ಸುತ್ತೆಲ್ಲ ಎಂತೆಂಥದೋ ಮರಗಳಿದ್ದ ಹಾಡಿಯಲ್ಲಿ, ಮುಳ್ಳು ಪೊದರುಗಳನ್ನೂ ಸಣ್ಣಪುಟ್ಟ ಕಾಡುಮರಗಳನ್ನೂ ಎಳೆದುರುಳಿಸಿ, ಎತ್ತರ ದಿಣ್ಣೆಗಳನ್ನು ಸಮತಟ್ಟುಗೊಳಿಸಿ ಇಡೀ ಪ್ರದೇಶ ಸಪಾಟಾಗಿ ಖಾಲಿ ಖಾಲಿ ಕಾಣುವಂತೆ
ವ್ಯವಸ್ಥೆಗೊಳಿಸುತ್ತಿದ್ದರು. ದೊಡ್ಡ ಹಳದಿ ಬಣ್ಣದ ಜೆಸಿಬಿ ಭೀಮನ ಹಾಗೆ ಮರಗಳನ್ನು ಬುಡಮೇಲು
ಮಾಡಿ ಎತ್ತಿ ದೂಡಿ ಬೀಸಿ ಒಗೆದು ಮಣ್ಣನ್ನು ಸಡಿಲಿಸಿ ಹಾಕುತ್ತಿತ್ತು. ಎರಡಡಿ ಉದ್ದಗಲಗಳ
ಬಕೆಟ್ಟಿನಿಂದ ಅಗೆದುಹಾಕಿ, ಮತ್ತದರಿಂದಲೇ ಮಣ್ಣು ಹೇರಿ
ತುಂಬಿಕೊಟ್ಟದ್ದನ್ನು ತಗ್ಗಿನ ಪ್ರದೇಶಕ್ಕೆ ಸಾಗಿಸಿ ತನ್ನ ಬೆನ್ನನ್ನೇ ಮೇಲೇರಿಸಿ ಮಣ್ಣಿಳಿಸುವ
ಲಾರಿ - ಟಿಪ್ಪರ್ - ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ
ಧೂಳೆಬ್ಬಿಸಿಕೊಂಡು ಓಡಾಡುತ್ತಿತ್ತು. ಸುತ್ತೆಲ್ಲ ಅಗೆದ ಮಣ್ಣಿನ ನಡುವೆ ಗಾಳಿ ಬಿಸಿಲಿಗೆ
ಒಡ್ಡಿಕೊಂಡು ಒದ್ದಾಡುತ್ತಿದ್ದ ಮಣ್ಣುಹುಳಗಳನ್ನು ಸ್ವಾಹಾ ಮಾಡಿ ಹೊಟ್ಟೆತುಂಬಿಸಿಕೊಳ್ಳಲು ಕೆಂಪು
ಮಣ್ಣಿನ ನಡುವೆ ಉದ್ದುದ್ದ ಕಾಲುಗಳ ಗೀರುಹೆಜ್ಜೆ ಗುರುತೂರುವ ಬೆಳ್ಳಕ್ಕಿಗಳ ಗುಂಪು. ಧೂಳು.
ಬಿಸಿಲು. ಸೆಖೆ. ಸದ್ದು, ನೋಟಸುಖ- ಈ ಯಾವುದಕ್ಕೂ ಕೊರತೆಯಿಲ್ಲದ ಆ
ಜಾಗದಲ್ಲಿ ಕಡಿಮೆಯಿದ್ದದ್ದು ನೆರಳೇ!
ಇವೆಲ್ಲದರ ನಡುವೆ, ಎಲ್ಲಿಂದಲೋ ತೂರಿ ಬಂದ ಒಂದು ಪುಟ್ಟ ತಂಗಾಳಿ ಅದೇನೋ ಅಲೌಕಿಕ ಘಮ ಹರಡಿತು. ದೀರ್ಘವಾಗಿ
ಆಘ್ರಾಣಿಸಿದ ಅವಳು, ತಾನು ನಿಂತಲ್ಲಿ ನೆರಳಿತ್ತ ಮರವನ್ನೊಮ್ಮೆ
ನೋಡಿದಳು. ತಲೆ ಮೇಲೆ ಹೊದ್ದ ದುಪ್ಪಟ್ಟವನ್ನು ಎಳೆದು ತೆಗೆದು ಕಾರಿನ ಸೀಟಿಗೆ ಎಸೆದಳು. ಆಗಷ್ಟೇ
ಲಾಸ್ಯವಾಡಿದ ತಂಗಾಳಿಗೆ ನಕ್ಷತ್ರಗಳನ್ನೇ ಕೆಳಗುರುಳಿಸುವ ತಾಕತ್ತಿತ್ತೇ? ಬಿಳಿ ಬಿಳಿ ಪುಟಾಣಿ ಚುಕ್ಕಿಗಳು ಕೆಂಪು ಹುಡಿಮಣ್ಣಿನ ನೆಲದ ತುಂಬ ಹರಡಿಕೊಂಡಿದ್ದವು.
ಮೆಲ್ಲನೆ ಬಗ್ಗಿ ಒಂದನ್ನು ಜೋಪಾನವಾಗಿ ಎತ್ತಿಕೊಂಡಳು, ಕೈ
ಸುಟ್ಟೀತೆನ್ನುವ ಜಾಗ್ರತೆಯಲ್ಲಿ ಎಂಬಂತೆ. ಆದರೆ, ಅದು ತಂಪು ತಂಪು. ಘಮ
ತುಂಬಿದ ತಂಪು. ತಲೆ ತಗ್ಗಿಸಿ ಬಕುಳಗಳನ್ನು ಬೊಗಸೆಯಲ್ಲಿ ತುಂಬಿಕೊಂಡಳು.
