಮನಸೇ

Monday, June 18, 2007

(೨೦೦೨-ರ ಅಕ್ಟೋಬರಿನಲ್ಲಿ ದಟ್ಸ್-ಕನ್ನಡ ಮತ್ತು ಸಪ್ನ ಬುಕ್ ಹೌಸ್ ಜಂಟಿಯಾಗಿ ನಡೆಸಿದ್ದ "ಜಾಗತಿಕ ದೀಪಾವಳಿ ಕವನ ಸ್ಪರ್ಧೆ"ಯಲ್ಲಿ ಭಾಗವಹಿಸಿ, ೧೦೩೪ ಕವನಗಳಲ್ಲಿ ಮೊದಲ ಸ್ಥಾನ ಗಳಿಸಿದ ಸಾಲುಗಳು)
(ಶ್ರೀ ಗುರುರಾಜ ಮಾರ್ಪಳ್ಳಿಯವರ ಸಂಗೀತ ನಿರ್ದೇಶನದ "ಹೇಳು ಮನಸೇ"- ದ್ವನಿಮುದ್ರಿಕೆಯಲ್ಲಿದೆ.
ಹಾಡಿದವಳು- ದಿವ್ಯಾ. ಜಿ. ಯು., ಮೂಡಬಿದ್ರೆ.)


ನಗುವೆಂದು ಜೊತೆಯಾಗಿ ನಕ್ಕಿದ್ದು ಹುಸಿಯಾಗೆ
ಭಾವಕ್ಕೆ ಏನರ್ಥ, ಹೇಳು ಮನಸೆ?
ಅರಿವೆಂದು ಹೀರಿದ್ದು ಹಗುರಾಗಿ ಹರಿದಾಗ
ಜ್ಞಾನಕ್ಕೆ ಏನರ್ಥ, ಹೇಳು ಮನಸೆ?

ಒಳಗೊಂದು ಹೊರಗೊಂದು ನುಡಿಯೊಂದು ನಡೆಯೊಂದು
ನೈಜತೆಗೆ ಏನರ್ಥ, ಹೇಳು ಮನಸೆ?
ಒಗೆತನವ ಕಡೆಗಣಿಸಿ ಕಡಿದಿಕ್ಕಿ ಒಗೆದಿರಲು
ಸ್ನೇಹಕ್ಕೆ ಏನರ್ಥ, ಹೇಳು ಮನಸೆ?

ಹಾಲೆಂದುಕೊಂಡಿದ್ದು ವಿಷಗಿಡದ ರಸವಾಗೆ
ಜೀವನಕೆ ಏನರ್ಥ, ಹೇಳು ಮನಸೆ?
ಗೋವೆಂದುಕೊಂಡಿದ್ದು ನಖವೆತ್ತಿ ಗರ್ಜಿಸಲು
ಮೌಲ್ಯಕ್ಕೆ ಏನರ್ಥ, ಹೇಳು ಮನಸೆ?

ಬಾಳ ಭಂಗುರತನದಿ ನಾಳೆ ಬಲ್ಲವರಾರು
ಮಾನವತ್ವದ ತತ್ವವೇನು ಮನಸೆ?
(೧೮-ಅಕ್ಟೋಬರ್-೨೦೦೨)

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:46 PM
Labels: ,

5 ಪತ್ರೋತ್ತರ:

ಮನಸ್ವಿನಿ said...
ನಿಮ್ಮ ಕವನಗಳಲ್ಲಿ ನಾನು ಹೆಚ್ಚು ಇಷ್ಟ ಪಡುವ ಕವನ ಇದು. ತುಂಬಾನೆ ಇಷ್ಟ ನನಗೆ.
"ಅರಿವೆಂದು ಹೀರಿದ್ದು ಹಗುರಾಗಿ ಹರಿದಾಗ
ಜ್ಞಾನಕ್ಕೆ ಏನರ್ಥ, ಹೇಳು ಮನಸೆ?
ಒಳಗೊಂದು ಹೊರಗೊಂದು ನುಡಿಯೊಂದು ನಡೆಯೊಂದು
ನೈಜತೆಗೆ ಏನರ್ಥ, ಹೇಳು ಮನಸೆ?
ಒಗೆತನವ ಕಡೆಗಣಿಸಿ ಕಡಿದಿಕ್ಕಿ ಒಗೆದಿರಲು
ಸ್ನೇಹಕ್ಕೆ ಏನರ್ಥ, ಹೇಳು ಮನಸೆ?
ಹಾಲೆಂದುಕೊಂಡಿದ್ದು ವಿಷಗಿಡದ ರಸವಾಗೆ
ಜೀವನಕೆ ಏನರ್ಥ, ಹೇಳು ಮನಸೆ?"
ವಾಹ್ ! ಎಷ್ಟು ಅರ್ಥಪೂರ್ಣವಾಗಿದೆ! ನಿಮ್ಮ ಕವನಗಳ ಅಭಿಮಾನಿ ನಾನು. ಬರೆಯುತ್ತಾ ಇರಿ
ಪ್ರೀತಿಯಿಂದ
ಮನಸ್ವಿನಿ ( ಸು)
June 18, 2007 9:54 PM

parijata said...
ಮೊನ್ನೆ ಮೊನ್ನೆ ಈ ಪದ್ಯವನ್ನೇ ಜ್ಞಾಪಿಸಿಕೊಳ್ಳುತ್ತಿದ್ದೆ. Thatskannada ದಲ್ಲಿ ಹುಡುಕೋಣವೆಂದುಕೊಳ್ಳುತ್ತಿದ್ದಾಗಲೇ ಇಲ್ಲಿ ಪ್ರಕಟಿಸಿದ್ದೀರಿ. ಧನ್ಯವಾದಗಳು.
June 18, 2007 11:55 PM

suptadeepti said...
@ಮನಸ್ವಿನಿ: ಧನ್ಯವಾದಗಳು. ಬರವಣಿಗೆ ಅನಿವಾರ್ಯ ನನಗೆ. ಮೆಚ್ಚುಗೆ ಓದುಗರ ದೊಡ್ಡತನ.

@ಪಾರಿಜಾತ: ನಿಮ್ಮ ಧನ್ಯವಾದಕ್ಕೆ ಪ್ರತಿವಂದನೆಗಳು. ಹೀಗೇ ಬರುತ್ತಿರಿ.
June 21, 2007 9:04 PM

Satish said...
ಇತ್ತೀಚೆಗೆ ಎಲ್ಲೋ ಪಬ್ಲಿಷ್ ಆದ ಹಾಗಿತ್ತು ಅಂದುಕೊಂಡು ಓದಿದ್ರೆ ೨೦೦೨ ಅಂತ ಕಾಣಿಸ್ತು...
ಅಬ್ಬಾ ಐದು ವರ್ಷಗಳು ಕಳೆದುಹೋದವೇ :-)
July 1, 2007 8:55 PM

suptadeepti said...
@ಸತೀಶ್: "ಅಬ್ಬಾ ಐದು ವರ್ಷಗಳು ಕಳೆದುಹೋದವೇ"-- ಹೌದು, ಇದೇ ಬರುವ ಅಕ್ಟೋಬರಿಗೆ ಇದನ್ನು ಬರೆದು ಐದು ವರ್ಷಗಳೇ ಸವೆದಿರುತ್ತವೆ. ಹಿಂದಿರುಗಿ ಈ ಐದು ವರ್ಷಗಳನ್ನು ನೋಡಿದಾಗ ಕಾಣುವ ಹೆಜ್ಜೆಗಳು ಹಲವಾರು: ಕೆಲವು ಲಘುತರ, ಕೆಲವು ಗುರುತರ, ಮತ್ತೆ ಕೆಲವು ಮಹತ್ತರ...

ಕಾಲಾಯ ತಸ್ಮೈ ನಮಃ
July 1, 2007 9:23 PM