ಮತ್ತೊಂದು ತಂಗಾಳಿ ತೂರಿ ಬಂದಾಗ, ಎಡಕ್ಕೆ ಎಗರಾಡುತ್ತಿದ್ದ ಜೆ.ಸಿ.ಬಿ.; ಬಲಕ್ಕೆ
ಬುಸುಗುಡುತ್ತಿದ್ದ ಟಿಪ್ಪರ್; ಇವೆರಡರ ನಡುವಲ್ಲೇ ತುಂಬಿಸಿದ್ದ ಕೆಂಪು
ಮಣ್ಣಿನ ಜೆಸಿಬಿ ಬಕೆಟ್’ನ ಕೀರುಸಾಲುಗಳಲ್ಲಿ ಅಡಗುವಂತೆ ಮತ್ತೆ ಬಿದ್ದ ಬಕುಳಗಳೆಲ್ಲ ಅವಳ
ಬೊಗಸೆಯಲ್ಲಿ ಒದ್ದೆಯಾಗುತ್ತಿದ್ದವು; ತಂಗಾಳಿಯ ಠಂಡಾ ಠಂಡಾ ಕೂಲ್ ಕೂಲ್
ಸಾಕಾಗಿಲ್ಲವೆಂದು ಗಾಳಿಯನ್ನು ದೂರುತ್ತಾ.
ಬೊಗಸೆ ತುಂಬಾ ತುಂಬಿಕೊಂಡದ್ದನ್ನು ಹಾಗೇ ನೋಡು
ನೋಡುತ್ತಾ ಅದೇ ಮರದ ಬುಡಕ್ಕೆ ಒರಗಿದಳು. ಕೈತುಂಬಾ ಬಕುಳದ ಹೂಗಳು. ಘಮದಮಲಿನಲ್ಲಿ ಕಳೆದೇಹೋದಳು.
ಮನದೊಳಗೆ ಮಧುರಾಲಾಪ. ನಲವತ್ತು ವರುಷಗಳ ಹಿಂದೆ ತನ್ನ ಮದುವೆಯಲ್ಲಿ ದಪ್ಪನೆಯ ಸುಗಂಧರಾಜ ಮಾಲೆಯ
ನಡುವೆಯೂ ಘಮಬೀರಿದ್ದ ಬಕುಳದ ಮಾಲೆ ಕಣ್ಣು ಮಿಟುಕಿಸಿತು. ಅದಕ್ಕೂ ಮೊದಲು ಅದೆಷ್ಟು ಸಲ
ಬಕುಳಗಳನ್ನು ಆಯ್ದು ತಂದು ಸೂಜಿ ಹಿಡಿದು ಪೋಣಿಸಿ ಮುಡಿದದ್ದಿಲ್ಲ!
ಹೋ! ಗದ್ದಲ ಕೇಳಿ ಎಚ್ಚರಾದವಳ ಮುಂದೆ ಅವರು ನಿಂತಿದ್ದಾರೆ. ಇವಳ ಕಣ್ಣಲ್ಲಿ ಗಾಬರಿ. ಜೆಸಿಬಿ, ಟಿಪ್ಪರ್, ಎರಡೂ ನಿಂತಿವೆ. ನಿಲ್ಲಿಸುವ ಸಮಯವಾಗಿಲ್ಲ. ಮತ್ತೆ? ತಾನೊರಗಿದ
ಮರದ ಬುಡದಲ್ಲೇ ಜೆಸಿಬಿಯ ಬಕೆಟ್ ಕೂಡಾ ಒರಗಿದೆ. ಟಿಪ್ಪರ್ ಅತ್ತಲಿಂದ ನಿಂತಿದೆ. ಇನ್ನೊಮ್ಮೆ
ಮಣ್ಣು ಸೆಳೆಯಬೇಕು, ಜೆಸಿಬಿ ಬಕುಳದ ಬುಡಕ್ಕೇ ಬಕೆಟ್ ಹಾಕಿದೆ;
ಅವರೆಲ್ಲ ಹೋ! ಎಂದಿದ್ದಾರೆ. ಮೈ ಜುಂ ಎಂದಾಗಿ ಎದ್ದವಳ ಕೈಯಲ್ಲಿದ್ದ ಬಕುಳದ
ಹೂಗಳ ನಡುವಿಂದ ಪುಟ್ಟದೊಂದು ಚಿಟ್ಟೆ ಹಾರಿ ಹಾರಿ ಜೆಸಿಬಿ ಮತ್ತು ಟಿಪ್ಪರ್’ಗಳ ಸುತ್ತ ಒಂದು
ಸುತ್ತು ಸುತ್ತಿ, ಅವರಿಗೆಲ್ಲ ಹಲೋ ಹೇಳಿ, ಇವಳ
ಬೆನ್ನ ಹಿಂದೆಯೇ ಇದ್ದ ಮರದ ಪುಟ್ಟಪುಟಾಣಿ ಎಲೆಗಳ ನಡುವೆ ಗಾಳಿಯಲಾಡುತ್ತಾ ತೇಲುತ್ತಾ
ಅಂತರಿಕ್ಷದಲ್ಲಿ ಅಂತಃರ್ಧಾನವಾಯ್ತು. ಜೆಸಿಬಿ, ಟಿಪ್ಪರ್, ಮತ್ತುಳಿದವರು ಮರ ಬಿಟ್ಟು ದೂರ ಸರಿದರು. ಅವಳು ಮತ್ತೊಮ್ಮೆ ಬಕುಳಧ್ಯಾನಕ್ಕೆ
ಸಜ್ಜಾದಳು.
*****